ADVERTISEMENT

ಹುಲಿ ಯೋಜನೆಗೆ ಅನುದಾನ ಭಾರಿ ಕಡಿತ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 5:57 IST
Last Updated 10 ಏಪ್ರಿಲ್ 2023, 5:57 IST
ಕ್ಯಾಮೆರಾ ಕಣ್ಣಿಗೆ ಬಿದ್ದ ಹುಲಿ
ಕ್ಯಾಮೆರಾ ಕಣ್ಣಿಗೆ ಬಿದ್ದ ಹುಲಿ   

‘ಹುಲಿ ಯೋಜನೆ’ಯ 50ನೇ ವರ್ಷಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದ್ದಾರೆ. ಇದೇ ವೇಳೆ ಹುಲಿ ಸಂರಕ್ಷಣೆ ಕುರಿತ ‘ಅಮೃತ ಕಾಲದ ಹುಲಿ ಮುನ್ನೋಟ’ ಅನ್ನು ಪ್ರಧಾನಿ ಬಿಡುಗಡೆ ಮಾಡಿದ್ದಾರೆ. ಭಾರತದ ಹುಲಿ ಸಂರಕ್ಷಣೆಯು ಭಾರತಕ್ಕೆ ಮಾತ್ರ ಮುಖ್ಯವಲ್ಲ, ಬದಲಿಗೆ ಜಗತ್ತಿಗೇ ಅಗತ್ಯವಾದುದು ಎಂದು ಈ ಮುನ್ನೋಟನಲ್ಲಿ ವಿವರಿಸಲಾಗಿದೆ. ಜತೆಗೆ, ‘ಹುಲಿ ಸಂರಕ್ಷಿತ ಪ್ರದೇಶಗಳ ಕೇಂದ್ರ ಭಾಗಗಳಿಗೆ ತುರ್ತಾಗಿ ತೆರಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದಿಂದ ಅತ್ಯಾಧುನಿಕ ವಾಹನಗಳು, ಹೆಲಿಕಾಪ್ಟರ್‌ಗಳನ್ನು ಒದಗಿಸಲಾಗುವುದು. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅಗತ್ಯವಿರುವ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಲಾಗುವುದು ಮತ್ತು ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದು ಈ ಮುನ್ನೋಟ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಕೇಂದ್ರ ಸರ್ಕಾರವು ಹುಲಿ ಯೋಜನೆಗೆ ಪ್ರತಿ ವರ್ಷ ನೀಡುತ್ತಿರುವ ಅನುದಾನವನ್ನು ಕಡಿತ ಮಾಡುತ್ತಲೇ ಇದೆ. 2023–24ನೇ ಸಾಲಿನಲ್ಲಿ ಹುಲಿ ಯೋಜನೆ ಮತ್ತು ಆನೆ ಯೋಜನೆಗಳನ್ನು ವಿಲೀನ ಮಾಡಿ ಅನುದಾನ ಘೋಷಿಸಲಾಗಿದೆ. ಈ ಬಾರಿ ಹುಲಿ ಯೋಜನೆಗೆ ಎಷ್ಟು ಅನುದಾನ ನೀಡಲಾಗಿದೆ ಎಂಬುದರ ನಿಖರ ಮಾಹಿತಿಯೇ ಇಲ್ಲ.

