ADVERTISEMENT

ಕೇರಳ | ಗೂಗಲ್ ಮ್ಯಾಪ್ ನಿರ್ದೇಶನ: ತೊರೆಗೆ ಬಿದ್ದ ಪ್ರವಾಸಿಗರು!

ಪಿಟಿಐ
Published 25 ಮೇ 2024, 15:34 IST
Last Updated 25 ಮೇ 2024, 15:34 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೊಟ್ಟಾಯಂ (ಕೇರಳ): ರಸ್ತೆಯ ಮಾರ್ಗದರ್ಶನಕ್ಕಾಗಿ ಗೂಗಲ್‌ ಮ್ಯಾಪ್‌ ಬಳಸಿದ ಹೈದರಾಬಾದ್‌ನ ಪ್ರವಾಸಿಗರು ತುಂಬಿ ಹರಿಯುತ್ತಿದ್ದ ತೊರೆಗೆ ಕಾರನ್ನು ಇಳಿಸಿದ್ದಾರೆ. 

ಮಹಿಳೆಯು ಸೇರಿದಂತೆ ನಾಲ್ವರು ಪ್ರವಾಸಿಗರಿದ್ದ ತಂಡ ಶುಕ್ರವಾರ ರಾತ್ರಿ ಕಾರಿನಲ್ಲಿ ಆಲಪ್ಪುಳ ಕಡೆಗೆ ತೆರಳುತ್ತಿದ್ದಾಗ ದಕ್ಷಿಣ ಕೇರಳದ ಕುರುಪ್ಪಂತಾರ ಬಳಿ ಈ ಘಟನೆ ನಡೆದಿದೆ.

ADVERTISEMENT

ಭಾರಿ ವರ್ಷಧಾರೆಯಿಂದಾಗಿ ಪ್ರವಾಸಿಗರು ಪ್ರಯಾಣಿಸುತ್ತಿದ್ದ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯುತ್ತಿತ್ತು. ಈ ಪ್ರದೇಶದ ಪರಿಚಯವಿಲ್ಲದಿದ್ದರಿಂದ ಅವರು, ಮಾರ್ಗದರ್ಶನಕ್ಕಾಗಿ ಗೂಗಲ್‌ ಮ್ಯಾಪ್‌ನ ಮೊರೆ ಹೋಗಿದ್ದರು. ನಕ್ಷೆಯು ಅವರನ್ನು ಉಕ್ಕೇರಿದ ತೊರೆಗೆ ಕರೆದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮೀಪದಲ್ಲಿದ್ದ ಪೊಲೀಸ್ ಗಸ್ತು ಘಟಕ ಹಾಗೂ ಸ್ಥಳೀಯರ ಪ್ರಯತ್ನದಿಂದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಅವರು ಪ್ರಯಾಣಿಸುತ್ತಿದ್ದ ಕಾರು ತೊರೆಯಲ್ಲಿ ಸಂಪೂರ್ಣ ಮುಳುಗಿತು. ಕ್ರೇನ್‌ ಬಳಸಿ ಕಾರನ್ನು ಹೊರ ತೆಗೆಯಲಾಗಿದೆ ಎಂದು ಕಡುತುರುತಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

‘ಮುನ್ನಾರ್‌ನಿಂದ ಆಲಪ್ಪುಳಕ್ಕೆ ಪ್ರಯಾಣಿಸುತ್ತಿದ್ದೆವು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಭಾರಿ ಮಳೆ ಸುರಿದಿದ್ದರಿಂದ ರಸ್ತೆ ಜಲಾವೃತಗೊಂಡಿತು. ಮಾರ್ಗದರ್ಶನಕ್ಕಾಗಿ ನಕ್ಷೆ ಬಳಸಿಕೊಂಡು ಗಂಟೆಗೆ 10 ಕಿ.ಮೀ. ವೇಗದಲ್ಲಿ ವಾಹನ ಚಲಾಯಿಸುತ್ತಿದ್ದೆ. ಈ ಸಂದರ್ಭ ಇದ್ದಕ್ಕಿದ್ದಂತೆ ಮುಂಭಾಗದ ಟೈರ್‌ಗಳು ನೀರಿನಲ್ಲಿ ಮುಳುಗಿದ್ದರಿಂದ ವಾಹನ ನಿಯಂತ್ರಣ ಕಳೆದುಕೊಂಡಿತು. ಹಿಂಭಾಗದ ಟೈರ್‌ಗಳು ಸಹ ನೀರಿನೊಳಗೆ ಇಳಿದಿದ್ದರಿಂದ ತೇಲಲಾರಂಭಿಸಿತು. ಎಲ್ಲರೂ ಹೊರಗೆ ಹಾರಿ, ದಡ ತಲುಪಿದೆವು’ ಎಂದು ಕಾರು ಚಾಲನೆ ಮಾಡುತ್ತಿದ್ದ ಪ್ರವಾಸಿಯೊಬ್ಬ ತಿಳಿಸಿದ್ದಾರೆ.

ಮಳೆಗಾಲದಲ್ಲಿ ರಸ್ತೆಗಳು ಜಲಾವೃತಗೊಂಡಾಗ ಇಂತಹ ಅಪಘಾತಗಳು ಸಂಭವಿಸುತ್ತವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಕೇರಳದಲ್ಲಿ ಗೂಗಲ್ ಮ್ಯಾಪ್ ಸಂಬಂಧಿತ ಅಪಘಾತಗಳು ವರದಿಯಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷದ ಅಕ್ಟೋಬರ್‌ನಲ್ಲೂ ಗೂಗಲ್ ನಕ್ಷೆ ಆಧರಿಸಿ ಚಲಿಸುತ್ತಿದ್ದ ಕಾರೊಂದು ನದಿಗೆ ಬಿದ್ದು ವೈದ್ಯರಿಬ್ಬರು ಮೃತಪಟ್ಟಿದ್ದರು. ಈ ಘಟನೆಯ ನಂತರ ಕೇರಳ ಪೊಲೀಸರು ಮಳೆಗಾಲದಲ್ಲಿ ತಂತ್ರಜ್ಞಾನ ಬಳಕೆಗೆ ಸಂಬಂಧಿಸಿದಂತೆ ಎಚ್ಚರಿಕೆಯ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.