ಮುಂಬೈ: ಆನ್‌ಲೈನ್‌ನಲ್ಲಿ ತರಿಸಿದ ಕೋನ್ ಐಸ್‌ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿದ್ದು, ಘಟನೆ ಸಂಬಂಧ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮುಂಬೈನ ಮಲಾಡ್ ನಿವಾಸಿ ಡಾ.ಆರ್ಲೆಮ್ ಬ್ರೆಂಡನ್ ಸೆರಾವೊ ಎಂಬವರು ಆನ್‌ಲೈನ್‌ನಲ್ಲಿ ಐಸ್‌ಕ್ರೀಂ ತರಿಸುವಂತೆ ತಮ್ಮ ಸಹೋದರಿಗೆ ಹೇಳಿದ್ದಾರೆ. ಅವರು ತರಿಸಿದ 'ಯಮ್ಮೊ' ಕಂಪನಿಯ ಬಟರ್‌ಸ್ಕಾಚ್ ಕೋನ್ ಐಸ್‌ಕ್ರೀಂನಲ್ಲಿ ಅರ್ಧ ಇಂಚು ಗಾತ್ರದ ಬೆರಳು ಕಂಡುಬಂದಿದೆ.
‘ಬೆರಳು ಕಂಡು ದಂಗಾದ ಗ್ರಾಹಕ, ಐಸ್‌ಕ್ರೀಂ ಕಂಪನಿಗೆ ದೂರು ನೀಡಿದ್ದಾರೆ. ಆದರೆ, ಅವರಿಂದ ಸೂಕ್ತ ಪ್ರತಿಕ್ರಿಯೆ ಲಭಿಸದ ಕಾರಣ ಬೆರಳನ್ನು ಐಸ್ ಬ್ಯಾಗ್‌ನಲ್ಲಿ ರಕ್ಷಿಸಿ ಮಲಾಡ್ ಪೊಲೀಸ್ ಠಾಣೆಗೆ ಬಂದು ವಿಷಯ ತಿಳಿಸಿದ್ದಾರೆ. ಅವರ ದೂರಿನ ಆಧಾರದಲ್ಲಿ ಐಸ್‌ಕ್ರೀಂ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಘಟನೆ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದ್ದು, ಐಸ್‌ಕ್ರೀಂ ಹಾಗೂ ಬೆರಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
‘ಐಸ್‌ಕ್ರೀಂ ಸವಿಯುವಾಗ ನಾಲಿಗೆಗೆ ಏನೋ ಸಿಕ್ಕ ಹಾಗಾಯಿತು. ಸೂಕ್ಷ್ಮವಾಗಿ ಗಮನಿಸಿದಾಗ ಮಾನವನ ಬೆರಳು ಕಂಡುಬಂದಿದೆ’ ಎಂದು ಸೆರಾವೊ ಹೇಳಿದ್ದಾರೆ.
ತನಿಖೆಗೆ ಸಹಕಾರ:
‘ಐಸ್‌ಕ್ರೀಂನಲ್ಲಿ ಬಾಹ್ಯ ವಸ್ತು ದೊರೆತ ಬಗ್ಗೆ ಗ್ರಾಹಕರೊಬ್ಬರು ದೂರು ನೀಡಿದ್ದಾರೆ. ಉತ್ಪನ್ನದ ಗುಣಮಟ್ಟ ಮತ್ತು ಸುರಕ್ಷತೆಯು ನಮ್ಮ ಆದ್ಯತೆಯಾಗಿದ್ದು, ಅವರ ದೂರಿಗೆ ಸ್ಪಂದಿಸಲು ಮುಂದಾಗಿದ್ದೆವು. ಅಷ್ಟರಲ್ಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆ ಐಸ್‌ಕ್ರೀಂ ಪೂರೈಕೆಯಾದ ಘಟಕದಲ್ಲಿ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ’ ಎಂದು 'ಯಮ್ಮೊ' ಐಸ್‌ಕ್ರೀಂ ಕಂಪನಿಯ ವಕ್ತಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.