ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಆರ್‌ಜಿಐಎ) ಬುಧವಾರ ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
ಚೆನ್ನೈಗೆ ಹೊರಟಿದ್ದ ಎರಡು ವಿಮಾನಗಳು ಮತ್ತು ಚೆನ್ನೈನಿಂದ ಬಂದ ಮತ್ತೊಂದು ವಿಮಾನವನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ತಂಡಗಳು ಪರಿಶೀಲಿಸಿದವು. ಯಾವುದೇ ಸ್ಫೋಟಕಗಳು ಪತ್ತೆಯಾಗಲಿಲ್ಲ. ಈ ಬೆದರಿಕೆ ಸಂದೇಶಗಳು ಹುಸಿ ಎನ್ನುವುದು ದೃಢಪಟ್ಟಿತು.
ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿರುವ ಸಂಬಂಧ ಕಳೆದ ಒಂದು ವಾರದಲ್ಲಿ, ಹೈದರಾಬಾದ್ ಪೊಲೀಸರು ಎಂಟು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಸಂಪೂರ್ಣ ಭದ್ರತಾ ತಪಾಸಣೆಯ ನಂತರವೇ ವಿಮಾನಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಇಂತಹ ಹುಸಿ ಬೆದರಿಕೆ ಸಂದೇಶಗಳು ಅಮೂಲ್ಯವಾದ ಸಮಯ ಮತ್ತು ಇತರ ಸಂಪನ್ಮೂಲಗಳನ್ನು ವ್ಯರ್ಥಗೊಳಿಸುತ್ತವೆ ಎಂದು ಆರ್‌ಜಿಐ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಎಸ್‌ಎಚ್‌ಒ ಕೆ. ಬಾಲರಾಜು ಹೇಳಿದ್ದಾರೆ.
ಆನ್‌ಲೈನ್‌ನಲ್ಲಿನ ಅನಾಮಧೇಯ ಬಳಕೆದಾರರಿಂದ ಬರುತ್ತಿರುವ ಈ ಬೆದರಿಕೆ ಸಂದೇಶಗಳು ವ್ಯಾಪಕವಾದ ಶೋಧ ಮತ್ತು ವಿಮಾನ ಸಂಚಾರದಲ್ಲಿ ತೀವ್ರ ವಿಳಂಬಕ್ಕೆ ಕಾರಣವಾಗುತ್ತಿವೆ. ಇಂತಹ ಸಂದೇಶಗಳು ಬಂದಾಗ ಪ್ರತಿ ಬಾರಿಯೂ ತಪಾಸಣೆ ಹಾಗೂ ಇನ್ನಿತರ ಪ್ರಕ್ರಿಯೆಗಳಿಗೆ ಹಲವು ಏಜೆನ್ಸಿಗಳ ಒಳಗೊಳ್ಳುವಿಕೆ ಅಗತ್ಯವಾಗಿದೆ. ಹುಸಿ ಸಂದೇಶಗಳು ವಿಮಾನ ಸಂಚಾರದ ವೇಳಾಪಟ್ಟಿಗೆ ಅಡ್ಡಿಯಾಗುವುದಲ್ಲದೆ, ಭದ್ರತಾ ಸಂಪನ್ಮೂಲಗಳ ಮೇಲೆ ಒತ್ತಡವನ್ನು ಉಂಟುಮಾಡಿವೆ. ಪ್ರಯಾಣಿಕರ ವಿಶ್ವಾಸದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.