ಕೇಂದ್ರ ಸರ್ಕಾರವು ಪ್ರತಿ ವರ್ಷ ತನ್ನ ಬಜೆಟ್‌ನಲ್ಲಿ ಹುಲಿ ಯೋಜನೆಗೆ ಎಂದು ಪ್ರತ್ಯೇಕ ಅನುದಾನವನ್ನು ತೆಗೆದಿರಿಸುತ್ತದೆ. 2016–17ರಲ್ಲಿ ಹುಲಿ ಯೋಜನೆಗೆ ಎಂದು ₹375 ಕೋಟಿ ಮೊತ್ತದ ಅನುದಾನವನ್ನು ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಘೋಷಿಸಿತ್ತು. 2016–17ರಿಂದ 2023–24ರವರೆಗಿನ ಎಂಟು ಆರ್ಥಿಕ ವರ್ಷಗಳಲ್ಲಿ ಇದೇ ಗರಿಷ್ಠ ಮೊತ್ತದ ಅನುದಾನವಾಗಿದೆ. ಆನಂತರದ ಯಾವ ವರ್ಷವೂ ₹375 ಕೋಟಿಗಿಂತ ಹೆಚ್ಚಿನ ಅನುದಾನವನ್ನು ಸರ್ಕಾರ ಘೋಷಿಸಿಯೇ ಇಲ್ಲ. ಈ ಅನುದಾನದ ಮೊತ್ತದಲ್ಲಿ ಪ್ರತಿ ವರ್ಷ ಇಳಿಕೆಯಾಗುತ್ತಲೇ ಇದೆ. ಈ ಎಂಟು ವರ್ಷಗಳಲ್ಲಿ ಅತ್ಯಂತ ಕಡಿಮೆ ಮೊತ್ತದ ಅನುದಾನ ಘೋಷಿಸಿದ್ದು 2021–22ರಲ್ಲಿ. ಆ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಹುಲಿ ಯೋಜನೆಗೆ ₹250 ಕೋಟಿಯನ್ನಷ್ಟೇ ಘೋಷಿಸಲಾಗಿತ್ತು. 2016–17ರಲ್ಲಿ ಘೋಷಿಸಿದ್ದ ಅನುದಾನಕ್ಕೆ ಹೋಲಿಸಿದರೆ, 2021–22ರಲ್ಲಿ ಘೋಷಿಸಿದ್ದ ಅನುದಾನದ ಮೊತ್ತದಲ್ಲಿ ಶೇ 33.33ರಷ್ಟು ಇಳಿಕೆಯಾಗಿತ್ತು. 2023–24ರಲ್ಲಿ ಹುಲಿ ಯೋಜನೆ ಮತ್ತು ಆನೆ ಯೋಜನೆ ಎರಡನ್ನೂ ಸೇರಿಸಿ ₹331 ಕೋಟಿ ಅನುದಾನವನ್ನು ಘೋಷಿಸಿದೆ. 2016–17ಕ್ಕೆ ಹೋಲಿಸಿದರೆ 2023–24ರ ಅನುದಾನದಲ್ಲಿ ಶೇ 12ರಷ್ಟು ಕಡಿಮೆಯಾಗಿದೆ.

ಕೇಂದ್ರ ಸರ್ಕಾರವು ಹುಲಿ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸುತ್ತಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿಲ್ಲ. ಪರಿಷ್ಕೃತ ಅಂದಾಜಿನಲ್ಲೇ ಹುಲಿ ಯೋಜನೆಯ ಅನುದಾನವನ್ನು ಕಡಿತ ಮಾಡಲಾಗುತ್ತಿದೆ. 2016–17ರಲ್ಲಿ ₹375 ಕೋಟಿ ಅನುದಾನವನ್ನು ಘೋಷಿಸಿದ್ದರೆ, ಪರಿಷ್ಕೃತ ಅಂದಾಜಿನಲ್ಲಿ ಅನುದಾನವನ್ನು ₹364 ಕೋಟಿಗೆ
ಇಳಿಸಲಾಗಿತ್ತು. 2017–18 ಮತ್ತು 2018–19ನೇ ಆರ್ಥಿಕ ವರ್ಷ ಹೊರತುಪಡಿಸಿ, ಉಳಿದೆಲ್ಲಾ ವರ್ಷದ ಪರಿಷ್ಕೃತ ಅಂದಾಜಿನಲ್ಲೂ ಅನುದಾನವನ್ನು ಇದೇ ರೀತಿ ಕಡಿತ ಮಾಡಲಾಗಿದೆ. ಪರಿಷ್ಕೃತ ಅಂದಾಜಿನ ವೇಳೆ ಹುಲಿ ಯೋಜನೆಯ ಅನುದಾನವನ್ನು 2019–20ರಲ್ಲಿ ₹282.23 ಕೋಟಿಗೆ, 2020–21ರಲ್ಲಿ ₹195 ಕೋಟಿಗೆ, 2021–22ರಲ್ಲಿ ₹220 ಕೋಟಿಗೆ ಮತ್ತು 2022–23ರಲ್ಲಿ ₹188 ಕೋಟಿಗೆ ಕಡಿತ ಮಾಡಲಾಗಿತ್ತು. 2022–23ರ ಪರಿಷ್ಕೃತ ಅಂದಾಜಿನಲ್ಲಿ ಈ ಎಂಟು ವರ್ಷದಲ್ಲೇ ಅತ್ಯಂತ ಕಡಿಮೆ ಮೊತ್ತದ ಅನುದಾನವನ್ನು ನೀಡಲಾಗಿದೆ.

