ಮುಂಬೈ: ನಿರ್ಮಾಣ ಕಾಮಗಾರಿ ವೆಚ್ಚಗಳು ಕಳೆದ 45 ದಿನಗಳಲ್ಲಿಯೇ ಶೇ 20 ರಿಂದ 25 ರಷ್ಟು ಹೆಚ್ಚಳವಾಗಿದ್ದು ಈ ಕುರಿತು 'ದಿ ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಆಫ್ ಇಂಡಿಯಾ'(CREDAI) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೇ ಕಾಮಗಾರಿ ವೆಚ್ಚಗಳು ತಗ್ಗದಿದ್ದರೆ ರಿಯಲ್ ಎಸ್ಟೇಟ್ ಆಸ್ತಿಗಳ ಮೌಲ್ಯದಲ್ಲಿ ಶೀಘ್ರದಲ್ಲೇ ಶೇ 10 ರಿಂದ 15 ರಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎಂದು ಕ್ರೆಡಾಯ್ ಎಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ಕ್ರೆಡಾಯ್‌ನ ಮಹಾರಾಷ್ಟ್ರ ವಿಭಾಗ, ‘ಈ ಕಠಿಣ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಹಾಗೆಯೇ ರಾಜ್ಯ ಸರ್ಕಾರ ಜಿಎಸ್‌ಟಿ ಹಾಗೂ ಸ್ಟ್ಯಾಂಪ್ ಸುಂಕವನ್ನು ಕಡಿತಗೊಳಿಸಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಮನವಿ ಮಾಡಿಕೊಂಡಿದೆ.
‘ಪ್ರಸ್ತುತ ಸಂದರ್ಭದಲ್ಲಿ ನಾವು ನಮ್ಮ ಸದಸ್ಯರಿಗೆ ರಿಯಲ್ ಎಸ್ಟೇಟ್ ಚಟುವಟಿಕೆಗಳನ್ನು ನಿಲ್ಲಿಸಿ ಎಂದು ಹೇಳುವುದಿಲ್ಲ. ಆದರೆ, ಬೆಲೆ ಏರಿಕೆ ಇದೇ ರೀತಿ ಮುಂದುವರೆದರೆ ಬಿಲ್ಡರ್ಸ್‌ಗಳೇ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸುತ್ತಾರೆ’ ಎಂದು ಕ್ರೆಡಾಯ್ ಹೇಳಿದೆ.
ಇತ್ತೀಚೆಗೆ ಕ್ರೆಡಾಯ್ ತನ್ನ ಸದಸ್ಯರಿಗೆ ಕಚ್ಚಾ ವಸ್ತುಗಳ ಖರೀದಿಯನ್ನು ಸದ್ಯಕ್ಕೆ ನಿಲ್ಲಿಸಿ ಎಂಬ ಸೂಚನೆಯನ್ನು ನೀಡಿತ್ತು.
‘ಕಬ್ಬಿಣದ ಬೆಲೆ ಕೆ.ಜಿಗೆ ₹35 ರಿಂದ ₹45 ರವರೆಗೆ ಹೆಚ್ಚಳವಾಗಿದೆ. ಸಿಮೆಂಟ್ ಬೆಲೆಯಲ್ಲಿ ಒಂದು ಚೀಲಕ್ಕೆ ಗರಿಷ್ಠ ₹100 ಹೆಚ್ಚಳವಾಗಿದೆ. ತೈಲ ಬೆಲೆ ಹೆಚ್ಚಳದಿಂದ ಸಾಗಣೆ ವೆಚ್ಚ ಹೆಚ್ಚಿಗೆಯಾಗಿದೆ. ಹೀಗಾಗಿ ಒಟ್ಟಾರೆ ನಿರ್ಮಾಣ ಕಾಮಗಾರಿಯಲ್ಲಿ ₹20 ರಿಂದ 25 ರಷ್ಟು ಹೆಚ್ಚಳವಾಗಿದೆ’ ಎಂದು ಕ್ರೆಡಾಯ್ ಮಹಾರಾಷ್ಟ್ರ ಘಟಕದ ಅಧ್ಯಕ್ಷ ದೀಪಕ್ ಗೋರ್ಡಿಯಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
‘ಬೆಲೆ ಹೆಚ್ಚಳದಿಂದ ನಿವೇಶನ, ಪ್ಲಾಟ್‌ಗಳಬೆಲೆಯಲ್ಲಿ ಪ್ರತಿ ಚದರ ಸೆಂಟಿ ಮೀಟರ್‌ಗೆ ₹400 ರಿಂದ ₹500 ರಷ್ಟು ಹೆಚ್ಚಳವಾಗಲಿದೆ’ ಎಂದುಕ್ರೆಡಾಯ್ ಕಾರ್ಯದರ್ಶಿ ದಾವಲ್ ಅಜ್ಮೀರಾ ಹೇಳಿದ್ದಾರೆ. ಅಲ್ಲದೇ ಕಬ್ಬಿಣ ಮತ್ತು ಸಿಮೆಂಟ್ ರಫ್ತನ್ನು ಕೂಡಲೇ ನಿಲ್ಲಿಸುವಂತೆ ಅವರು ಆಗ್ರಹಿಸಿದ್ದಾರೆ.
ಡೆವೆಲಪರ್ಸ್‌ಗಳಿಗೆ ಮನೆ, ನಿವೇಶನ ಹಾಗೂ ಆಸ್ತಿಯ ಬೆಲೆ ಹೆಚ್ಚಳ ಮಾಡುವಂತೆ ಒತ್ತಡವುಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೇ ಈ ಕ್ಷೇತ್ರದಲ್ಲಿ ಉಂಟಾದ ಭಾರೀ ಬೆಲೆ ಹೆಚ್ಚಳಕ್ಕೆ ಹಲವು ರಿಯಲ್ ಎಸ್ಟೇಟ್ ಕಂಪನಿಗಳ ಸಿಇಓಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.