ADVERTISEMENT

ಪ್ರತ್ಯೇಕತಾವಾದಿಗಳ ಭದ್ರತೆ ರದ್ದು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 5:48 IST
Last Updated 18 ಫೆಬ್ರುವರಿ 2019, 5:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಐವರು ಪ್ರತ್ಯೇಕತಾವಾದಿ ನಾಯಕರಿಗೆ ನೀಡಲಾಗಿದ್ದ ಭದ್ರತೆಯನ್ನುಪುಲ್ವಾಮಾ ಆತ್ಮಾಹುತಿ ದಾಳಿಯ ಮೂರು ದಿನಗಳ ನಂತರ ರಾಜ್ಯ ಸರ್ಕಾರ ವಾಪಸ್‌ ಪಡೆದಿದೆ.

ಹುರಿಯತ್‌ ಮುಖಂಡರಾದ ಮೀರ್‌ವೈಜ್‌ ಉಮರ್‌ ಫಾರೂಕ್‌, ಪ್ರೊ. ಅಬ್ದುಲ್‌ ಗನಿ ಭಟ್‌, ಬಿಲಾಲ್‌ ಲೋನ್‌, ಜೆಕೆಎಲ್‌ಎಫ್ ನಾಯಕ ಹಾಶಿಮ್‌ ಖುರೇಷಿ ಮತ್ತು ಶಬೀರ್‌ಶಾ ಅವರಿಗೆ ನೀಡಲಾಗಿದ್ದ ಭದ್ರತಾ ಸಿಬ್ಬಂದಿ ಮತ್ತು ವಾಹನಗಳನ್ನು ಭಾನುವಾರ ಸಂಜೆಯಿಂದ ಹಿಂದಕ್ಕೆ ಪಡೆಯಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

‘ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ನಾವೆಂದೂ ಕೇಳಿರಲಿಲ್ಲ. ಭದ್ರತೆ ಹಿಂದಕ್ಕೆ ಪಡೆದರೂ ನಮಗೆ ಏನೂ ವ್ಯತ್ಯಾಸವಾಗುವುದಿಲ್ಲ’ ಎಂದು ಈ ನಾಯಕರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಪ್ರತ್ಯೇಕತಾವಾದಿ ನಾಯಕರಿಗೆ ನೀಡಿದ ಭದ್ರತೆ ಹಿಂಪಡೆಯುವ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಎರಡು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸೂಚನೆ ನೀಡಿದ್ದರು.

ಐವರು ನಾಯಕರಿಗೆ ನೀಡಲಾದ ಸರ್ಕಾರದ ಇನ್ನಿತರ ಸೌಲಭ್ಯಗಳನ್ನೂ ರದ್ದು ಮಾಡಲಾಗುವುದು ಎಂದು ಸರ್ಕಾರ ಹೇಳಿದೆ.

ಕಣಿವೆ ರಾಜ್ಯದ ಉಳಿದ ಪ್ರತ್ಯೇಕತಾವಾದಿ ನಾಯಕರಿಗೆ ನೀಡಲಾದ ಭದ್ರತೆ ಮತ್ತು ಇತರ ಸೌಲಭ್ಯ ಹಿಂದಕ್ಕೆ ಪಡೆಯುವ ಬಗ್ಗೆ ಪೊಲೀಸ್‌ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಶಕಗಳಿಂದ ಭದ್ರತೆ:ಪ್ರತ್ಯೇಕತವಾದಿ ನಾಯಕರಿಗೆ ಸರ್ಕಾರ ದಶಕಗಳಿಂದ ಭದ್ರತೆ ಒದಗಿಸಿದೆ.

1990ರಲ್ಲಿ ಮೀರ್‌ವೈಜ್‌ ಉಮರ್‌ ಫಾರೂಕ್‌ ತಂದೆಯನ್ನು ಉಗ್ರರು ಹತ್ಯೆ ಮಾಡಿದ ನಂತರ ಸರ್ಕಾರ ಅವರ ಕುಟುಂಬಕ್ಕೆ ಭದ್ರತೆ ಒದಗಿಸಿತ್ತು. ಮೀರ್‌ವೈಜ್‌ ಎರಡು ದಶಕದಿಂದ ಝೆಡ್‌ ಶ್ರೇಣಿಯ ಭದ್ರತೆ ಹೊಂದಿದ್ದಾರೆ.