ADVERTISEMENT

ಆಯಾ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಹುಲಿ ಯೋಜನೆಗೆ ಸರ್ಕಾರವು ಬಿಡುಗಡೆ ಮಾಡಿದ ವಾಸ್ತವಿಕ ಅನುದಾನವು, ಪರಿಷ್ಕೃತ ಅಂದಾಜಿಗಿಂತ ತುಸು ಕಡಿಮೆಯೇ ಇದೆ. ಸರ್ಕಾರವು ಬಜೆಟ್‌ನಲ್ಲಿ ಘೋಷಿಸುತ್ತಿರುವ ಅನುದಾನಕ್ಕೂ, ವಾಸ್ತವಿಕವಾಗಿ ನೀಡುತ್ತಿರುವ ಅನುದಾನಕ್ಕೂ ವ್ಯತ್ಯಾಸವಿದೆ.

2016-17ರಲ್ಲಿ ವಾಸ್ತವಿಕ ಅನುದಾನದಲ್ಲಿ ಶೇ 9ರಷ್ಟು ಕಡಿತವಾಗಿತ್ತು. ಎಲ್ಲಾ ವರ್ಷಗಳಲ್ಲೂ ಅನುದಾನವನ್ನು ದೊಡ್ಡ ಪ್ರಮಾಣದಲ್ಲೇ ಕಡಿತ ಮಾಡಲಾಗಿದೆ. 2022–23ರ ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನಕ್ಕೆ ಹೋಲಿಸಿದರೆ, ಪರಿಷ್ಕೃತ ಅಂದಾಜಿನಲ್ಲಿ ಹೇಳಲಾಗಿರುವ ಅನುದಾನದ ಮೊತ್ತದಲ್ಲಿ ಶೇ 37.33ರಷ್ಟು ಕಡಿತವಾಗಿದೆ. ಆ ಸಾಲಿನಲ್ಲಿ ವಾಸ್ತವಿಕವಾಗಿ ಎಷ್ಟು ಅನುದಾನವನ್ನು ನೀಡಲಾಗಿದೆ ಎಂಬುದರ ಮಾಹಿತಿ ಲಭ್ಯವಿಲ್ಲ. ಆ ಮೊತ್ತವು ಪರಿಷ್ಕೃತ ಅಂದಾಜಿಗಿಂತ ಕಡಿಮೆ ಇದ್ದರೆ, ಈ ಎಂಟು ವರ್ಷದಲ್ಲೇ ಅದು ಅತ್ಯಂತ ಕಡಿಮೆ ಅನುದಾನ ಎನಿಸಿಕೊಳ್ಳಲಿದೆ.

ಅನುದಾನ: ಬಜೆಟ್‌ ಘೋಷಣೆ ಮತ್ತು ಮಂಜೂರಾದ ಮೊತ್ತ

ಆರ್ಥಿಕ ವರ್ಷ;ಬಜೆಟ್‌ ಘೋಷಣೆ;ಮಂಜೂರಾದ ಅನುದಾನ

2016–17;₹375 ಕೋಟಿ;₹342.25 ಕೋಟಿ

2017–18;₹345 ಕೋಟಿ;₹345 ಕೋಟಿ

2018–19;₹350 ಕೋಟಿ;₹323 ಕೋಟಿ

2019–20;₹350 ಕೋಟಿ;₹282.23 ಕೋಟಿ

2020–21;₹300 ಕೋಟಿ;₹194.70 ಕೋಟಿ

2021–22;₹250 ಕೋಟಿ;₹219 ಕೋಟಿ

2022–23;₹300 ಕೋಟಿ;₹188 ಕೋಟಿ (ಪರಿಷ್ಕೃತ ಅಂದಾಜು)

2023–24;₹331 ಕೋಟಿ (ಆನೆ ಯೋಜನೆ ಸೇರಿ);

ಈ ಸಾಲಿನಲ್ಲಿನ ಅನುದಾನವೆಷ್ಟು?

