ಸೂರತ್ : ಪುಲ್ವಾಮಾ ದಾಳಿಯ ಬಳಿಕ ‘ನಿರ್ದಿಷ್ಟ ದಾಳಿ’ ಸಾಧ್ಯವಿಲ್ಲ ಎಂದು ಜನರು ಹೇಳುತ್ತಿದ್ದರು. ಆದರೆ, ಮೋದಿ ಅವರು ಸದ್ದಿಲ್ಲದೆ ತಮ್ಮ ನಿತ್ಯದ ಕೆಲಸ ಮಾಡುತ್ತಿದ್ದರು. ಅವರು ಪ್ರತಿದಾಳಿ ನಡೆಸಲು ನಿರ್ಧರಿಸಿ, ಅದನ್ನು ಯೋಜಿಸಿದರು. ನಮ್ಮ ವಾಯುಪಡೆಯ ಧೀರ ಯೋಧರು ಹೋಗಿ ನೂರಾರು ಯೋಧರನ್ನು ಕೊಂದು ಸುರಕ್ಷಿತವಾಗಿ ಹಿಂದಿರುಗಿದರು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಸಶಸ್ತ್ರ ಪಡೆಯ ಸಿಬ್ಬಂದಿಯ ಮೇಲೆ ನಡೆದ ದಾಳಿಗೆ ಪ್ರತೀಕಾರ ಮಾಡಿದ ಜಗತ್ತಿನ ಮೂರೇ ಮೂರು ದೇಶಗಳಲ್ಲಿ ಭಾರತ ಒಂದು. ಇಂತಹ ಧೈರ್ಯ ತೋರಿದ ದೇಶಗಳು ಅಮೆರಿಕ ಮತ್ತು ಇಸ್ರೇಲ್ ಮಾತ್ರ ಎಂದು ಶಾ ಹೇಳಿದ್ದಾರೆ.
‘ಭಯೋತ್ಪಾದನೆಯನ್ನು ಸಹಿಸಿಕೊಳ್ಳುವುದಿಲ್ಲ ಎಂಬುದರ ಅರ್ಥ ಏನು ಎಂಬುದನ್ನು ನಿರ್ದಿಷ್ಟ ದಾಳಿ ಮತ್ತು ವಾಯು ದಾಳಿಗೆ ಆದೇಶ ಕೊಡುವ ಮೂಲಕ ದೇಶದ ಜನರಿಗೆ ಮೋದಿ ಅವರು ತೋರಿಸಿಕೊಟ್ಟಿದ್ದಾರೆ. ಏನಾಯಿತು ಎಂಬುದು ವಿರೋಧ ಪಕ್ಷದ ನಾಯಕರಿಗೆ ಗೊತ್ತಿಲ್ಲ. ಮಮತಾ ಅವರು ಪುರಾವೆ ಕೊಡಿ ಎನ್ನುತ್ತಿದ್ದಾರೆ. ವಾಯು ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ರಾಹುಲ್ ಬಾಬಾ ಹೇಳುತ್ತಿದ್ದಾರೆ. ದಾಳಿಯ ಬಗ್ಗೆ ತನಿಖೆಯಾಗಬೇಕು ಎಂದು ಅಖಿಲೇಶ್ ಒತ್ತಾಯಿಸುತ್ತಿದ್ದಾರೆ. ಇಂತಹ ಹೇಳಿಕೆಗಳು ಪಾಕಿಸ್ತಾನದ ಮುಖದಲ್ಲಿ ನಗು ಮೂಡಿಸಿದೆ’ ಎಂದು ಶಾ ಹರಿಹಾಯ್ದಿದ್ದಾರೆ.
‘ಭಾರತವನ್ನು ಲಘುವಾಗಿ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂಬುದನ್ನು ಜಗತ್ತು ಈಗ ಅರ್ಥ ಮಾಡಿಕೊಂಡಿದೆ. ಭಾರತದ ಗಡಿ ವಿಚಾರದಲ್ಲಿ ಯಾರೂ ತಗಾದೆ ತೆಗೆಯುವುದು ಸಾಧ್ಯವಿಲ್ಲ ಎಂಬುದನ್ನು ಜಗತ್ತು ಒಪ್ಪಿದೆ. ಭಾರತದ ಯೋಧರನ್ನು ಮುಟ್ಟುವುದು ಸುಲಭವಲ್ಲ ಎಂಬುದು ಜಗತ್ತಿಗೆ ಅರ್ಥವಾಗಿದೆ. ಒಂದು ಗುಂಡು ಹಾರಿಸಿದರೆ ಅದಕ್ಕೆ ಫಿರಂಗಿಯಲ್ಲಿ ಪ್ರತ್ಯುತ್ತರ ನೀಡಲಾಗುವುದು’ ಎಂದು ಮೋಧ್ ವಣಿಕ ಸಮುದಾಯದ ಸಮಾವೇಶದಲ್ಲಿ ಶಾ ಪ್ರತಿಪಾದಿಸಿದ್ದಾರೆ.
***
ಮೋದಿ ಅವರಷ್ಟು ಧೈರ್ಯ ನಿಮಗೆ ಇಲ್ಲ ಎಂಬುದು ನಮಗೆ ಅರ್ಥವಾಗುತ್ತದೆ. ಮೋದಿ ಮತ್ತು ಸಶಸ್ತ್ರ ಪಡೆಗಳು ಮಾಡಿದ್ದನ್ನು ನಿಮಗೆ ಬೆಂಬಲಿಸಲು ಮತ್ತು ಹೊಗಳಲು ಆಗದಿದ್ದರೆ ಬೇಡ, ಕನಿಷ್ಠಪಕ್ಷ ನೀವು ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ
-ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಹತ್ತು ಗುಳ್ಳೆನರಿಗಳು ಜತೆಯಾದರೂ ಒಂದು ಸಿಂಹವನ್ನು ಬೇಟೆಯಾಡಲು ಸಾಧ್ಯವಿಲ್ಲ. ಬಿಹಾರದ ಜನರು 40 ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ಡಿಎಯನ್ನು ಗೆಲ್ಲಿಸಿ ಮೋದಿ ಅವರಿಗೆ ಆಶೀರ್ವದಿಸಲಿದ್ದಾರೆ
-ಸುಶೀಲ್ ಕುಮಾರ್ ಮೋದಿ, ಬಿಹಾರ ಉಪಮುಖ್ಯಮಂತ್ರಿ
ಅಮಿತ್ ಶಾ ಮತ್ತು ಬಿಜೆಪಿ ಪ್ರತಿಪಾದಿಸುವ ವಿಭಜನಕಾರಿ ಮತ್ತು ದ್ವೇಷ ಬಿತ್ತುವ ರಾಜಕಾರಣ ಅಸಹ್ಯ ಹುಟ್ಟಿಸುವಂತಿದೆ. ದೇಶಭಕ್ತಿಯ ಬಗ್ಗೆ ಶಾ ಅವರ ಉಪನ್ಯಾಸ ನಮಗೆ ಬೇಕಾಗಿಲ್ಲ. ನಮ್ಮ ಸಶಸ್ತ್ರ ಪಡೆಗಳು ಭಾರತದ್ದೇ ಹೊರತು ಮೋದಿ ಮತ್ತು ಶಾ ಅವರ ಬಿಜೆಪಿಯದ್ದಲ್ಲ
-ಡೆರೆಕ್ ಒ ಬ್ರಯಾನ್, ತೃಣಮೂಲ ಕಾಂಗ್ರೆಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.