ಉಚಾನಾ, ಹರಿಯಾಣ: ರಾಷ್ಟ್ರೀಯವಾದದ ವಿಷಯ ಇಟ್ಟುಕೊಂಡು ಹರಿಯಾಣ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ‘ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದು ಕಾಂಗ್ರೆಸ್. ಪಕ್ಷ ಅಧಿಕಾರದಲ್ಲಿದ್ದಾಗ ಪಾಕಿಸ್ತಾನ ಒಡೆದು ಹೋಳಾಯಿತು’ ಎಂದು ಹೇಳಿದ್ದಾರೆ.
‘ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿ. ಜೆಜೆಪಿ ಹಾಗೂ ಐಎನ್ಎಲ್‌ಡಿ ಪಕ್ಷಗಳು ಈಗ ಅಪ್ರಸ್ತುತ’ ಎಂದಿದ್ದಾರೆ. 90 ಸದಸ್ಯಬಲದ ವಿಧಾನಸಭೆಯಲ್ಲಿ 75ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದಾಗಿ ಬಿಜೆಪಿ ಇಟ್ಟುಕೊಂಡಿರುವ ಗುರಿ ಬಗ್ಗೆ ಉತ್ತರಿಸಿದ ಅವರು, ‘ಗಾಳಿ ತನ್ನ ದಿಕ್ಕು ಬದಲಿಸಿದೆ’ ಎಂದು ಉತ್ತರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿದ್ದು, ಪಕ್ಷ ಪೂರ್ಣ ಬಹುಮತ ಪಡೆದು ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಚುನಾವಣಾ ಸಮಿತಿ ಮುಖ್ಯಸ್ಥರೂ ಆಗಿರುವ ಹೂಡಾ ವ್ಯಕ್ತಪಡಿಸಿದ್ದಾರೆ.
370ನೇ ವಿಧಿ ವಿಚಾರವನ್ನು ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಬಳಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದತಿಯು ಕಾನೂನಿನ ಸ್ವರೂಪ ಪಡೆದಿದ್ದು, ಅದು ಚುನಾವಣಾ ವಿಷಯ ಅಲ್ಲ. ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಯೊಂದೇ ಈಗಿರುವ ವಿಷಯ’ ಎಂದಿದ್ದಾರೆ.
‘ಸಂಸತ್ ಚುನಾವಣೆಯ ವಿಷಯಗಳಿಗೂ, ವಿಧಾನಸಭಾ ಚುನಾವಣೆಯ ವಿಷಯಗಳಿಗೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಇಲ್ಲಿ ಸ್ಥಳೀಯ ವಿಷಯಗಳೇ ಮುಖ್ಯ. 154 ಭರವಸೆಗಳನ್ನು ಬಿಜೆಪಿ ನೀಡಿತ್ತು. ಆದರೆ ಈ ಪೈಕಿ ಒಂದನ್ನೂ ಈಡೇರಿಸಲಿಲ್ಲ. ಹೀಗಾಗಿ ರೈತರು, ವರ್ತಕರು, ಅಧಿಕಾರಿಗಳು ಹಾಗೂ ಕಾರ್ಮಿಕರಲ್ಲಿ ಬೇಸರವಿದೆ’ ಎಂದು ಹೂಡಾ ಆರೋಪಿಸಿದ್ದಾರೆ.
ಪಕ್ಷದ ಬಣ ರಾಜಕೀಯ ದೂರ ಮಾಡುವ ಸಲುವಾಗಿ ಕುಮಾರಿ ಸೆಲ್ಜಾ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ನೇಮಿಸಿತ್ತು. ಹೂಡಾ ಅವರಿಗೆ ಚುನಾವಣೆ ನಿರ್ವಹಣಾ ಸಮಿತಿಯ ಹೊಣೆ ವಹಿಸಲಾಗಿತ್ತು.
ಹೂಡಾ ಗೆಲುವಿನ ಹಾದಿ (ರೋಹ್ಟಕ್)
1999: ಜಯದ ಅಂತರ 11,958 ಮತ (54% ಮತಪ್ರಮಾಣ)
2004: ಜಯದ ಅಂತರ 1,03,635 ಮತ (97% ಮತಪ್ರಮಾಣ)
2009: ಜಯದ ಅಂತರ 72,100 ಮತ (80% ಮತಪ್ರಮಾಣ)
2014: ಜಯದ ಅಂತರ 47,185 ಮತ (60% ಮತಪ್ರಮಾಣ)
**
ರಾಷ್ಟ್ರದ ಹಿತಾಸಕ್ತಿಯಿಂದ ನಾವು ಕೈಗೊಂಡ ಕ್ರಮಗಳನ್ನು ಕೈಗೊಂಡಿದ್ದೇವೆ. ಇಂತಹ ನಿರ್ಧಾರ ಕೈಗೊಳ್ಳುವ ಛಾತಿ ಹಿಂದಿನ ಸರ್ಕಾರಗಳಿಗೆ ಇರಲಿಲ್ಲ.
-ನರೇಂದ್ರ ಮೋದಿ, ಪ್ರಧಾನಿ
**
ಎಲ್ಲರೂ ರಾಷ್ಟ್ರೀಯವಾದಿಗಳೇ. ಈ ದೇಶದಲ್ಲಿರುವ ಯಾರು ರಾಷ್ಟ್ರೀಯವಾದಿ ಅಲ್ಲ ಹೇಳೀ? ನನ್ನ ತಂದೆ ರಾಷ್ಟ್ರೀಯವಾದಿ, ತಾತ ಸ್ವಾತಂತ್ರ್ಯ ಹೋರಾಟಗಾರ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ.
-ಭೂಪಿಂದರ್ ಸಿಂಗ್ ಹೂಡಾ, ಕಾಂಗ್ರೆಸ್ ಚುನಾವಣಾ ಸಮಿತಿ ಮುಖ್ಯಸ್ಥ
**
1857ರ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದ ಶ್ರೇಯ ಸಾವರ್ಕರ್‌ಗೆ ಸಲ್ಲಬೇಕು. ಇತಿಹಾಸವನ್ನು ಪುನಃ ಬರೆಯುವ ಅಗತ್ಯವಿದೆ.
-ಅಮಿತ್ ಶಾ, ಕೇಂದ್ರ ಗೃಹಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.