ADVERTISEMENT

ಮದ್ಯ ದುರಂತ: DMK ನಾಯಕನ ವಿರುದ್ಧ ₹1 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಅಣ್ಣಾಮಲೈ

ಪಿಟಿಐ
Published 27 ಜೂನ್ 2024, 5:20 IST
Last Updated 27 ಜೂನ್ 2024, 5:20 IST
ಕೆ. ಅಣ್ಣಾಮಲೈ
ಕೆ. ಅಣ್ಣಾಮಲೈ   

ಚೆನ್ನೈ: ‘ತಮಿಳುನಾಡಿನ ಕಲ್ಲಕುರಿಚ್ಚಿ ವಿಷಯುಕ್ತ ಮದ್ಯ ಸೇವನೆ ದುರಂತಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸುಳ್ಳು ಪ್ರಚಾರ ಮಾಡಿದ್ದಕ್ಕಾಗಿ ಡಿಎಂಕೆ ಪಕ್ಷದ ಹಿರಿಯ ನಾಯಕ ಆರ್‌.ಎಸ್‌.ಭಾರತಿ ವಿರುದ್ಧ ₹1 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ’ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

ಅಣ್ಣಾಮಲೈ ಪರ ವಕೀಲ ಆರ್‌.ಸಿ. ಪೌಲ್‌ ಕನಕರಾಜ್ ಅವರು ಭಾರತಿ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದು, ಈ ಪ್ರತಿಯನ್ನು ಅಣ್ಣಾಮಲೈ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ವಿಷಯುಕ್ತ ಮದ್ಯ ಸೇವಿಸಿ 60ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಡಿಎಂಕೆಯು ತನ್ನ ದುರಾಡಳಿತದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದೆ. ನನ್ನ ಮೇಲೆ ನಿಂದನಾತ್ಮಕ, ಸುಳ್ಳು ಪ್ರಚಾರ ಮಾಡಿದ್ದಕ್ಕಾಗಿ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌.ಎಸ್‌.ಭಾರತಿ ಅವರಿಗೆ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಲಾಗಿದೆ’ ಎಂದು ಅಣ್ಣಾಮಲೈ ಹೇಳಿದ್ದಾರೆ.

ADVERTISEMENT

‘ಸುಳ್ಳು ಹೇಳಿದ್ದಕ್ಕಾಗಿ ₹1 ಕೋಟಿ ಪರಿಹಾರ ನೀಡಲು ತಿಳಿಸಲಾಗಿದೆ. ಈ ಹಣವನ್ನು ಕರುಣಾಪುರಂ, ಕಲ್ಲಕುರಿಚ್ಚಿಯಲ್ಲಿ ಮದ್ಯ ವರ್ಜನ ಶಿಬಿರಗಳನ್ನು ನಿರ್ಮಿಸಲು ಬಳಸಲಾಗುವುದು’ ಎಂದು ಹೇಳಿದ್ದಾರೆ.

‘ಲೀಗಲ್ ನೋಟಿಸ್ ಸ್ವೀಕರಿಸಿದ ಮೂರು ದಿನಗಳಲ್ಲಿ ಬೇಷರತ್ ಕ್ಷಮೆಯಾಚಿಸುವಂತೆ ಭಾರತಿ ಅವರಿಗೆ ಅಣ್ಣಾಮಲೈ ತಿಳಿಸಿದ್ದಾರೆ’ ಎಂದು ವಕೀಲ ಕನಕರಾಜ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.