ADVERTISEMENT

ಫಲಿತಾಂಶ ವಿಶ್ಲೇಷಣೆ | ಇದು ವ್ಯಕ್ತಿಯ ಗೆಲುವೋ? ಪಕ್ಷದ ಗೆಲುವೋ? ವಿಚಾರದ ಗೆಲುವೋ?

ಪ್ರಜಾವಾಣಿ ವಿಶೇಷ
Published 4 ಜೂನ್ 2019, 9:10 IST
Last Updated 4 ಜೂನ್ 2019, 9:10 IST
   

‘ದೇಶಕ್ಕೆ ಈಗ ಫಲಿತಾಂಶ ಗೊತ್ತಾಗಿದೆ. ಆದರೆ ಇಂಥ ಫಲಿತಾಂಶ ಬಂದಿದ್ದೇಕೆ...?’ದೇಶ ಸುತ್ತಿ ಜನರನಾಡಿಮಿಡಿತ ಅರಿತ ಅನುಭವಿ ಪತ್ರಕರ್ತರಾದ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮತ್ತು‘ಡೆಕ್ಕನ್ ಹೆರಾಲ್ಡ್‌’ಡೆಪ್ಯುಟಿ ಎಡಿಟರ್‌ ಬಿ.ಎಸ್.ಅರುಣ್ಈ ಪ್ರಶ್ನೆಗೆ ಉತ್ತರ ಹುಡುಕಲು ಯತ್ನಿಸಿದ್ದಾರೆ.

ರವೀಂದ್ರ ಭಟ್: ಈಗಾಗಲೇ ಫಲಿತಾಂಶ ಬಂದಿದೆ. ಎನ್‌ಡಿಎ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ ಕೂಡ ಒಂದು ಪಕ್ಷವಾಗಿ ಸರ್ಕಾರ ನಡೆಸುವಷ್ಟು ಬಹುಮತ ಗಳಿಸಿಕೊಂಡಿದೆ. ವಿಶೇಷ ಏನು ಅಂದ್ರೆ ಕಳೆದ ಬಾರಿಯಂತೆ ಈ ಬಾರಿಯೂಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದ ಸ್ಥಾನ ಗಳಿಸಲು ವಿಫಲವಾಗಿದೆ.ಇಂಥದ್ದೊಂದು ಚುನಾವಣಾ ಫಲಿತಾಂಶ ಬರಬಹುದು ಎಂದುಎಕ್ಸಿಟ್‌ ಪೋಲ್‌ಗಳು ಭವಿಷ್ಯ ನುಡಿದಿದ್ದವು. ಆದರೆ ಈಗ ಅದನ್ನು ಮೀರಿದ ಫಲಿತಾಂಶ ಬಂದಿದೆ ನನಗೆ ಅನ್ನಿಸಿದೆ. ಇಂಥದ್ದೊಂದು ಫಲಿತಾಂಶ ಬರಲು ಕಾರಣ ಏನಿರಬಹುದು ಅಂತೀರಿ ಅರುಣ್?

ಅರುಣ್:ಮೋದಿ ಅವರು ಚುನಾವಣೆ ನಿರ್ವಹಿಸಿದ ರೀತಿ ಪರಿಣಾಮಕಾರಿಯಾಗಿತ್ತು. ರ‍್ಯಾಲಿಗೆ ಅವರು ಆರಿಸಿಕೊಂಡ ಸ್ಥಳಗಳು, ಮಾತನಾಡಿದ ವಿಷಯಗಳು ಜನರನ್ನು ಸೆಳೆದವು. ಮೋದಿ ಅಭಿವೃದ್ಧಿ ವಿಚಾರ ಹೆಚ್ಚು ಮಾತನಾಡಲಿಲ್ಲ.ಭಾವನಾತ್ಮಕ ವಿಷಯಗಳನ್ನೇ ಜನರ ಮುಂದಿಟ್ಟರು. ಆದರೆ ಅವರ ಮಾತು ಜನರ ಮನಸ್ಸು ತಾಗಿದ್ದು ನಿಜ.

ADVERTISEMENT

ರವೀಂದ್ರ ಭಟ್:ಬಿಜೆಪಿಯ ತಂತ್ರಗಾರಿಕೆಯೇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಅಂತ ಅನ್ನಿಸಲ್ವಾ ನಿಮಗೆ?

