ನವದೆಹಲಿ: ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಮರ ಸಾರಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ದೆಹಲಿ ಪೊಲೀಸರು ಮತ್ತು ಗುಜರಾತ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಾನುವಾರ ಗುಜರಾತ್‌ನ ಅಂಕಲೇಶ್ವರದಲ್ಲಿ ₹5,000 ಕೋಟಿ ಮೌಲ್ಯದ 518 ಕೆ.ಜಿ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಮಿತ್ ಶಾ, ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
‘ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಮರ ಸಾರಿದೆ. ಇಂತಹ ವ್ಯಸನಗಳಿಂದ ಯುವಕರನ್ನು ರಕ್ಷಿಸಿಲು ಸರ್ಕಾರ ಬದ್ಧವಾಗಿದೆ. ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆಯನ್ನು ಯಾವುದೇ ಅಡೆತಡೆಗಳಿಲ್ಲದೇ ಮುಂದುವರಿಸಲಿದ್ದೇವೆ’ ಎಂದು ಶಾ ಪುನರುಚ್ಚರಿಸಿದ್ದಾರೆ.
15 ದಿನಗಳಲ್ಲಿ ದೆಹಲಿ ಮತ್ತು ಗುಜರಾತ್‌ನಲ್ಲಿ ಕಾನೂನು ಜಾರಿ ಸಂಸ್ಥೆಗಳು ಒಟ್ಟು ₹13,000 ಕೋಟಿ ಮೌಲ್ಯದ 1,289 ಕೆ.ಜಿ ಕೊಕೇನ್ ಮತ್ತು 40 ಕೆ.ಜಿಯಷ್ಟು ಹೈಡ್ರೋಪೋನಿಕ್ ಥಾಯ್ಲೆಂಡ್ ಗಾಂಜಾವನ್ನು ವಶಪಡಿಸಿಕೊಂಡಿವೆ ಎಂದು ತಿಳಿದು ಬಂದಿದೆ.
ದೆಹಲಿ ಪೊಲೀಸರ ವಿಶೇಷ ದಳ ಮತ್ತು ಗುಜರಾತ್ ಪೊಲೀಸರು ಅಂಕಲೇಶ್ವರದ ಔಷಧ ಕಂಪನಿಯೊಂದರಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ 518 ಕೆ.ಜಿಯಷ್ಟು ಕೊಕೇನ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.