ಕೇಂದ್ರ ಸರ್ಕಾರವು ಪ್ರತಿ ವರ್ಷ ತನ್ನ ಬಜೆಟ್‌ನಲ್ಲಿ ಹುಲಿ ಯೋಜನೆಗೆ ಮತ್ತು ಆನೆ ಯೋಜನೆಗೆ ಪ್ರತ್ಯೇಕವಾಗಿ ಅನುದಾನವನ್ನು ತೆಗೆದಿರಿಸುತ್ತಿತ್ತು. ಆದರೆ, 2023–24ನೇ ಸಾಲಿನ ಬಜೆಟ್‌ನಲ್ಲಿ ಎರಡೂ ಯೋಜನೆಗಳನ್ನು ಒಟ್ಟಿಗೆ ಸೇರಿಸಿ ಅನುದಾನವನ್ನು ₹331 ಕೋಟಿ ಅನುದಾನವನ್ನು ಘೋಷಿಸಿದೆ. ಇದರಲ್ಲಿ ಹುಲಿ ಯೋಜನೆಗೆ ಎಷ್ಟು ಅನುದಾನ ಮತ್ತು ಆನೆ ಯೋಜನೆಗೆ ಎಷ್ಟು ಅನುದಾನ ಎಂಬುದನ್ನು ಸರ್ಕಾರವು ತನ್ನ ಬಜೆಟ್‌ನಲ್ಲಿ ನಿಖರವಾಗಿ ಹೇಳಿಲ್ಲ.

ಈ ಹಿಂದಿನ ಬಜೆಟ್‌ಗಳಲ್ಲಿ ಆನೆ ಯೋಜನೆಗೆ ಪ್ರತಿ ವರ್ಷ ₹30 ಕೋಟಿಯಿಂದ ₹35 ಕೋಟಿಯಷ್ಟು ಅನುದಾನವನ್ನು ತೆಗೆದಿರಿಸಲಾಗಿದೆ. ಆ ಪ್ರಕಾರ 2023–24ರಲ್ಲಿ ಆನೆ ಯೋಜನೆಗೆ ₹35 ಕೋಟಿಯಷ್ಟು ಅನುದಾನವನ್ನು ತೆಗೆದರಿಸಿದರೆ, ಹುಲಿ ಯೋಜನೆಗೆ ₹296 ಕೋಟಿಗಳಷ್ಟು ಅನುದಾನ ಉಳಿಯುತ್ತದೆ. ಪರಿಷ್ಕೃತ ಬಜೆಟ್‌ನಲ್ಲೂ ಇಷ್ಟೇ ಅನುದಾನವನ್ನು ಉಳಿಸಿದರೆ, ಈ ಹಿಂದಿನ ಆರ್ಥಿಕ ವರ್ಷಕ್ಕಿಂತ ಹೆಚ್ಚು ಅನುದಾನ ದೊರೆತಂತಾಗುತ್ತದೆ. ಕಡಿತ ಮಾಡಿದರೆ, ಅನುದಾನದ ಮೊತ್ತ ತಾನಾಗೇ ಕಡಿಮೆಯಾಗಲಿದೆ.