ಅರುಣ್: ಹೌದು. ಅಮಿತ್‌ ಶಾ ಮತ್ತು ನರೇಂದ್ರ ಮೋದಿ ಹೆಣೆದಚುನಾವಣಾ ತಂತ್ರ ನೂರರಷ್ಟು ಯಶಸ್ಸು ತಂದುಕೊಟ್ಟಿದೆ.

ರವೀಂದ್ರ ಭಟ್: ಈ ಬಾರಿ ಬಿಜೆಪಿ ತಮ್ಮ ಸಾಧನೆಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲಿಲ್ಲ. ಅದು ಅಚ್ಚೇ ದಿನ್ ಆಗಿರಬಹುದು. ಮೇಕ್‌ ಇನ್ ಇಂಡಿಯಾ ಆಗಿರಬಹುದು. ನೋಟು ರದ್ದತಿ ಆಗಿರಬಹುದು. ಯಾವುದನ್ನೂ ಹೆಚ್ಚಾಗಿ ಈ ಚುನಾವಣೆಯಲ್ಲಿ ಪ್ರಸ್ತಾಪ ಮಾಡಲಿಲ್ಲ.

ಅರುಣ್: ಬಹುಶಃ ಅದೂ ಸಹ ಅವರ ಚುನಾವಣೆ ತಂತ್ರ ಇರಬಹುದು. ನೀವು ಹೇಳಿದ ವಿಷಯಗಳನ್ನು ಮುಂದಿಟ್ಟುಕೊಂಡು ಹೋಗಿದ್ರೆ ಅವರು ಇಷ್ಟು ಸ್ಥಾನಗಳನ್ನು ಗೆಲ್ಲೋಕೆ ಆಗ್ತಿರಲಿಲ್ಲ. ಅದಕ್ಕೆ ತದ್ವಿರುದ್ಧವಾಗಿ ಅವರು ಭಾವನಾತ್ಮಕ ವಿಷಯಗಳನ್ನು ಜನರ ಮುಂದಿಟ್ರು. ಅದು ಬಾಲಾಕೋಟ್ ಆಗಿರಬಹುದು, ಪುಲ್ವಾಮಾ ಆಗಿರಬಹುದು, ರಾಜೀವ್ ಗಾಂಧಿ ಅಂಡಮಾನ್‌ಗೆ ಹೋಗಿ ಸರ್ಕಾರಿ ವೆಚ್ಚದಲ್ಲಿ ಮೋಜು ಮಾಡಿದ್ರು ಅನ್ನೋ ಆರೋಪ ಆಗಿರಬಹುದು. ಇಂಥ ಭಾವನಾತ್ಮಕ ವಿಷಯಗಳು ಜನರನ್ನು ಹೆಚ್ಚು ಸೆಳೆಯಿತು. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮೋದಿಯನ್ನು ಎಷ್ಟು ತೆಗಳಿದಷ್ಟೂ ಅದು ಬಿಜೆಪಿಗೆ ಪೂರಕವಾಗಿ ಕೆಲಸ ಮಾಡಿತು.

ರವೀಂದ್ರ ಭಟ್:ವಿರೋಧಿಗಳುಟೀಕೆ ಮಾಡಿದಷ್ಟೂ ಮೋದಿಗೆ ಇನ್ನಷ್ಟ ಬಲ ಸಿಕ್ತು ಅಂತೀರಾ?

ಅರುಣ್: ಹೌದು, ಜನರಿಗೆ ಅವರು ಟೀಕಿಸಿದ ರೀತಿ ಇಷ್ಟವಾಗಲಿಲ್ಲ.

ರವೀಂದ್ರ ಭಟ್: ಅದಕ್ಕೆ ಏನು ಕಾರಣ ಇರಬಹುದು. ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪ್ರಣಾಳಿಕೆಗಳನ್ನು ಪಕ್ಕಪಕ್ಕ ಇಟ್ಟು ನೋಡಿದ್ರೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೆಚ್ಚಿನ ಜನಪರ ವಿಷಯಗಳಿದ್ವು…

ಅರುಣ್:ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸಾಕಷ್ಟು ಉತ್ತಮ ವಿಷಯಗಳಿದ್ದವು. ಆದರೆ ಅವನ್ನು ಜನರಿಗೆ ತಲುಪಿಸಲು ಅವರಿಗೆ ಸಾಧ್ಯವಾಗಲಿಲ್ಲ.

