ಇಂಫಾಲ್: ಮಣಿಪುರದಲ್ಲಿ ಹಿಂಸಾಚಾರ ತೀವ್ರಗೊಂಡಿದೆ. ಐದು ಜಿಲ್ಲೆಗಳಲ್ಲಿ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿದೆ.
ಕುಪಿತಗೊಂಡ ಜನರ ಗುಂಪು ಬಿಜೆಪಿಯ ಮೂವರು ಶಾಸಕರ ಮನೆಗಳಿಗೆ ಭಾನುವಾರ ಬೆಂಕಿ ಹಚ್ಚಿದೆ. ಅದರಲ್ಲಿ ಒಬ್ಬರು ಸಚಿವರ ಮನೆಯೂ ಸೇರಿದೆ. ಕಾಂಗ್ರೆಸ್‌ನ ಶಾಸಕರೊಬ್ಬರ ಮನೆಗೂ ಬೆಂಕಿ ಹಚ್ಚಲಾಗಿದೆ. ಈ ಸಂದರ್ಭದಲ್ಲಿ ಶಾಸಕರ ಮನೆಯಲ್ಲಿ ಯಾರೂ ಇರಲಿಲ್ಲ. ಇಂಫಾಲ್ ಕಣಿವೆಯ ವಿವಿಧ ಜಿಲ್ಲೆಗಳಲ್ಲಿ ಇದು ನಡೆದಿದೆ. ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪೂರ್ವಜರ ಮನೆಗೆ ಪ್ರತಿಭಟನಕಾರರ ಗುಂಪು ನುಗ್ಗಲು ಯತ್ನಿಸಿದರೂ ಭದ್ರತಾ ಪಡೆಗಳು ಈ ಪ್ರಯತ್ನವನ್ನು ವಿಫಲಗೊಳಿಸಿವೆ.
ಜಿರೀಬಾಮ್ ಜಿಲ್ಲೆಯಲ್ಲಿ ಬಂಡುಕೋರರು ಮೂವರು ಮಹಿಳೆಯರು ಮತ್ತು ಶಿಶುಗಳ ಹತ್ಯೆ ಮಾಡಿದ್ದರಿಂದ ಆಕ್ರೋಶಗೊಂಡ ಜನರು ಶನಿವಾರ ರಾತ್ರಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ಮೂವರು ಸಚಿವರು ಮತ್ತು ಆರು ಶಾಸಕರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಬಳಿಕ, ಕರ್ಫ್ಯೂ ಹೇರಲಾಗಿದೆ.
ಕುಕಿ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರ ಮೃತದೇಹ ಜಿರಿಬಾಮ್ ಜಿಲ್ಲೆಯಲ್ಲಿ ಭಾನುವಾರ ಸಿಕ್ಕಿದೆ. ಜಿರೀಬಾಮ್ ಜಿಲ್ಲೆಯ ನದಿಯಲ್ಲಿ ಮಹಿಳೆ, ಎರಡೂವರೆ ವರ್ಷದ ಮಗುವಿನ ಶವ ಪತ್ತೆಯಾಗಿದ್ದು, ಇವು ನಾಪತ್ತೆ ಆಗಿದ್ದ ಮೈತೇಯಿ ಕುಟುಂಬದವರದು ಇರಬಹುದು ಎಂದು ಅಂದಾಜಿಸಲಾಗಿದೆ. ಶುಕ್ರವಾರ ಇಲ್ಲಿಯೇ ಇಬ್ಬರು ಮಕ್ಕಳು ಸೇರಿ ಮೂವರ ಶವಗಳು ಪತ್ತೆ ಆಗಿದ್ದವು.
27 ವರ್ಷದ ಹಾವೊಜೊಯೆಲ್ ಡೌಂಜೆಲ್ ಎಂಬ ವ್ಯಕ್ತಿಯ ಮೃತದೇಹವು ಜಿರೀಬಾಮ್‌ನ ಅಗಲ್ಪುರ ಎಂಬಲ್ಲಿನ ಕಾಲುವೆಯೊಂದರಲ್ಲಿ ಸಿಕ್ಕಿದೆ ಎಂದು ಕುಕಿ ಸಮುದಾಯದ ಸಂಘಟನೆಯಾದ ದಿ ಇಂಡಿಜಿನಸ್ ಟ್ರೈಬಲ್ ಲೀಡರ್ಸ್ ಫೋರಂ (ಐಟಿಎಲ್‌ಎಫ್) ಹೇಳಿದೆ. ನವೆಂಬರ್ 7ರಂದು ಆರಂಭವಾದ ಹಿಂಸಾಚಾರದ ಕೇಂದ್ರ ಬಿಂದು ಈ ಸ್ಥಳವೇ ಆಗಿದೆ.
ಮೈತೇಯಿ ಸಮುದಾಯದ ಜನರ ಸಂಘಟನೆಯಾದ ಅರಂಬಾಯಿ ತೆಂಗೋಲ್‌ನ ಸದಸ್ಯರು ಈ ವ್ಯಕ್ತಿಯನ್ನು ಕೊಂದಿದ್ದಾರೆ ಎಂದು ಐಟಿಎಲ್‌ಎಫ್ ಆರೋಪಿಸಿದೆ. ಮೃತದೇಹದ ಕೈಗಳು ಕಟ್ಟಿದ ಸ್ಥಿತಿಯಲ್ಲಿದ್ದವು.
