ನವದೆಹಲಿ: ‘ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಅದನ್ನು ಪ್ರತ್ಯೇಕಿಸಲು ಮತ್ತು ಬೇರ್ಪಡಿಸಲು ಆಗದು’ ಎಂದು ಕಾಂಗ್ರೆಸ್ ಪಕ್ಷ ಮಂಗಳವಾರ ಪ್ರತಿಪಾದಿಸಿದೆ. ಈ ಪ್ರದೇಶದ ಕುರಿತು ಚೀನಾ ಮಾಡುತ್ತಿರುವ ಹಕ್ಕಿನ ಪ್ರತಿಪಾದನೆಯನ್ನು ನರೇಂದ್ರ ಮೋದಿ ಸರ್ಕಾರವು ಬಲವಾಗಿ ಖಂಡಿಸಬೇಕು ಎಂದು ಅದು ಆಗ್ರಹಿಸಿದೆ.
ಬೀಜಿಂಗ್‌ನ ಹೇಳಿಕೆಯನ್ನು ಭಾರತವು ‘ಅಸಂಬದ್ಧ’ ಮತ್ತು ‘ಹಾಸ್ಯಾಸ್ಪದ’ ಎಂದು ತಳ್ಳಿಹಾಕಿದ ನಂತರವೂ, ಅರುಣಾಚಲ ಪ್ರದೇಶ ‘ಯಾವಾಗಲೂ’ ತನ್ನ ಭೂ ಪ್ರದೇಶ ಎಂದು ಚೀನಾ ಸೋಮವಾರ ಮತ್ತೆ ಪ್ರತಿಪಾದಿಸಿದೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಅರುಣಾಚಲ ಪ್ರದೇಶವು ಭಾರತದ ಬೇರ್ಪಡಿಸಲಾಗದ, ಪ್ರತ್ಯೇಕಿಸಲಾಗದ ಭಾಗ’ ಎಂದು ಹೇಳಿದ್ದಾರೆ.
ಚೀನಾದ ಅತ್ಯುನ್ನತ ಕಚೇರಿಯು ತಿಂಗಳಲ್ಲಿ ನಾಲ್ಕನೇ ಬಾರಿಗೆ ಹಾಸ್ಯಸ್ಪದ ರೀತಿಯಲ್ಲಿ ಹೇಳಿಕೆಗಳನ್ನು ನೀಡಿದೆ. ಅರುಣಾಚಲ ಪ್ರದೇಶ ಮೇಲೆ ತನ್ನ ಹಕ್ಕು ಪ್ರತಿಪಾದಿಸುವ ಚೀನಾದ ಯಾವುದೇ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಬೇರೆ ದೇಶಗಳಿಗೆ ಸೇರಿದ ಸ್ಥಳಗಳನ್ನು ಮರುನಾಮಕರಣ ಮಾಡುವ ಮತ್ತು ಭೂ ಪ್ರದೇಶಗಳ ನಕ್ಷೆಗಳನ್ನು ಮರು ರೂಪಿಸುವ ಮೂಲಕ ಅಸಂಬಂಧ ಹಕ್ಕುಗಳನ್ನು ಪ್ರತಿಪಾದಿಸುವ ಚೀನಾದ ನಡೆಗಳು ಎಲ್ಲರಿಗೂ ತಿಳಿದಿವೆ ಎಂದು ಖರ್ಗೆ ಹೇಳಿದ್ದಾರೆ.
‘ಪಕ್ಷಾತೀತವಾಗಿ ನಾವು ಭಾರತದ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಒಟ್ಟಿಗೆ ಇದ್ದೇವೆ’ ಎಂದು ಅವರು ಹೇಳಿದ್ದಾರೆ. ಅದಾಗ್ಯೂ, 2020ರ ಜೂನ್ 19ರಂದು ಗಲ್ವಾನ್‌ನಲ್ಲಿ 20 ಭಾರತೀಯ ವೀರ ಸೇನಾನಿಗಳು ಪ್ರಾಣ ತ್ಯಾಗ ಮಾಡಿದಾಗ ಪ್ರಧಾನಿ ಅವರು ಚೀನಾಗೆ ಕ್ಲೀನ್ ಚೀಟ್ ನೀಡಿದ ಪರಿಣಾಮ, ಚೀನಾ ಹೀಗೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.
‘ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ತನ್ನ ಹಳ್ಳಿಗಳನ್ನು ನಿರ್ಮಿಸಿದೆ. ಗಡಿ ಸಮೀಪ ವಾಸಿಸುವ ನಮ್ಮ ಜನರನ್ನು ಅಪರಿಹರಿಸಿದೆ. ಆದರೆ ಮೋದಿ ಸರ್ಕಾರ ಚೀನಾ ಓಲೈಕೆ ನೀತಿಯಲ್ಲಿ ತೊಡಗಿದೆ. ಇದರಿಂದ ಅರುಣಾಚಲದಲ್ಲಿ ನಮ್ಮ ರಾಷ್ಟ್ರೀಯ ಭದ್ರತೆಗೆ ಕುತ್ತು ಎದುರಾಗಿದೆ’ ಎಂದು ಅವರು ಹೇಳಿದ್ದಾರೆ.
‘ಲಡಾಖ್ ಹೊರತುಪಡಿಸಿ, ಮೋದಿ ಅವರ ಚೀನಿ ಗ್ಯಾರಂಟಿಯು ಅರುಣಾಚಲ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಖರ್ಗೆ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.