ರವೀಂದ್ರ ಭಟ್: ಅದೊಂದೇ ಅಲ್ಲ. ಮೋದಿ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸುವುದರಲ್ಲಿಯೂ ಕಾಂಗ್ರೆಸ್ ವಿಫಲವಾಯ್ತು...

ಅರುಣ್: ರಫೇಲ್ ವಿಚಾರ ಹೈಲೈಟ್ ಮಾಡಿದ್ರೆ ಜನ ನಮಗೆ ಮತ ಹಾಕ್ತಾರೆ ಅಂತ ಕಾಂಗ್ರೆಸ್ ನಂಬಿತ್ತು. ಅದರ ಬದಲು ಅವರು ‘ನ್ಯಾಯ್’ ಯೋಜನೆಯನ್ನು ಹೆಚ್ಚು ಪ್ರಚಾರ ಮಾಡಲು ಗಮನಕೊಡಬೇಕಿತ್ತು.

ರವೀಂದ್ರ ಭಟ್:ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಂದು ತಂತ್ರಗಾರಿಕೆ ಇತ್ತು ಅಂತ ಅನ್ಸುತ್ತಾ ನಿಮಗೆ?

ಅರುಣ್: ಕಾಂಗ್ರೆಸ್ ನಾಯಕರು ಮತ್ತು ಅಭ್ಯರ್ಥಿಗಳು ಜನರಿಗೆ ತಲುಪಿಸಬೇಕಾದ ವಿಷಯ ತಲುಪಿಸಲಿಲ್ಲ. ತಂತ್ರಗಾರಿಕೆ ಇದ್ದಿದ್ದರೆ ಇಂಥ ಫಲಿತಾಂಶ ಬರ್ತಾ ಇರಲಿಲ್ಲ. ಇದಕ್ಕಿಂತ ಸುಧಾರಿಸ್ತಾ ಇತ್ತು.

ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಜಾತಿ ಹೆಚ್ಚು ಪ್ರಬಲವಾಗಿ ಕೆಲಸ ಮಡುತ್ತೆ. 2014 ಮತ್ತು ಈ ಬಾರಿಯ ಫಲಿತಾಂಶ ನೋಡಿದ್ರೆ ಜಾತಿ ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಜಾತಿ ಏನಾದ್ರೂ ವೋಟ್ ತಂದುಕೊಟ್ಟಿದ್ರೆ ಎಸ್‌ಪಿ ಮತ್ತು ಬಿಎಸ್‌ಪಿ ಹೀಗೆ ಸೋಲ್ತಾ ಇರಲಿಲ್ಲ. ನನ್ನ ಲೆಕ್ಕಾಚಾರದ ಪ್ರಕಾರ ಎಸ್‌ಪಿ–ಬಿಎಸ್‌ಪಿ ಈ ಬಾರಿ35ರಿಂದ 37 ಸೀಟ್ ಗೆಲ್ಲಬೇಕಿತ್ತು.

ರವೀಂದ್ರ ಭಟ್:ವ್ಯಕ್ತಿ ಕೇಂದ್ರಿತವಾದ ಚುನಾವಣೆಯೇ ಇಂಥದ್ದೊಂದು ಫಲಿತಾಂಶಕ್ಕೆ ಕಾರಣ ಅನ್ನಿಸಲ್ವಾ ನಿಮಗೆ?ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಕಾಲದಿಂದಲೂ ಇಂಥದ್ದನ್ನು ನಾವು ನೋಡಿದ್ದೇವೆ.

ಅರುಣ್:ಯುವ ಮತದಾರರು ಈ ಬಾರಿ ನಿರ್ಣಾಯಕ ಪಾತ್ರ ನಿರ್ವಹಿಸಿದರು.18ರಿಂದ 22 ವಯಸ್ಸಿನ 1 ಕೋಟಿಗೂ ಹೆಚ್ಚು ಮತದಾರರು ದೇಶದಲ್ಲಿದ್ದಾರೆ. ಈ ವಯೋಮಾನದ ಮತಗಳಲ್ಲಿ ಶೇ 85ರಿಂದ 90ರಷ್ಟು ಮತಗಳು ಬಿಜೆಪಿ ಪಾಲಾಗಿವೆ.ಬಿಜೆಪಿ ಗೆಲುವಿಗೆ ಇದು ಪ್ರಮುಖ ಕಾರಣ ಅನ್ಸುತ್ತೆ ನನಗೆ.

