ADVERTISEMENT

ಪಶು ವೈದ್ಯೆಯ ಮೇಲೆ ಅತ್ಯಾಚಾರ, ಸಜೀವ ದಹನ ಪ್ರಕರಣ: ಎನ್‌ಕೌಂಟರ್‌ ‘ನ್ಯಾಯ’

ನಾಲ್ವರು ಆರೋಪಿಗಳ ಹತ್ಯೆ

ಪಿಟಿಐ
Published 6 ಡಿಸೆಂಬರ್ 2019, 19:46 IST
Last Updated 6 ಡಿಸೆಂಬರ್ 2019, 19:46 IST
ಎನ್‌ಕೌಂಟರ್‌ನ ಕಾಲ್ಪಿನಿಕ ಚಿತ್ರ: ಭಾವು ಪತ್ತಾರ್
ಎನ್‌ಕೌಂಟರ್‌ನ ಕಾಲ್ಪಿನಿಕ ಚಿತ್ರ: ಭಾವು ಪತ್ತಾರ್   

ಹೈದರಾಬಾದ್‌/ನವದೆಹಲಿ:ತೆಲಂಗಾಣದ ಪಶು ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಸೈಬರಾಬಾದ್‌ ಪೊಲೀಸರು ಶುಕ್ರವಾರ ಬೆಳಿಗ್ಗೆ ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ್ದಾರೆ. ಕಾರ್ಯಾಚರಣೆಯ ನೇತೃತ್ವವನ್ನು ಪೊಲೀಸ್‌ ಆಯುಕ್ತ, ಕನ್ನಡಿಗ ವಿ.ಸಿ.ಸಜ್ಜನರ್‌ ವಹಿಸಿದ್ದರು. ಈ ಕಾರ್ಯಾಚರಣೆಗೆ ದೇಶದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ತ್ವರಿತ ನ್ಯಾಯದಾನಕ್ಕೆ ಇದು ಸರಿಯಾದ ಕ್ರಮ’ ಎಂಬ ಮೆಚ್ಚುಗೆ ಒಂದು ವರ್ಗದಿಂದ ವ್ಯಕ್ತವಾದರೆ, ‘ಪೊಲೀಸರು ಕಾನೂನು ಕೈಗೆತ್ತಿಕೊಳ್ಳುವುದು ಆತಂಕಕಾರಿ ಬೆಳವಣಿಗೆ’ ಎಂದು ಇನ್ನೊಂದು ವರ್ಗ ಕಳವಳ ವ್ಯಕ್ತಪಡಿಸಿದೆ. ಪ್ರಕರಣದ ಬಗ್ಗೆ ತಕ್ಷಣವೇ ತನಿಖೆ ನಡೆಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಆದೇಶಿಸಿದೆ.

ಆರೋಪಿಗಳನ್ನು ನ.29ರಂದು ಪೊಲೀಸರು ಬಂಧಿಸಿದ್ದರು. ಪಶುವೈದ್ಯೆಯ ಸಜೀವ ದಹನದ ಪ್ರಕರಣವು ದೇಶದಲ್ಲಿ ಭಾರಿ ಆಕ್ರೋಶ
ಕ್ಕೆ ಕಾರಣವಾಗಿತ್ತು. 2012ರ ಡಿ. 16ರಂದು ದೆಹಲಿಯಲ್ಲಿ ಫಿಜಿಯೋಥೆರಪಿ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಕ್ರೌರ್ಯವನ್ನು ಇದು ಮತ್ತೆ ನೆನಪಿಸಿತ್ತು.ದೆಹಲಿಯ ವಿದ್ಯಾರ್ಥಿನಿಯನ್ನು ‘ನಿರ್ಭಯಾ’ ಎಂದು ಹೆಸರಿಸಲಾಗಿತ್ತು. ಪಶುವೈದ್ಯೆಯನ್ನು ಈಗ ‘ದಿಶಾ’ ಎಂದು ಹೆಸರಿಸಲಾಗಿದೆ.

