ಹೈದರಬಾದ್: ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ ಅವರು ವಾರಂಗಲ್ ಮಾದರಿಯಂತೆ ತೆಲಂಗಾಣ ಪಶುವೈದ್ಯ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ.
ಏನಿದು ವಾರಂಗಲ್ ಪ್ರಕರಣ?
2008ರ ಡಿಸೆಂಬರ್ 13ರಂದು ಎಂಜಿನಿಯರಿಂಗ್ ವಿದ್ಯಾರ್ಥಿನಿಯರಿಬ್ಬರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಪ್ರಕರಣ ಆಂಧ್ರಪ್ರದೇಶವನ್ನು ಬೆಚ್ಚಿಬೀಳಿಸಿತ್ತು.
ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳಲಿಲ್ಲ ಎಂದು ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶ್ರೀನಿವಾಸ್ (25) ಮತ್ತು ಆತನ ಸ್ನೇಹಿತರಾದ ಹರಿಕೃಷ್ಣಾ (24) ಮತ್ತು ಸಂಜತ್ (22) ಆ್ಯಸಿಡ್ ದಾಳಿ ನಡೆಸಿದ್ದರು.
ವಾರಂಗಲ್‌ನ ಕಾಕತೀಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ ಸ್ವಪ್ನಿಕ ಮತ್ತು ಪ್ರಣೀತಾ ತರಗತಿ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ ಆ್ಯಸಿಡ್ ಎರಚಿದ್ದರು.
ವಾರಂಗಲ್ ಎಸ್‌ಪಿಯಾಗಿದ್ದ ವಿಶ್ವನಾಥ ಸಜ್ಜನರ ನೇತೃತ್ವದ ತಂಡ ಘಟನೆಯಾಗಿ48 ಘಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದರು.ಮರುದಿನ ಸಾಕ್ಷ್ಯಗಳನ್ನುಸಂಗ್ರಹಿಸಲು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು.
ಆರೋಪಿಗಳಲ್ಲಿ ಒಬ್ಬ ಕಚ್ಚಾ ಬಾಂಬ್‌ನಿಂದ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದಾಗ, ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಲು ಸಜ್ಜನರಪೊಲೀಸರಿಗೆ ಆದೇಶ ನೀಡಿದ್ದರು. ಈ ವೇಳೆ ಮೂವರು ಆರೋಪಿಗಳು ಮೃತಪಟ್ಟಿದ್ದರು.
ಅಲ್ಲಿಯವರೆಗೆ ಸಾಮಾನ್ಯ ಪೊಲೀಸ್ ಅಧಿಕಾರಿಯಾಗಿದ್ದ ಸಜ್ಜನರ ಅವರು ಈ ಘಟನೆಯ ತರುವಾಯ ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದು ಹೆಸರು ಗಳಿಸಿದರು. ಆ್ಯಸಿಡ್ ದಾಳಿಯಾದ 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿತ್ತು. ಅದಾದ ಒಂದು ದಿನದೊಳಗೆ ಎನ್‌ಕೌಂಟರ್ ನಡೆದಿದೆ.
ಆಗ ನಡೆದಿದ್ದ ಎನ್‌ಕೌಂಟರ್ ಬಗ್ಗೆ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಆರೋಪಿಗಳ ಕುಟುಂಬದವರು ಪ್ರಶ್ನಿಸಿದ್ದರು. ಈ ಘಟನೆಯಿಂದ ಸಜ್ಜನರ ಅವರು ಸ್ಥಳೀಯರ ಮನಸ್ಸಿನಲ್ಲಿ ಹೀರೊ ಆದರು. ಸಂತ್ರಸ್ತೆ ಕಾಲೇಜಿನ ವಿದ್ಯಾರ್ಥಿಗಳು ಸಿಹಿ ಹಂಚಿ ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ದಾಳಿ ಸಂತ್ರಸ್ತೆ ಕುಟುಂಬದವರು ಎನ್‌ಕೌಂಟರ್‌ಗೆ ಖುಷಿ ವ್ಯಕ್ತಪಡಿಸಿದ್ದರು. ‘ಮಗಳಿಗೆ ಆ್ಯಸಿಡ್ ಎರಚಿಸಿದ್ದ ಶ್ರೀನಿವಾಸ್ ಎನ್‌ಕೌಂಟರ್‌ನಲ್ಲಿ ಹತ್ಯೆಗೊಂಡಿರುವುದು ಕೇಳಿ ನಿರಾಳವಾಯಿತು’ ಎಂದು ಸ್ವಪ್ನಿಕಾ ತಂದೆ ಪ್ರತಿಕ್ರಿಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.