ವರ್ಷ ಪ್ರತಿ ನೂರು ಸಾವು

ಹುಲಿಗಳ ಪ್ರಮುಖ ಆವಾಸಸ್ಥಾನವಾಗಿರುವ ಭಾರತದಲ್ಲಿ ಹುಲಿಗಳ ಸಂಖ್ಯೆ ಪ್ರತೀ ವರ್ಷ ಏರಿಕೆಯಾಗುತ್ತಿದೆ. ಪ್ರತೀ ವರ್ಷ ವಿವಿಧ ಕಾರಣಗಳಿಂದ ಮೃತಪಡುವ ಹುಲಿಗಳ ದತ್ತಾಂಶವನ್ನೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ತನ್ನ ವರದಿಗಳಲ್ಲಿ ಉಲ್ಲೇಖಿಸಿದೆ. 2016ರಿಂದ 2022ರವರೆಗೆ ದೇಶದಲ್ಲಿ 800ಕ್ಕೂ ಹೆಚ್ಚು ಹುಲಿಗಳು ಸಹಜ ಸಾವು, ಬೇಟೆ ಮೊದಲಾದ ಕಾರಣಗಳಿಂದ ಮೃತಪಟ್ಟಿವೆ.

ಅಂದರೆ, ವರ್ಷಕ್ಕೆ ಸರಿಸುಮಾರು 100 ಹುಲಿಗಳು ಮೃತಪಡುತ್ತಿವೆ ಎಂದು ದತ್ತಾಂಶಗಳು ತಿಳಿಸುತ್ತವೆ. 2019ರಲ್ಲಿ ಮಾತ್ರ 85 ಹುಲಿಗಳು ಮೃತಪಟ್ಟಿದ್ದವು. 2021ರಲ್ಲಿ ಅತಿಹೆಚ್ಚು ಅಂದರೆ, 118 ಹುಲಿಗಳು ಮೃತಪಟ್ಟಿದ್ದವು.

ಪ್ರತೀ ವರ್ಷ ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಹುಲಿಗಳು ಮೃತಪಟ್ಟಿವೆ. 2016–22ರ ಅವಧಿಯಲ್ಲಿ ಮಧ್ಯಪ್ರದೇಶ ವ್ಯಾಪ್ತಿಯಲ್ಲಿರುವ ಹುಲಿ ಸಂರಕ್ಷಿತ ಅರಣ್ಯದಲ್ಲಿ 222 ಹುಲಿಗಳು ಮೃತಪಟ್ಟಿವೆ. ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 152 ಹಾಗೂ ಕರ್ನಾಟಕದಲ್ಲಿ 100 ಹುಲಿಗಳು ವಿವಿಧ ಕಾರಣದಿಂದ ಸಾವನ್ನಪ್ಪಿವೆ. ಬಾಂಧವಗಡ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯೊಂದರಲ್ಲೇ 2012–22ರ ಅವಧಿಯಲ್ಲಿ ಅತಿಹೆಚ್ಚು (66) ಹುಲಿಗಳು ಸಾವನ್ನಪ್ಪಿವೆ. ಕರ್ನಾಟಕದ ನಾಗರಹೊಳೆಯಲ್ಲಿ 51, ಬಂಡೀಪುರದಲ್ಲಿ 49 ಹುಲಿ ಸಾವನ್ನಪ್ಪಿವೆ.