ರವೀಂದ್ರ ಭಟ್: ಮೋದಿ ಕಳೆದ ಬಾರಿ ಅಚ್ಚೇದಿನ್,ರಾಮಮಂದಿರ ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಈ ಬಾರಿ ಅವನ್ನು ಬಿಟ್ಟು,ಬಾಲಾಕೋಟ್, ಪುಲ್ವಾಮಾ ದಾಳಿಗೆ ಒತ್ತು ಕೊಟ್ಟರು. ಈ ತಂತ್ರ ಕೆಲಸ ಮಾಡಿತು ಅನ್ಸುತ್ತೆ.

ಅರುಣ್: ಬಿಜೆಪಿಗೆ ಗೊತ್ತು, ಯಾವ ವಿಚಾರಮತದಾರರನ್ನು ಹೆಚ್ಚು ಸೆಳೆಯುತ್ತೆ ಆಂತ.

ರವೀಂದ್ರ ಭಟ್:ಪುಲ್ವಾಮಾ ಘಟನೆಯನ್ನು ಬಿಜೆಪಿ ತನ್ನ ಅನುಕೂಲಕ್ಕೆ ಬಳಸಿಕೊಂಡಿತು. ಅದನ್ನು ಮೋದಿ ರಾಷ್ಟ್ರೀಯತೆಯ ವಿಚಾರವಾಗಿ ಪರಿವರ್ತಿಸಿದರು.ಇದು ಆರ್‌ಎಸ್‌ಎಸ್‌ ಸಿದ್ಧಾಂತಕ್ಕೂ ಹತ್ತಿರವಾದುದು. ಈ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿ. ಮುಂದಿನ ಐದು ವರ್ಷಗಳಲ್ಲಿ ಬಿಜೆಪಿ–ಮೋದಿ ಕಾರ್ಯನಿರ್ವಹಣೆಯಲ್ಲಿ ಏನಾದರೂ ಬದಲಾವಣೆ ಆಗುತ್ತಾ?

ಅರುಣ್: ಈ ಫಲಿತಾಂಶ ಬಿಜೆಪಿಯನ್ನು, ಮೋದಿಯನ್ನು ಇನ್ನಷ್ಟುಅಥಾರಿಟೇಟಿವ್ (ಸರ್ವಾಧಿಕಾರಿ)ಮಾಡಲ್ಲ ಅನ್ನೋದು ನನ್ನ ಆಶಯ. ಮೋದಿ ಇದನ್ನು ದೇಶದ ಜನರ ಆಶೀರ್ವಾದ ಅಂತ ತೆಗೆದುಕೊಳ್ಳಬೇಕು. ದೇಶದ ಎಲ್ಲರಿಗೂ ಅವರು ಪ್ರಧಾನಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಇವತ್ತು ಅವರು ಮಾಡಿರುವ ಟ್ವೀಟ್ ಈ ಭರವಸೆ ಮೂಡಿಸುತ್ತೆ. ಅದರಂತೆ ಅವರು ನಡೆದುಕೊಳ್ಳಬೇಕು.ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವಂಥ ಆಡಳಿತ ಕೊಡಬೇಕು.

ರವೀಂದ್ರ ಭಟ್: ಮೋದಿ ಮೇಲೆ ಇದ್ದ ದೊಡ್ಡ ಆರೋಪ ಅವರೊಬ್ಬ ಸರ್ವಾಧಿಕಾರಿ ಅನ್ನೋದು. ಬಿಜೆಪಿ ಅಥವಾ ಮೋದಿಯ ನಿಲುವಿಗೆ ಜನರು ಬೆಂಬಲ ಕೊಟ್ಟಿದ್ದಾರೆ. ಮುಂದೆ ಅದು ಜಾಸ್ತಿ ಆಗಬಹುದಲ್ವಾ?

ಅರುಣ್: ನಮ್ಮ ನಿಲುವುಗಳು, ನೀತಿಗಳಿಗೆ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂಥದ್ದೇ ನೀತಿಗಳನ್ನು ಮುಂದುವರಿಸೋಣ. ಅದರಲ್ಲಿ ತಪ್ಪೇನಿದೆ ಎಂದು ಅವರು ಅಂದುಕೊಳ್ಳಬಹುದು.

