ADVERTISEMENT

ಹೈದರಾಬಾದ್ ಅತ್ಯಾಚಾರ ಪ್ರಕರಣ: ಮತ್ತೊಬ್ಬ ಬಾಲಾರೋಪಿ ವಶಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2022, 11:34 IST
Last Updated 5 ಜೂನ್ 2022, 11:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್:ಇಲ್ಲಿನ ಜುಬಿಲಿ ಹಿಲ್ಸ್‌ ಬಂಜಾರದಲ್ಲಿ 17 ವರ್ಷದ ಬಾಲಕಿ ಮೇಲೆ ಐವರು ಸೇರಿ ನಡೆಸಿದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮತ್ತೊಬ್ಬ ಬಾಲಾರೋಪಿಯನ್ನು ನಗರ ಪೊಲೀಸರುಭಾನುವಾರ ವಶಕ್ಕೆ ಪಡೆದಿದ್ದಾರೆ.

ಶನಿವಾರವಷ್ಟೇ ಇಬ್ಬರು ಬಾಲಾರೋಪಿಗಳನ್ನು ವಶಕ್ಕೆ ಪಡೆದು,ಸಾದುದ್ದೀನ್‌ ಮಲ್ಲಿಕ್‌ (18) ಎಂಬ ಆರೋಪಿನ್ನು ಪೊಲೀಸರು ಬಂಧಿಸಿದ್ದರು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾದವರಲ್ಲಿ ಒಬ್ಬಾತ ತೆಲಂಗಾಣ ಆಡಳಿತರೂಢ ಟಿಆರ್‌ಎಸ್‌ನ ಮೈತ್ರಿ ಪಕ್ಷ ಎಐಎಂಐಎಂನ ಶಾಸಕರ ಪುತ್ರ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿರುವ ನಡುವೆ, ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್‌ಅವರುಎರಡು ದಿನಗಳ ಒಳಗೆ ಪ್ರಕರಣ ಸಂಬಂಧ ವಿವರವಾದ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ಆದೇಶಿಸಿದ್ದಾರೆ.

ADVERTISEMENT

‘ರಾಜ್ಯಪಾಲರು ಈ ಹೇಯ ಘಟನೆಯ ಬಗ್ಗೆ ತೀವ್ರ ನೊಂದಿದ್ದು, ದುಃಖಿತರಾಗಿದ್ದಾರೆ’ ಎಂದುತಮಿಳಿಸೈ ಅವರ ಪತ್ರಿಕಾ ಕಾರ್ಯದರ್ಶಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಕರಣದಲ್ಲಿ ಭಾಗಿಯಾದ ಐವರ ಪೈಕಿ ಒಬ್ಬ ವಯಸ್ಕ ಮತ್ತು ಇಬ್ಬರು ಬಾಲಾರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.ಉಳಿದ ಆರೋಪಿಗಳ ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದುಪಶ್ಚಿಮ ವಲಯದ ಡಿಸಿಪಿ ಜೋಯಲ್ ಡೇವಿಸ್ ತಿಳಿಸಿದ್ದಾರೆ.

ಮೇ 28ರಂದು ಹೈದರಾಬಾದ್‌ ನಗರದ ಜುಬಿಲಿ ಹಿಲ್ಸ್‌ ಬಂಜಾರಾ ಪ್ರದೇಶದ ಪಬ್‌ನಲ್ಲಿ ಹಗಲಿನ ಪಾರ್ಟಿ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಬಾಲಕಿಯನ್ನು ಡ್ರಾಪ್‌ ಕೊಡುವ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದು, ಮೂವರು ಬಾಲಕರು ಸೇರಿ ಐವರು ಕಾರಿನಲ್ಲೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮೂರು ದಿನಗಳ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣ ಮುಚ್ಚಿಹಾಕಲು ತೆಲಂಗಾಣ ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟಿಸುತ್ತಿರುವ ಬಿಜೆಪಿ, ಕಾಂಗ್ರೆಸ್‌ ಹಾಗೂ ಮಹಿಳಾ ಸಂಘಟನೆಗಳು ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು, ನಿಷ್ಪಕ್ಷಪಾತ ತನಿಖೆಯನ್ನು ಖಾತ್ರಿಪಡಿಸಬೇಕು ಎಂದು ತೆಲಂಗಾಣ ಸರ್ಕಾರವನ್ನು ಒತ್ತಾಯಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.