ನವದೆಹಲಿ: ‘ಕೋವಿಡ್–19ಗೆ ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಲಸಿಕೆಯ ಮಾನವ ಕ್ಲಿನಿಕಲ್ ಪ್ರಯೋಗವನ್ನು ಝೈಡಸ್ ಕ್ಯಾಡಿಲಾ ಆರಂಭಿಸಿರುವುದು ಆತ್ಮನಿರ್ಭರ ಭಾರತಕ್ಕೆ ಮಹತ್ವದ ಮೈಲಿಗಲ್ಲು’ ಎಂದು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ರೇಣು ಸ್ವರೂಪ್ ಗುರುವಾರ ತಿಳಿಸಿದ್ದಾರೆ.
ಮೊದಲ ಮತ್ತು ಎರಡನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಆರಂಭಿಸಲಾಗಿದೆ ಎಂದು ಝೈಡಸ್ ಕ್ಯಾಡಿಲಾ ಕಂಪನಿ ಬುಧವಾರ ತಿಳಿಸಿತ್ತು. ‘ಝೈಕೊವ್–ಡಿ’ ಲಸಿಕೆಯನ್ನು ಈ ಕಂಪನಿ ಅಭಿವೃದ್ಧಿಪಡಿಸಿದೆ. ರಾಷ್ಟ್ರೀಯ ಬಯೋಫಾರ್ಮಾ ಮಿಷನ್ ಅಡಿಯಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆಯು ಈ ಲಸಿಕೆ ತಯಾರಿಕೆಗೆ ಭಾಗಶಃ ಅನುದಾನ ನೀಡಿದೆ.
’ಕೊರೊನಾ ವೈರಸ್‌ಗೆ ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಮೊದಲ ಲಸಿಕೆ ಇದಾಗಿದೆ. ವೈಜ್ಞಾನಿಕ ಸಮುದಾಯಕ್ಕೂ ಇದೊಂದು ಬಹುದೊಡ್ಡ ಸಾಧನೆಯಾಗಿದೆ’ ಎಂದು ರೇಣು ಸ್ವರೂಪ್ ತಿಳಿಸಿದ್ದಾರೆ.
‘ಕ್ಲಿನಿಕಲ್ ಪ್ರಯೋಗಕ್ಕೂ ಮುನ್ನ ನಡೆದ ಪ್ರಯೋಗಗಳಲ್ಲಿ ಈ ಲಸಿಕೆ ಸುರಕ್ಷಿತ ಎನ್ನುವುದು ದೃಢಪಟ್ಟಿರುವುದರಿಂದ ಸಕಾರಾತ್ಮಕ ಫಲಿತಾಂಶ ದೊರೆಯುವ ನಿರೀಕ್ಷೆ ಇದೆ' ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ.
‘ಮನುಷ್ಯರ ಮೇಲೆ ಪ್ರಯೋಗ ಆರಂಭಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಎದುರಾಗಿರುವ ಸವಾಲುಗಳನ್ನು ಎದುರಿಸಲು ಇದು ನೆರವಾಗುವ ಭರವಸೆ ಇದೆ’ ಎಂದು ಝೈಡಸ್ ಕ್ಯಾಡಿಲಾ ಕಂಪನಿ ಅಧ್ಯಕ್ಷ ಪಂಕಜ್ ಪಟೇಲ್ ತಿಳಿಸಿದ್ದಾರೆ.
ಝೈಕಾವ್–ಡಿ ಮತ್ತು ಭಾರತ ಬಯೊಟೆಕ್‌ನ ಕೊವಾಕ್ಸಿನ್ ಲಸಿಕೆಗಳಿಗೆ ಮಾತ್ರ ಮಾನವನ ಮೇಲೆ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.