ADVERTISEMENT

ಲೋಕಸಭೆಯಲ್ಲಿ ಧ್ವನಿ ಎತ್ತಲು ವಿಪಕ್ಷಗಳಿಗೆ ಅವಕಾಶ ಸಿಗುವ ನಂಬಿಕೆ ಇದೆ: ರಾಹುಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜೂನ್ 2024, 10:59 IST
Last Updated 26 ಜೂನ್ 2024, 10:59 IST
<div class="paragraphs"><p>ರಾಹುಲ್ ಗಾಂಧಿ </p></div>

ರಾಹುಲ್ ಗಾಂಧಿ

   

ನವದೆಹಲಿ: ಲೋಕಸಭೆಯ ಸ್ಪೀಕರ್‌ ಆಗಿ ಸತತ ಎರಡನೇ ಅವಧಿಗೆ ಆಯ್ಕೆಯಾಗಿರುವ ಓಂ ಬಿರ್ಲಾ ಅವರನ್ನು ಅಭಿನಂದಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಜನರ ಪರ ಧ್ವನಿ ಎತ್ತಲು ವಿರೋಧ ಪಕ್ಷಗಳಿಗೆ ಅವಕಾಶ ಸಿಗಲಿದೆ ಎಂದು ನಿರೀಕ್ಷಿಸುವುದಾಗಿ ಬುಧವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕರೂ ಆಗಿರುವ ರಾಹುಲ್, ಲೋಕಸಭೆ ಕಲಾಪಗಳು ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಆಶಿಸಿದ್ದಾರೆ.

ADVERTISEMENT

ಬಿರ್ಲಾ ಅವರನ್ನು ಉದ್ದೇಶಿಸಿ ಮಾತನಾಡಿರುವ ರಾಹುಲ್‌, 'ಸ್ಪೀಕರ್‌ ಚುನಾವಣೆಯಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ. ಇಡೀ ಇಂಡಿಯಾ ಮೈತ್ರಿಕೂಟದ ಪರವಾಗಿ ನಿಮಗೆ ಶುಭ ಕೋರುತ್ತೇನೆ' ಎಂದಿದ್ದಾರೆ.

'ಈ ಸದನವು ದೇಶದನ್ನು ಪ್ರತಿನಿಧಿಸುತ್ತದೆ. ಸರ್ಕಾರವು ರಾಜಕೀಯ ಶಕ್ತಿಯನ್ನು ಖಂಡಿತವಾಗಿಯೂ ಹೊಂದಿದೆ. ಆದರೆ, ವಿರೋಧ ಪಕ್ಷಗಳು ಸಹ ಜನರ ಧ್ವನಿಯನ್ನು ಪ್ರತಿನಿಧಿಸುತ್ತವೆ. ವಿರೋಧ ಪಕ್ಷಗಳು ನಿಮ್ಮ ಕೆಲಸಗಳಿಗೆ ನೆರವಾಗಲು ಬಯಸುತ್ತವೆ. ಸದನದಲ್ಲಿ ಮಾತನಾಡಲು ಅವಕಾಶ ಮಾಡಿಕೊಡುತ್ತೀರಿ ಎಂಬ ವಿಶ್ವಾಸದಲ್ಲಿದ್ದೇನೆ' ಎಂದು ಪುನರುಚ್ಚರಿಸಿದ್ದಾರೆ.

ವಿರೋಧ ಪಕ್ಷಗಳು ಕಳೆದ ಬಾರಿಗಿಂತ ಹೆಚ್ಚು ಭಾರತೀಯರನ್ನು ಈ ಬಾರಿ ಪ್ರತಿನಿಧಿಸಲಿವೆ. ಹಾಗಾಗಿ, ಇಂಡಿಯಾ ಬಣದ ಸಂಸದರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.

'ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಿ ಸದನವನ್ನು ಪರಿಣಾಮಕಾರಿಯಾಗಿ ನಡೆಸಬಹುದು ಎಂಬುದು ಪ್ರಜಾಸತ್ತಾತ್ಮಕ ನಡೆಯಲ್ಲ. ವಿರೋಧ ಪಕ್ಷಗಳು ದೇಶದ ಸಂವಿಧಾನವನ್ನು ರಕ್ಷಿಸಬೇಕು ಎಂಬುದಾಗಿ ಜನರು ಬಯಸುತ್ತಿರುವುದನ್ನು ಈ ಬಾರಿಯ ಲೋಕಸಭೆ ಚುನಾವಣೆ ತೋರಿಸಿಕೊಟ್ಟಿದೆ. ವಿರೋಧ ಪಕ್ಷದವರಿಗೆ ಮಾತನಾಡಲು ಅವಕಾಶ ಕಲ್ಪಿಸುವ ಮೂಲಕ ನೀವು ಸಂವಿಧಾನ ರಕ್ಷಿಸುವ ಕೆಲಸ ಮಾಡಲಿದ್ದೀರಿ ಎಂಬ ವಿಶ್ವಾಸವಿದೆ' ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.