ನವದೆಹಲಿ: ‘ವ್ಯಕ್ತಿಯೊಬ್ಬ ಆರೋಪಿ ಎಂಬ ಕಾರಣಕ್ಕೇ ಆತನ ಮನೆಯನ್ನು ಧ್ವಂಸಗೊಳಿಸುವುದು ಎಷ್ಟು ಸರಿ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ.
ಅಪರಾಧ ಕೃತ್ಯದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವವರ ಮನೆಗಳನ್ನು ಕೆಲವು ರಾಜ್ಯಗಳಲ್ಲಿ ಬುಲ್ಡೋಜರ್ ಬಳಸಿ ನೆಲಸಮ ಮಾಡುತ್ತಿರುವ ಸಂದರ್ಭದಲ್ಲಿ ಮಹತ್ವದ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಕೇಳಿದೆ.
ಆರೋಪಿಯ ಮನೆ ಧ್ವಂಸಕ್ಕೆ ಸಂಬಂಧಿಸಿದಂತೆ, ದೇಶದಾದ್ಯಂತ ಅನ್ವಯವಾಗುವ ಮಾರ್ಗಸೂಚಿಯೊಂದನ್ನು ಹೊರಡಿಸುವುದಾಗಿಯೂ ಕೋರ್ಟ್ ಹೇಳಿದೆ. ಆದರೆ, ಅಕ್ರಮ, ಅನಧಿಕೃತ ಕಟ್ಟಡಗಳನ್ನು ಅಥವಾ ಸಾರ್ವಜನಿಕ ರಸ್ತೆಯ ಅತಿಕ್ರಮಣವನ್ನು, ಸಾರ್ವಜನಿಕ ರಸ್ತೆಗಳಲ್ಲಿನ ದೇವಸ್ಥಾನಗಳನ್ನು ರಕ್ಷಿಸುವ ಕೆಲಸವನ್ನು ತಾನು ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ವ್ಯಕ್ತಿಯೊಬ್ಬ ಅಪರಾಧಿ ಎಂದು ಸಾಬೀತಾಗಿದ್ದರೂ ಆ ವ್ಯಕ್ತಿಗೆ ಸೇರಿದ ಕಟ್ಟಡಗಳನ್ನು ಕಾನೂನಿನ ಪ್ರಕ್ರಿಯೆಗಳನ್ನು ಪಾಲಿಸದೆ ಧ್ವಂಸಗೊಳಿಸಲು ಅವಕಾಶ ಇಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ.
ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಈ ವಿಚಾರವಾಗಿ ರಾಜ್ಯ ಸರ್ಕಾರವು ಈ ಹಿಂದೆಯೇ ಸಲ್ಲಿಸಿರುವ ಪ್ರಮಾಣಪತ್ರವೊಂದರ ಬಗ್ಗೆ ಪ್ರಸ್ತಾಪಿಸಿದರು. ಕೆಲವು ಅಪರಾಧ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬ ಭಾಗಿಯಾಗಿದ್ದಾನೆ ಎಂಬ ಆರೋಪವು ಆತನ ಸ್ಥಿರಾಸ್ತಿಗಳನ್ನು ಧ್ವಂಸಗೊಳಿಸುವುದಕ್ಕೆ ಎಂದಿಗೂ ಆಧಾರವಾಗುವುದಿಲ್ಲ ಎಂಬುದನ್ನು ಆ ಪ್ರಮಾಣಪತ್ರ ಹೇಳುತ್ತದೆ ಎಂದು ಮೆಹ್ತಾ ತಿಳಿಸಿದರು.
ಸ್ಥಿರಾಸ್ತಿಗಳನ್ನು ಧ್ವಂಸಗೊಳಿಸುವ ಕೆಲಸವನ್ನು ‘ಆ ಸ್ಥಳಕ್ಕೆ ಅನ್ವಯವಾಗುವ ಪೌರಾಡಳಿತ ಕಾನೂನಿನ ಅಡಿಯಲ್ಲಿ ಅಥವಾ ಪ್ರದೇಶ ಅಭಿವೃದ್ಧಿ ಪ‍್ರಾಧಿಕಾರದ ಕಾನೂನಿನ ಅಡಿಯಲ್ಲಿ ವಿವರಿಸಿರುವ ಪ್ರಕ್ರಿಯೆಗೆ ಅನುಗುಣವಾಗಿ ಮಾತ್ರ ಮಾಡಬಹುದು’ ಎಂಬುದನ್ನು ಉತ್ತರ ಪ‍್ರದೇಶ ಸರ್ಕಾರವು ಹೇಳಿದೆ ಎಂದು ಮೆಹ್ತಾ ವಿವರಿಸಿದರು.