2002ರಲ್ಲಿ ಹತ್ಯೆಯಾದ ಮತ್ತೊಬ್ಬ ಹುರಿಯತ್‌ ನಾಯಕ ಅಬ್ದುಲ್‌ ಗನಿ ಲೋನ್‌ ಅವರ ಪುತ್ರ ಬಿಲಾಲ್‌ ಲೋನ್‌. ತಂದೆಯ ಹತ್ಯೆಯ ಬಳಿಕ ಅವರಿಗೆ ಭದ್ರತೆ ನೀಡಲಾಗಿತ್ತು.

ಬಿಲಾಲ್‌ ಸಹೋದರ್‌ ಸಜ್ಜಾದ್‌ ಲೋನ್‌ ಹಿಂದಿನ ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ಮತ್ತೊಬ್ಬ ಪ್ರತ್ಯೇಕತಾವಾದಿ ನಾಯಕ ಶಬೀರ್‌ ಶಾ, ಹವಾಲಾ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿದ್ದಾರೆ.

ಕೋಟ್ಯಂತರ ವೆಚ್ಚ

* ರಾಜ್ಯ ಸರ್ಕಾರವು 1990 ಮತ್ತು 2000ರಲ್ಲಿ ಒದಗಿಸಿದ್ದ ಭದ್ರತೆಯನ್ನು ನಿರಾಕರಿಸಿದ್ದ ಹುರಿಯತ್‌ ಮುಖಂಡ ಸೈಯದ್‌ ಅಲಿ ಗಿಲಾನಿ ಮತ್ತು ಜೆಕೆಎಲ್‌ಎಫ್‌ ನಾಯಕ ಯಾಸಿನ್‌ ಮಲಿಕ್‌

* 2002ರಲ್ಲಿ ಹುರಿಯತ್‌ ನಾಯಕ ಅಬ್ದುಲ್‌ ಗನಿ ಹತ್ಯೆ ನಂತರ ಎಲ್ಲ ಹುರಿಯತ್‌ ನಾಯಕರಿಗೂ ಭದ್ರತೆ ಒದಗಿಸಿದ್ದ ರಾಜ್ಯ ಸರ್ಕಾರ

* ಜಮ್ಮು ಮತ್ತು ಕಾಶ್ಮೀರದ ಹೊರಗೆ ಪ್ರತ್ಯೇಕತಾವಾದಿ ನಾಯಕರು ಮತ್ತು ಅವರ ಭದ್ರತಾ ಸಿಬ್ಬಂದಿಯ ಪ್ರವಾಸ, ಊಟ, ವಸತಿ ವೆಚ್ಚವನ್ನು ಕೇಂದ್ರ ಭರಿಸುತ್ತಿದೆ

**

ಸರ್ಕಾರವೇ ಭದ್ರತೆ ಒದಗಿಸಿತ್ತು. ಸೌಲಭ್ಯ ವಾಪಸ್‌ ಪಡೆಯುವಂತೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದರಿಂದ ಹೆಚ್ಚಿನ ಬದಲಾವಣೆ ಆಗದು.

-ಆಲ್‌ ಪಾರ್ಟೀಸ್‌ ಹುರಿಯತ್‌ ಕಾನ್ಫರೆನ್ಸ್‌

**

ಕಾಶ್ಮೀರದ ಜನತೆಯೇ ನನಗೆ ಭದ್ರತೆ. ಸರ್ಕಾರದ ಭದ್ರತೆ ಬೇಡ. ಭಾರತ–ಪಾಕಿಸ್ತಾನದ ಮೇಲೆ ಯುದ್ಧದ ಕಾರ್ಮೋಡ ಕವಿದಿದೆ. ಮೊದಲು ಆ ಬಗ್ಗೆ ಗಮನ ಹರಿಸಲಿ.

–ಅಬ್ದುಲ್ ಗನಿ ಭಟ್‌, ಹುರಿಯತ್‌ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.