ಬುಧವಾರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿರುವಂತೆ ಖಾಸಗಿ ಸಂಸ್ಥೆಗಳು ಗ್ರಾಹಕರನ್ನು ಆಧಾರ ಜೋಡಣೆ ಮಾಡಲು ಕೋರುವಂತಿಲ್ಲ. ಹೀಗಾಗಿ, ಹೊಸ ಸಿಮ್ ಕಾರ್ಡ್ ಪಡೆಯಲು ಅಥವಾ ಬ್ಯಾಂಕ್ ಖಾತೆ ತೆರೆಯಲು ಆಧಾರ್ ಸಲ್ಲಿಕೆ ಕಡ್ಡಾಯವಲ್ಲ. ಆದರೆ, ಈಗಾಗಲೇ ಪಡೆದುಕೊಂಡಿರುವ ಆಧಾರ್ ಮಾಹಿತಿ ಮತ್ತು ಖಾತೆಗಳೊಂದಿಗೆ ಮಾಡಿರೊ ಜೋಡಣೆ ಹಿಂಪಡೆಯಬಹುದೇ?
ತನ್ನ ಖಾಸಗಿ ಮಾಹಿತಿಯನ್ನು ಒಳಗೊಂಡ ದತ್ತಾಂಶವನ್ನು ಸಮ್ಮತಿಯಿಲ್ಲದೆಯೇ ಸಂಗ್ರಹಿಸಿಕೊಳ್ಳುವಂತಿಲ್ಲ, ವೈಯಕ್ತಿಕ ದತ್ತಾಂಶದ ಮೇಲೆ ವ್ಯಕ್ತಿ ಹಕ್ಕು ಹೊಂದಿರುವುದಾಗಿ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಪ್ರಸ್ತಾಪಿಸಲಾಗಿದೆ. ಇತ್ತೀಚೆಗೆ ಬ್ಯಾಂಕ್‌ಗಳು, ದೂರಸಂಪರ್ಕ ಸೇವಾದಾರ ಸಂಸ್ಥೆಗಳು, ಮೊಬೈಲ್ ವ್ಯಾಲೆಟ್ ಹಾಗೂ ಕೊರಿಯರ್ ಏಜೆನ್ಸಿಗಳೂ ಸಹ ಪರಿಶೀಲನೆಗಾಗಿ ಆಧಾರ್ ನೀಡಲು ತಾಕೀತು ಮಾಡಿದ್ದವು.
ಆಧಾರ್ ಬಳಸಿ ಇ–ಕೆವೈಸಿ(ಗ್ರಾಹಕರ ಪರಿಶೀಲನೆ) ನಡೆಸಿದ್ದರೆ; ಆಧಾರ್ ಸಂಖ್ಯೆ, ಬಯೋಮೆಟ್ರಿಕ್ ಮಾಹಿತಿ ಹಂಚಿಕೊಂಡಿರುವ ಸೇವಾದಾರ ಸಂಸ್ಥೆಯಿಂದ ಆಧಾರ್ ಸಂಪರ್ಕ ಅಥವಾ ಜೋಡಣೆಯನ್ನು ತೆಗೆಯುವಂತೆ ಕೇಳಲು ಅವಕಾಶವಿದೆ ಎಂದುಯುಐಡಿಎಐ ವೆಬ್‌ಸೈಟ್‌ನಲ್ಲಿನ ನಿಯಮಾವಳಿಗಳ ಸೂಚನೆಯಲ್ಲಿಪ್ರಕಟಿಸಲಾಗಿದೆ.
ಇ–ಕೆವೈಸಿ ದತ್ತಾಂಶವನ್ನು ಸಂಗ್ರಹಿಸಿಕೊಳ್ಳಲು ಅಧಿಕೃತ ಸಂಸ್ಥೆಗಳಿಗೆ ನೀಡಿರುವ ಸಮ್ಮತಿಯನ್ನು ಆಧಾರ್ ಸಂಖ್ಯೆ ಹೊಂದಿರುವ ಯಾವುದೇ ವ್ಯಕ್ತಿ ಹಿಂಪಡೆಯಬಹುದು. ಸಮ್ಮತಿಯನ್ನು ಹಿಂಪಡೆಯುವುದರಿಂದ ಮೂರನೇ ವ್ಯಕ್ತಿಯೊಂದಿಗೆ ಮಾಹಿತಿ ಹಂಚಿಕೊಳ್ಳುವುದನ್ನೂ ಇದರಿಂದ ತಡೆಯಬಹುದು ಹಾಗೂ ಆ ಸಂಸ್ಥೆ ವ್ಯಕ್ತಿಯ ದತ್ತಾಂಶವನ್ನು ಅಳಿಸಿ ಹಾಕಬೇಕಾಗುತ್ತದೆ.
ಇನ್ನಷ್ಟು:ಆಧಾರ್: ಸೌಲಭ್ಯಕ್ಕಷ್ಟೇ ಸೀಮಿತ
ಬ್ಯಾಂಕ್‌ಗೆ ಮನವಿ: ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ತೆಗೆಯಲು ಕೈಬರಹದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಧಾರ್ ಬಯೋಮೆಟ್ರಿಕ್ ಮಾಹಿತಿಯನ್ನು ಅಳಿಸುವಂತೆ ದೂರಸಂಪರ್ಕ ಸೇವಾದಾರ ಸಂಸ್ಥೆಗಳಿಗೂ ಇದೇ ರೀತಿ ಮನವಿ ಮಾಡಬಹದು ಎಂದು ದಿಕ್ವಿಂಟ್ ವರದಿ ಮಾಡಿದೆ. ರಿಲಯನ್ಸ್ ಜಿಯೊ ತನ್ನ ಗ್ರಾಹಕರಿಗೆ ಆಧಾರ್ ಸಂಖ್ಯೆ ಬಳಸಿ ಇ–ಕೆವೈಸಿ ಮೂಲಕವೇ ಸಿಮ್ ಕಾರ್ಡ್ ವಿತರಣೆ ಮಾಡಿದ್ದು, ಆಧಾರ್ ಮಾಹಿತಿ ತಗೆಯುವಂತೆ ಗ್ರಾಹಕರು ಮಾಡುವ ಮನವಿಗೆ ಸಂಸ್ಥೆಯ ಸ್ಪಂದನೆಯ ಬಗೆಗೂ ಕುತೂಹಲವಿದೆ.
ಮೊಬೈಲ್ ವ್ಯಾಲೆಟ್: ಪೇಟಿಎಂ, ಫೋನ್‌ಪೇ, ಮೊಬೈಲ್‌ವಿಕ್‌ನಂತಹ ಮೊಬೈಲ್ ವ್ಯಾಲೆಟ್‌ಗಳಿಂದ ಆಧಾರ್ ಮಾಹಿತಿ ಹೊರತೆಗೆಯಲು ಬಹಳಷ್ಟು ಗ್ರಾಹಕರು ಮುಂದಾಗಿದ್ದಾರೆ. ಆದರೆ, ಈವರೆಗೂ ಯಾವುದೇ ಮೊಬೈಲ್ ವ್ಯಾಲೆಟ್‌ನಲ್ಲಿ ಆಧಾರ್ ಜೋಡಣೆ ತೆಗೆಯಲು ಆಯ್ಕೆಗಳನ್ನು ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.