ಹೈದರಾಬಾದ್: ಅನಿವಾರ್ಯವಾಗಿ ನಡೆಸಿದ ಪ್ರತಿದಾಳಿಯಿಂದಾಗಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಸತ್ತರು. ಆರೋಪಿಗಳಲ್ಲಿ ಇಬ್ಬರು ಪೊಲೀಸರಿಂದ ಬಂದೂಕು ಕಸಿದು ಗುಂಡು ಹಾರಿಸಲು ಆರಂಭಿಸಿದರು ಎಂದು ತೆಲಂಗಾಣ ಪೊಲೀಸರು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದಾಗಲೇ ಅವರು ಕಲ್ಲು ಮತ್ತು ಬಡಿಗೆಯಿಂದ ದಾಳಿ ನಡೆಸಿದರು. ಆರೋಪಿ ಮೊಹಮ್ಮದ್ ಆರಿಫ್ ಮೊದಲು ಗುಂಡು ಹಾರಿಸಿದ. ಮೊದಲಿಗೆ ಸಂಯಮ ತೋರಿದ ಪೊಲೀಸರು, ಶರಣಾಗುವಂತೆ ಆರೋಪಿಗಳಿಗೆ ಹೇಳಿದರು. ಆದರೆ, ‘ಅನ್‌ಲಾಕ್’ ಮಾಡಿರಿಸಿದ್ದ ಬಂದೂಕನ್ನು ಕಸಿದುಕೊಂಡು ಆರೋಪಿಗಳು ಗುಂಡು ಹಾರಿಸಿದರು ಎಂದು ಸೈಬರಾ ಬಾದ್‌ಪೊಲೀಸ್ ಆಯುಕ್ತ ಸಿ.ವಿ. ಸಜ್ಜನರ್ ಹೇಳಿದ್ದಾರೆ.
ಆರೋಪಿಗಳು ಗುಂಡು ಹಾರಿಸುವಾಗ ಅವರ ಕೈಯಲ್ಲಿ ಕೋಳ ಇರಲಿಲ್ಲ. ಎನ್‌ಕೌಂಟರ್ ನಡೆದ ಸಮಯ ಶುಕ್ರವಾರ ಬೆಳಿಗ್ಗೆ 5.45ರಿಂದ 6.15.ಹತ್ತು ಮಂದಿ ಪೊಲೀಸರು ಇದ್ದ ತಂಡವು ಆರೋಪಿಗಳನ್ನು ಕರೆದೊಯ್ದಿತ್ತು. ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ಘಟನಾ ಸ್ಥಳದಲ್ಲಿ ಎಸೆದಿದ್ದ ಮೊಬೈಲ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಅವರನ್ನು ಅಲ್ಲಿಗೆ ಕರೆದೊಯ್ಯೊಲಾಗಿತ್ತು ಎಂದು ಸಜ್ಜನರ್ ತಿಳಿಸಿದ್ದಾರೆ.
ಆರೋಪಿಗಳ ದಾಳಿಯಿಂದಾಗಿ ಒಬ್ಬ ಸಬ್ ಇನ್‌ಸ್ಪೆಕ್ಟರ್ ಮತ್ತು ಒಬ್ಬ ಕಾನ್‌ಸ್ಟೆಬಲ್ ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಅವರಿಗೆ ಗುಂಡೇಟಿನ ಗಾಯಗಳಾಗಿಲ್ಲ ಎಂದು ಹೇಳಿದ್ದಾರೆ.
ಪಶು ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿದ ರೀತಿಯದ್ದೇ ಪ್ರಕರಣಗಳು ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ನಡೆದಿವೆಯೇ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ನಾಲ್ವರ ಪಾತ್ರ ಅವುಗಳಲ್ಲಿ ಇದೆಯೇ ಎಂಬುದನ್ನು ಪತ್ತೆ ಮಾಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಆರೋಪಿಗಳಿಗೆ ಭಾರಿ ಬೆದರಿಕೆ ಇತ್ತು. ಹಾಗಾಗಿ ಅವರನ್ನು ಘಟನಾ ಸ್ಥಳಕ್ಕೆ ರಾತ್ರಿಯ ಹೊತ್ತಿನಲ್ಲಿ ಕರೆದೊಯ್ಯಬೇಕಾಯಿತುಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.