ಕುಕಿ ಬುಡಕಟ್ಟು ಸಮುದಾಯಕ್ಕೆ ಸೇರಿದವರ ಐದು ಚರ್ಚುಗಳು, ಒಂದು ಶಾಲೆ, ಒಂದು ಪೆಟ್ರೋಲ್ ಬಂಕ್ ಮತ್ತು 14 ಮನೆಗಳಿಗೆ ಮೈತೇಯಿ ಸಮುದಾಯದ ಜನರು ಶನಿವಾರ ರಾತ್ರಿ ಬೆಂಕಿ ಹಚ್ಚಿದ್ದಾರೆ ಎಂದು ಐಟಿಎಲ್‌ಎಫ್ ಹೇಳಿದೆ. ನವೆಂಬರ್ 7ರ ನಂತರ ಈವರೆಗೆ 20 ಮಂದಿ ಸಂಘರ್ಷದಿಂದಾಗಿ ಮೃತಪಟ್ಟಿದ್ದಾರೆ.
ಮೈತೇಯಿ ಸಮುದಾಯವು ಪ್ರಬಲವಾಗಿರುವ ಇಂಫಾಲ್ ಕಣಿವೆಯಲ್ಲಿ ಭಾನುವಾರವೂ ಕರ್ಫ್ಯೂ ಮುಂದುವರಿದಿದೆ. ಹಿಂಸಾಚಾರಕ್ಕೆ ಸಂಬಂಧಿಸಿ 23 ಮಂದಿಯನ್ನು ಬಂಧಿಸಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸೇರಿದ 13 ಶಾಸಕರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಅಥವಾ ಹಾನಿ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ಗಲಭೆಪೀಡಿತ ಜಿಲ್ಲೆಗಳಾದ ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ಬಿಷ್ಣುಪುರ್, ತೌಬಲ್, ಕಾಕ್‌ಚಿಂಗ್, ಕಾಂಗ್‌ಪೋಕ್ಪಿ, ಚುರಾಚಾಂದ್‌ಪುರ ವ್ಯಾಪ್ತಿಯಲ್ಲಿ ಶನಿವಾರದಿಂದ ಜಾರಿಗೆ ಬರುವಂತೆ ಎರಡು ದಿನ ಇಂಟರ್‌ನೆಟ್ ಸೇವೆಯನ್ನು ಸರ್ಕಾರ ರದ್ದುಪಡಿಸಿದೆ.
ರಾಜಧಾನಿಯಲ್ಲಿ ಸಚಿವಾಲಯದ ಕಟ್ಟಡದ 200 ಮೀಟರ್ ದೂರದಲ್ಲಿನ ತಂಗ್‌ಮೀಬಂದ್ ವಲಯದಲ್ಲಿ ರಸ್ತೆಗಳ ನಡುವೆ ಟೈರ್‌ಗಳಿಗೆ ಬೆಂಕಿ ಹಚ್ಚಿ ಇಡಲಾಗಿತ್ತು. ರಾಜಭವನದತ್ತ ಮೆರವಣಿಗೆ ಹೊರಟಿದ್ದ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
ಮಣಿಪುರದಲ್ಲಿ ಒಂದು ವರ್ಷದಿಂದ ಸಮಸ್ಯೆ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲ್ಲಿ ಸಹಜ ಸ್ಥಿತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಆಶಯವಾಗಿದೆರಾಹುಲ್ ಗಾಂಧಿ ಲೋಕಸಭೆ ವಿರೋಧಪಕ್ಷದ ನಾಯಕ
ಮಣಿಪುರದಲ್ಲಿ ಹಿಂಸಾಚಾರ ನಿತ್ಯದ ಭಾಗವಾಗಿದೆ. ಕೋಪೋದ್ರಿಕ್ತ ಗುಂಪುಗಳು ರಸ್ತೆಗಳನ್ನು ಆವರಿಸಿವೆ. ಆಡಳಿತ ಪಕ್ಷದ ಶಾಸಕರೂ ಈಗ ಅಲ್ಲಿ ಸುರಕ್ಷಿತವಾಗಿಲ್ಲಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಆಫ್‌ಸ್ಫಾ ವಾಪಸ್–
ಮಣಿಪುರ ಸರ್ಕಾರ ಮನವಿ ರಾಜ್ಯದ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಅನ್ವಯಿಸಿ ಆಫ್‌ಸ್ಫಾ ಕಾಯ್ದೆಯನ್ನು ಹಿಂಪಡೆಯುವುದನ್ನು ಪರಿಶೀಲಿಸಬೇಕು ಎಂದು ಮಣಿಪುರ ಸರ್ಕಾರವು ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದೆ. ಹಿಂಸಾಚಾರ ಪೀಡಿತ ಜಿರೀಬಾಮ್ ಪ್ರದೇಶ ಸೇರಿದಂತೆ ಆರು ಠಾಣೆಗಳ ವ್ಯಾಪ್ತಿಯಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ 1958 (ಆಫ್‌ಸ್ಫಾ) ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಕಾಯ್ದೆ ವಾಪಸಾತಿಗೆ ಕೋರಿ ರಾಜ್ಯ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ನವೆಂಬರ್ 15ರಂದು ನಡೆದ ರಾಜ್ಯ ಸಚಿವ ಸಂಪುಟ ಈ ಕುರಿತು ಶಿಫಾರಸು ಮಾಡಲು ತೀರ್ಮಾನಿಸಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.