ವೈಜ್ಞಾನಿಕ ವಿಧಾನ ಪಾಲನೆ: ದೇಶದ ಯಾವುದೇ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಹುಲಿಗಳು ಮೃತಪಟ್ಟ ಬಗ್ಗೆ ವರದಿಯಾದ ಕೂಡಲೇ ಅದನ್ನು ನೇರವಾಗಿ ದತ್ತಾಂಶಕ್ಕೆ ಸೇರಿಸುವುದಿಲ್ಲ. ಸಾವಿನ ನಿಖರ ಕಾರಣವನ್ನು ವಿಶ್ಲೇಷಣೆಗೆ ಒಳಪಡಿಸಿ, ಸಾವಿನ ಸ್ವರೂಪವನ್ನು ಉಲ್ಲೇಖಿಸಲಾಗುತ್ತದೆ. ಹುಲಿಯು ವಯಸ್ಸಾಗಿ ಸಹಜವಾಗಿ ಸಾವನ್ನಪ್ಪಿದೆಯೇ ಅಥವಾ ಬೇಟೆಗೆ ಬಲಿಯಾಗಿದೆಯೇ ಎಂಬುದನ್ನು ವಿವರಿಸಲಾಗುತ್ತದೆ. ಹುಲಿಯೊಂದು ಮೃತಪಟ್ಟ ಮಾಹಿತಿಯನ್ನು ವರದಿ ಮಾಡುವುದು ಆಯಾ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯ ರಾಜ್ಯಗಳ ಜವಾಬ್ದಾರಿ. ಹುಲಿ ಸಾವಿನ ಬಗ್ಗೆ ಬೇರೊಂದು ಮೂಲದಿಂದ ಪ್ರಾಧಿಕಾರಕ್ಕೆ ಮಾಹಿತಿ ಸಿಕ್ಕರೂ, ಅದನ್ನು ರಾಜ್ಯಗಳು ದೃಢಪಡಿಸಿದ ಬಳಿಕವೇ ದತ್ತಾಂಶದಲ್ಲಿ ಸೇರಿಸುವ ನಿಯಮ ಪಾಲಿಸಾಗುತ್ತಿದೆ. ಈ ಪ್ರಕ್ರಿಯೆಯು ವೈಜ್ಞಾನಿಕ ವಿಧಾನದಲ್ಲೇ ನಡೆಯುತ್ತದೆ.

ಹುಲಿಯ ಮರಣೋತ್ತರ ಪರೀಕ್ಷಾ ವರದಿ, ಚಿತ್ರಗಳು, ವಿಧಿವಿಜ್ಞಾನ ವರದಿ ಹಾಗೂ ಮಾರ್ಗಸೂಚಿಯಲ್ಲಿ ಹೇಳಲಾಗಿರುವ ಇತರೆ ವರದಿಗಳನ್ನು ರಾಜ್ಯಗಳು ಪ್ರಾಧಿಕಾರಕ್ಕೆ ಕಳುಹಿಸಿಕೊಡಬೇಕಿದೆ. ಈ ವರದಿಗಳ ಆಧಾರದಲ್ಲಿ ಹುಲಿ ಸಾವಿಗೆ ನಿಖರ ಕಾರಣವನ್ನು ವಿಶ್ಲೇಷಿಸಲಾಗುತ್ತದೆ. ವಿಶ್ಲೇಷಣೆ ಮುಗಿಯುವವರೆಗೆ ಸಾವಿಗೆ ಕಾರಣವನ್ನು ನಿರ್ಧರಿಸುವುದಿಲ್ಲ. 2012ರಿಂದ 2022ರ ಅವಧಿಯಲ್ಲಿ ಶೇ 72ರಷ್ಟು ಪ್ರಕರಣಗಳಲ್ಲಿ ಹುಲಿಗಳ ಸಾವಿನ ಸ್ವರೂಪವನ್ನು ನಿರ್ಧರಿಸಲಾಗಿದೆ. ಉಳಿದ ಶೇ 28ರಷ್ಟು ಪ್ರಕರಣಗಳಲ್ಲಿ ಸಾವಿನ ಸ್ವರೂಪ ಇನ್ನಷ್ಟೇ ತಿಳಿಯಬೇಕಿದೆ.