ಅಂತಹ ಆಸ್ತಿಯ ಮಾಲೀಕ ಅಥವಾ ಆಸ್ತಿಯನ್ನು ಅನುಭವಿಸುತ್ತ ಇರುವ ವ್ಯಕ್ತಿಯು ಕ್ರಿಮಿನಲ್ ಅಪರಾಧವೊಂದರಲ್ಲಿ ಭಾಗಿಯಾಗಿದ್ದಾನೆ ಎಂಬ ಒಂದೇ ಕಾರಣಕ್ಕೆ ಯಾವ ಸ್ಥಿರಾಸ್ತಿಯನ್ನೂ ಧ್ವಂಸಗೊಳಿಸುವುದಕ್ಕೆ ಅವಕಾಶ ಇಲ್ಲ ಎಂದು ಮೆಹ್ತಾ ಸ್ಪಷ್ಟಪಡಿಸಿದರು.
ಈ ನಿಲುವನ್ನು ನೀವು ಒಪ್ಪಿಕೊಳ್ಳುತ್ತೀರಿ ಎಂದಾದರೆ ನಾವು ಇದನ್ನು ದಾಖಲಿಸಿಕೊಂಡು, ಎಲ್ಲ ರಾಜ್ಯಗಳಿಗೆ ಅನ್ವಯವಾಗುವ ಮಾರ್ಗಸೂಚಿಗಳನ್ನು ಹೊರಡಿಸುತ್ತೇವೆ’ ಎಂದು ಪೀಠವು ತಿಳಿಸಿತು.
ಈ ವಿಚಾರವಾಗಿ ಎಲ್ಲ ರಾಜ್ಯಗಳ ಜೊತೆ ಚರ್ಚಿಸಲಾಗುವುದು ಎಂದು ಮೆಹ್ತಾ ತಿಳಿಸಿದರು. ಕೆಲವು ವ್ಯಕ್ತಿಗಳು ಅಪರಾಧವೊಂದನ್ನು ಎಸಗಿದ ಆರೋಪ ಹೊತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರ ಮನೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಬಿಂಬಿಸಲು ಅರ್ಜಿದಾರರು (ಜಮೀಯತ್ ಉಲೇಮಾ ಎ ಹಿಂದ್ ಮತ್ತು ಇತರರು) ಯತ್ನಿಸಿದ್ದಾರೆ ಎಂದು ಮೆಹ್ತಾ ದೂರಿದರು. ಅಲ್ಲದೆ, ಧ್ವಂಸ ಕಾರ್ಯಾಚರಣೆ ನಡೆಸುವುದಕ್ಕೆ ಸಾಕಷ್ಟು ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ನೋಟಿಸ್ ನೀಡಿದ್ದರು ಎಂಬುದನ್ನು ತಾವು ತೋರಿಸುವುದಾಗಿ ಹೇಳಿದರು.
‘ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಇರುವ ಅವಕಾಶಗಳನ್ನು ಬಳಸಿಕೊಳ್ಳಲು ವ್ಯಕ್ತಿಗಳಿಗೆ ಸಾಧ್ಯವಾಗದಂತೆ ಕ್ರಮ ಕೈಗೊಳ್ಳಬೇಕಿದೆ’ ಎಂದು ಪೀಠವು ಹೇಳಿತು.
ಅರ್ಜಿದಾರರ ಮುಖ್ಯ ಕೋರಿಕೆ ಏನು?
ಹಿಂಸಾಚಾರ, ಗಲಭೆ ಪ್ರಕರಣಗಳ ಆರೋಪಿಗಳಿಗೆ ಸೇರಿದ ಆಸ್ತಿಗಳನ್ನು ಧ್ವಂಸಗೊಳಿಸುವ ಕೆಲಸವು ಇನ್ನು ಮುಂದೆಯೂ ನಡೆಯುವುದನ್ನು ತಡೆಯಲು ಬೇರೆ ಬೇರೆ ರಾಜ್ಯ ಸರ್ಕಾರಗಳಿಗೆ ಅಗತ್ಯ ಸೂಚನೆ ನೀಡಬೇಕು ಎಂದು ಜಮೀಯತ್ ಉಲೇಮಾ ಎ ಹಿಂದ್ ಹಾಗೂ ಇತರರು ಸಲ್ಲಿಸಿರುವ ಅರ್ಜಿಗಳಲ್ಲಿ ಕೋರಲಾಗಿದೆ.