ರವೀಂದ್ರ ಭಟ್: ಉತ್ತರ ಭಾರತದ ಜನರ ಮನೋಭಾವ ಒಂದು, ದಕ್ಷಿಣ ಭಾರತದ ಮನೋಭಾವ ಮತ್ತೊಂದು. ಕರ್ನಾಟಕ ಬಿಟ್ಟರೆ ಬಿಜೆಪಿ ದಕ್ಷಿಣ ಭಾರತದಲ್ಲಿ ಅಂಥ ಸಾಧನೆ ಮಾಡಿಲ್ಲಅದಕ್ಕೇನು ಕಾರಣ ಇರಬಹುದು ಅರುಣ್?

ಅರುಣ್: ದಕ್ಷಿಣ ಭಾರತದ ಜನರು ಸ್ಥಳೀಯ, ಪ್ರಾದೇಶಿಕ ಪಕ್ಷಗಳ ನಾಯಕರನ್ನು ಇಷ್ಟಪಟ್ಟಿದ್ದಾರೆ ಅಂತ ನನಗೆ ಅನ್ಸುತ್ತೆ. ಆಂಧ್ರದಲ್ಲಿ ಜಗನ್, ತೆಲಂಗಾಣದಲ್ಲಿ ಚಂದ್ರಶೇಖರ ರಾವ್, ತಮಿಳುನಾಡಿನಲ್ಲಿ ಸ್ಟಾಲಿನ್‌ ಅವರು ಜನರಿಗೆ ಇಷ್ಟವಾಗಿದ್ದಾರೆ.

ರವೀಂದ್ರ:ಬೆಗುಸರಾಯ್‌ ಕ್ಷೇತ್ರದಲ್ಲಿಕನ್ಹಯ್ಯ ಕುಮಾರ್ ಗೆಲ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆಸೋತಿದ್ದಾರೆ. ಅದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?

ಅರುಣ್: ಬೆಗುಸರಾಯ್ ಕಮ್ಯುನಿಸ್ಟರ ಬಿಗಿ ಹಿಡಿತವಿರುವ ಕ್ಷೇತ್ರ. ಅದನ್ನುಪೂರ್ವದ ಲೆನಿನ್‌ಗ್ರಾಡ್ ಅಂತಿದ್ರು. ಅಲ್ಲಿ ಸದಾ ಕಮ್ಯುನಿಸ್ಟರು ಗೆಲ್ತಾ ಇದ್ರು. ಈ ಬಾರಿ ಲಾಲು ಪ್ರಸಾದ್ ಯಾದವ್ ಮಗ ತೇಜಸ್ವಿ ಯಾದವ್ ಮೈತ್ರಿಗೆ ಒಪ್ಪದೆ ಅಭ್ಯರ್ಥಿಯನ್ನು ನಿಲ್ಲಿಸಿದರು. ಬಹುಶಃ ಕನ್ಹಯ್ಯ ಗೆದ್ದರೆ ನನ್ನ ನಾಯಕತ್ವಕ್ಕೆ ಅಡ್ಡಿ ಎನ್ನುವ ಮನೋಭಾವ ಅವರಲ್ಲಿ ಇರಬಹುದು.ಚುನಾವಣಾಪೂರ್ವ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಕನ್ಹಯ್ಯ ಅವರ ಸೋಲಿಗೆ ಇವೆಲ್ಲಾ ಕಾರಣವಾಗಿರಬಹುದು.

ರವೀಂದ್ರ: ಒಂದು ಕಡೆ ಕನ್ಹಯ್ಯ ಸೋತು ಹೋಗ್ತಾರೆ, ಇನ್ನೊಂದು ಕಡೆ ಇನ್ನೊಂದು ಕಡೆ ಭಯೋತ್ಪಾದನೆ ಆರೋಪ ಇದ್ದವರು ಗೆಲ್ತಾರೆ. ಏನಿದು?