9 ವರ್ಷಗಳಲ್ಲಿ 193 ಹುಲಿಗಳ ಬೇಟೆ

ದೇಶದಲ್ಲಿ ಹುಲಿಗಳ ಸಂರಕ್ಷಣೆಗೆ ವ್ಯಾಪಕ ಕ್ರಮಗಳನ್ನು ತೆಗೆದುಕೊಂಡಿದ್ದರೂ, ಹುಲಿ ಬೇಟೆ ಹಾಗೂ ಕಳ್ಳಸಾಗಣೆ ನಿಂತಿಲ್ಲ ಎಂಬುದನ್ನು ದತ್ತಾಂಶಗಳು ಸೂಚಿಸುತ್ತವೆ. ಸಹಜವಾಗಿ ಮೃತಪಡುವ ಹುಲಿಗಳ ಸಂಖ್ಯೆಯೇ ಹೆಚ್ಚಿದೆ ಎಂದು ಪ್ರಾಧಿಕಾರದ ಜಾಲತಾಣದಲ್ಲಿ ವಿವರಿಸಲಾಗಿದೆ. ಆದರೆ, ಸರಿಸುಮಾರು ಇಷ್ಟೇ ಸಂಖ್ಯೆಯ ಹುಲಿಗಳು ಅಥವಾ ಇದಕ್ಕೂ ಹೆಚ್ಚಿನ ಸಂಖ್ಯೆಯ ಹುಲಿಗಳು ಬೇಟೆ ಹಾಗೂ ಅಸಹಜ ಕಾರಣಕ್ಕೆ ಬಲಿಯಾಗಿವೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಉದಾಹರಣೆಗೆ, 2012ರಲ್ಲಿ 42 ಹುಲಿಗಳು ವಯಸ್ಸಿನ ಕಾರಣಕ್ಕೆ ಸಹಜವಾಗಿ ಮೃತಪಟ್ಟಿವೆ. ಇದೇ ವರ್ಷದಲ್ಲಿ ಹುಲಿ ದೇಹದ ಅವಶೇಷ ಪತ್ತೆಯೂ ಸೇರಿದಂತೆ ಬೇಟೆ, ಅಸಹಜ ಸಾವಿನಿಂದ 46 ಹುಲಿಗಳು
ಮೃತಪಟ್ಟಿದ್ದವು. 2018ರಲ್ಲಿ 53 ಹುಲಿಗಳು ಸಹಜ ಸಾವನ್ನಪ್ಪಿದ್ದರೆ, 48 ಹುಲಿಗಳು ಬೇಟೆ ಹಾಗೂ ಅಸಹಜವಾಗಿ ಸತ್ತಿದ್ದವು. 9 ವರ್ಷಗಳಲ್ಲಿ 193 ಹುಲಿಗಳು ಬೇಟೆಗೆ ಬಲಿಯಾಗಿವೆ ಎಂದು ಪ್ರಾಧಿಕಾರದ ದತ್ತಾಂಶಗಳು ಹೇಳುತ್ತವೆ. 2016–22ರ ಅವಧಿಯಲ್ಲಿ 76 ಹುಲಿಗಳ ದೇಹದ ವಿವಿಧ ಅವಶೇಷಗಳನ್ನು ಜಪ್ತಿ ಮಾಡಲಾಗಿದೆ ಎಂದು ಪ್ರಾಧಿಕಾರದ ಜಾಲತಾಣ ತಿಳಿಸಿದೆ. ಹುಲಿಯ ದೇಹದ ಭಾಗಗಳಾದ ಉಗುರು, ಚರ್ಮ, ಹಲ್ಲು ಮೊದಲಾದ ಅವಶೇಷಗಳು ಬೇಟೆ ಅಥವಾ ಕಳ್ಳಸಾಗಣೆಯ ಕಾರಣಕ್ಕೆ ಹುಲಿಗಳು ಮೃತಪಟ್ಟಿವೆ ಎಂಬುದನ್ನು ದೃಢಪಡಿಸುತ್ತವೆ.

ಹುಲಿಗಳ ಸಾವು

ವರ್ಷ;ಹುಲಿಗಳ ಸಂಖ್ಯೆ

2016;100

2017;105

2018;94

2019;85

2020;98

2021;118

2022;107

ಹುಲಿ ಅವಶೇಷಗಳ ವಶ

ವರ್ಷ;ವಶಪಡಿಸಿಕೊಂಡ ಹುಲಿ ಅವಶೇಷಗಳ ಸಂಖ್ಯೆ

2016;22

2017;10

2018;8

2019;10

2020;7

2021;9

2022;10

ಆಧಾರ: ಕೇಂದ್ರ ಸರ್ಕಾರದ ಬಜೆಟ್‌ ದಾಖಲೆಗಳು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ವರದಿಗಳು, ಹುಲಿ ಸ್ಥಿತಿಗತಿ ವರದಿಗಳು, ಅಮೃತ ಕಾಲದ ಹುಲಿ ಮುನ್ನೋಟ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.