ರಾಷ್ಟ್ರ ರಾಜಧಾನಿಯ ಜಹಾಂಗೀರಪುರಿ ಪ್ರದೇಶದಲ್ಲಿ ಕೆಲವು ಕಟ್ಟಡಗಳನ್ನು ಧ್ವಂಸಗೊಳಿಸಿದ ವಿಚಾರವಾಗಿಯೂ ಜಮೀಯತ್ ಉಲೇಮಾ ಎ ಹಿಂದ್ ಸಂಘಟನೆಯು ಸುಪ್ರೀಂ ಕೋರ್ಟ್‌ನಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿತ್ತು. ಪೂರ್ವಭಾವಿಯಾಗಿ ನೋಟಿಸ್ ನೀಡದೆ, ಕಾನೂನಿನ ಪ್ರಕ್ರಿಯೆಗಳನ್ನು ಸರಿಯಾಗಿ ಪಾಲಿಸದೆ ಕಟ್ಟಡ ಧ್ವಂಸಗೊಳಿಸುವ ಕೆಲಸ ಮಾಡಬಾರದು ಎಂದು ಕೂಡ ಅದು ಅರ್ಜಿಯಲ್ಲಿ ಹೇಳಿತ್ತು.
‘ಬುಲ್ಡೋಜರ್ ನ್ಯಾಯ ಬೇಡ ಹೇಳಿಕೆ ದಾಖಲಾಗಲಿ’
ಅರ್ಜಿದಾರರೊಬ್ಬರ ಪರವಾಗಿ ಹಾಜರಿದ್ದ ಹಿರಿಯ ವಕೀಲ ದುಶ್ಯಂತ ದವೆ ಅವರು, ‘ದೇಶದಾದ್ಯಂತ ಬುಲ್ಡೋಜರ್ ನ್ಯಾಯವನ್ನು ಪಾಲಿಸುವ ಕೆಲಸ ನಡೆಯುವುದಿಲ್ಲ ಎಂಬ ಹೇಳಿಕೆಯನ್ನು ದಾಖಲು ಮಾಡಿಕೊಳ್ಳುವ ಕೆಲಸ ಆಗಲಿ’ ಎಂದು ಒತ್ತಾಯಿಸಿದರು.
ಬಹುತೇಕ ಎಲ್ಲ ರಾಜ್ಯಗಳೂ ಈಗ ಈ ನ್ಯಾಯದ ಮೊರೆ ಹೋಗಿವೆ, ಅವು ಆಸ್ತಿಗಳನ್ನು ಧ್ವಂಸಗೊಳಿಸುತ್ತಿವೆ ಎಂದು ಪೀಠಕ್ಕೆ ವಿವರಿಸಿದರು. ಕೆಲವು ರಾಜ್ಯಗಳಲ್ಲಿ ಆಸ್ತಿಗಳನ್ನು ಧ್ವಂಸಗೊಳಿಸಿದ ಪ್ರಕರಣಗಳನ್ನು ಹಿರಿಯ ವಕೀಲ ಸಿ.ಯು. ಸಿಂಗ್ ಉಲ್ಲೇಖಿಸಿದರು.
ದೇಶದ ಉದ್ದಗಲಕ್ಕೂ ಅನ್ವಯವಾಗುವ ಮಾರ್ಗ ಸೂಚಿ ಸಿದ್ಧಪಡಿಸಲು ಕೋರ್ಟ್‌ಗೆ ಸಾಧ್ಯವಾಗುವ ರೀತಿ ಯಲ್ಲಿ, ಪ್ರಕರಣದಲ್ಲಿ ಭಾಗಿಯಾದವರ ಪರ ವಕೀಲರು ತಮ್ಮ ಸಲಹೆಗಳನ್ನು ನೀಡಲಿ ಎಂದು ಪೀಠ ತಿಳಿಸಿತು. ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.