ಅರುಣ್: ಇದನ್ನು ಅಷ್ಟು ಭಾವುಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ.ಎಷ್ಟೋ ಕಡೆ ಸ್ಥಳೀಯ ಅಭ್ಯರ್ಥಿಗಳ ಬಗ್ಗೆ ಜನರು ಮಾತೇ ಆಡ್ತಾ ಇರ್ಲಿಲ್ಲ. ಮೋದಿ ಮುಖ ನೋಡಿ ಮತ ಹಾಕ್ತೀವಿ ಅಂತಿದ್ರು.ಮಂಗಳೂರು, ವಿಜಯಪುರ, ಉತ್ತರ ಪ್ರದೇಶದ ಹಲವು ಕಡೆ ಇದೇ ಮಾತು ಕೇಳಿಬರ್ತಿತ್ತು. ‘ನಮ್ಮ ಎಂಪಿ ಕೆಲಸ ಮಾಡಿಲ್ಲ. ನಿಜ ಅಂದ್ರೆ ಅವನನ್ನು ಸೋಲಿಸಬೇಕು. ಆದ್ರೆ ಮೋದಿ ಪ್ರಧಾನಿ ಆಗಬೇಕು ಅಂತ ಇವನನ್ನು ಗೆಲ್ಲಿಸ್ತಾ ಇದ್ದೀವಿ’ ಅಂತ ಹಲವು ಕಡೆ ನನಗೆ ಹೇಳಿದ್ರು.

ರವೀಂದ್ರ ಭಟ್: ಎಲ್ಲ ಕ್ಷೇತ್ರಗಳಲ್ಲಿಮೋದಿಯೇ ನಿಂತಿದ್ದಾರೆ ಅಂತ ಬಿಜೆಪಿಯವರು ಪ್ರಚಾರ ಮಾಡಿದ್ರು. ಕರ್ನಾಟಕದಲ್ಲಿಯೂ ಎಲ್ಲ 28 ಕ್ಷೇತ್ರಗಳಲ್ಲಿ ಮೋದಿಯೇ ನಿಂತಿದ್ದಾರೆ ಎನ್ನುವಭಾವನೆ ಕಾಣಿಸ್ತಿತು. ಇದೇನಾ ಹೊಸ ಭಾರತ?

ಅರುಣ್: ನನ್ನ ಅಭಿಪ್ರಾಯ ಬೇರೆ ರೀತಿ ಇದೆ. ನಾವು ಯಾವುದನ್ನೂ ಸಾಮಾನ್ಯೀಕರಣಗೊಳಿಸಿ ಮಾತನಾಡಲು ಆಗದು.ನಾನು ಉತ್ತರ ಪ್ರದೇಶಕ್ಕೆ ಹೋದಾಗ ಅಲ್ಲಿನ ಕೆಲವು ಕ್ಷೇತ್ರಗಳಲ್ಲಿ ಸ್ಥಳೀಯ ವಿಚಾರವೇ ದೊಡ್ಡ ಸಂಗತಿಯಾಗಿದ್ದು ಗಮನಕ್ಕೆ ಬಂತು. ಉದಾಹರಣೆಗೆ ಅಮೇಠಿಯನ್ನೇ ತೆಗೆದುಕೊಳ್ಳಿ.ಅಲ್ಲಿ ಕಳೆದ 20 ವರ್ಷಗಳಿಂದ ಸೋನಿಯಾರಂಥ ದೊಡ್ಡ ನಾಯಕರೇ ಗೆಲುವು ಸಾಧಿಸುತ್ತಿದ್ದಾರೆ. ಆದರೆ ಅದು ಅತ್ಯಂತ ಹಿಂದುಳಿದ ನಗರವಾಗಿಯೇ ಉಳಿದಿದೆ. ಕನ್ಹಯ್ಯ ಒಬ್ಬ ಯುವ ನೇತಾರ. ಅವರ ವಿಚಾರವನ್ನು ವಿರೋಧಿಸಿ ಜನರು ಅವರನ್ನು ಸೋಲಿಸಿದರು ಎನ್ನಲು ಆಗುವುದಿಲ್ಲ.ಬಿಜೆಪಿಗೆ ವೋಟ್ ಹಾಕಬೇಕು, ಮೋದಿಯನ್ನುಗೆಲ್ಲಿಸಬೇಕು ಎನ್ನುವ ಮನೋಭಾವ ಈ ಬಾರಿ ದೇಶದಲ್ಲಿ ಹೆಚ್ಚು ಕಾಣಿಸುತ್ತಿತ್ತು.

ರವೀಂದ್ರ ಭಟ್: ಕಾರಣಗಳು ಯಾವುದೇ ಇರಲಿ, ಜನರು ಮೋದಿಯನ್ನು–ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ದೇಶದಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರುಕೆಲಸ ಮಾಡಿದ್ರೆ ಒಳ್ಳೇದಾಗುತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.