ADVERTISEMENT

‘ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಸುದ್ದಿಯನ್ನು ಸುದ್ದಿವಾಹಿನಿಗಳ ಮೂಲಕ ತಿಳಿದೆವು. ನಮಗೆ ಸಂತಸವಾಗಿದೆ. ಜನರಿಗೂ ಸಂತಸವಾಗಿದೆ.’ ಎಂದು ಪಶುವೈದ್ಯೆಯ ತಂದೆ ಹೇಳಿದ್ದಾರೆ.

ಪೊಲೀಸರನ್ನು ಶಿಕ್ಷಿಸಬೇಡಿ ಎಂದ ನಿರ್ಭಯಾ ಕುಟುಂಬ

ಎನ್‌ಕೌಂಟರ್‌ನಿಂದಾಗಿ ತಮಗೆ ತೃಪ್ತಿಯಾಗಿದೆ ಎಂದು ನಿರ್ಭಯಾ ಹೆತ್ತವರು ಹೇಳಿದ್ದಾರೆ. ತಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಂದವರಿಗೂ ಬೇಗ ಗಲ್ಲು ಶಿಕ್ಷೆಯಾಗಿ ತಮಗೆ ನ್ಯಾಯ ದೊರೆಯಲಿ ಎಂದಿದ್ದಾರೆ. ನಿರ್ಭಯಾ ಪ್ರಕರಣವಾಗಿ ಏಳು ವರ್ಷಗಳಾಗಿವೆ.

ಎನ್‌ಕೌಂಟರ್‌ನಲ್ಲಿ ಭಾಗಿಯಾದ ಪೊಲೀಸರಿಗೆ ಯಾವುದೇ ಶಿಕ್ಷೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ನಿರ್ಭಯಾ ತಾಯಿ ವಿನಂತಿಸಿದ್ದಾರೆ. ‘ಹೈದರಾಬಾದ್‌ ವೈದ್ಯೆಯ ಕುಟುಂಬದವರು ನ್ಯಾಯಕ್ಕಾಗಿ ನಮ್ಮ ಹಾಗೆ ಏಳು ವರ್ಷ ಕಾಯಬೇಕಾದ ಅಗತ್ಯ ಬರಲಿಲ್ಲ. ಪೊಲೀಸರು ಮಾಡಿದ್ದು ಸರಿಯಾಗಿಯೇ ಇದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಭ್ರಮ: ಎನ್‌ಕೌಂಟರ್‌ ಸ್ಥಳದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಪೊಲೀಸರನ್ನು ಅಭಿನಂದಿಸಲು ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ‘ತೆಲಂಗಾಣ ಪೊಲೀಸ್‌ ಜಿಂದಾಬಾದ್‌’ ಎಂಬ ಘೋಷಣೆ ಜೋರಾಗಿಯೇ ಮೊಳಗಿತು. ಕೆಲವು ಮಹಿಳೆಯರು ಪೊಲೀಸರಿಗೆ ಸಿಹಿಯನ್ನೂ ಹಂಚಿದರು. ಪೊಲೀಸರ ಮೇಲೆ ಹೂವಿನ ಪಕಳೆಗಳ ಮಳೆಗರೆಯಲಾಯಿತು.

***

ಕಾನೂನು ತನ್ನ ಕರ್ತವ್ಯ ನಿರ್ವಹಿಸಿದೆ ಎಂದಷ್ಟೇ ನಾನು ಹೇಳಬಲ್ಲೆ. ಎನ್‌ಎಚ್‌ಆರ್‌ಸಿ ಮತ್ತು ಸರ್ಕಾರಕ್ಕೆ ತನಿಖೆಯ ವರದಿ ನೀಡಲಾಗುವುದು. ಆರೋಪಿಗಳು ಗುಂಡಿನ ಚಕಮಕಿಯಲ್ಲಿ ಸತ್ತರು

– ವಿ.ಸಿ. ಸಜ್ಜನರ್‌,ಸೈಬರಾಬಾದ್‌ ಪೊಲೀಸ್‌ ಆಯುಕ್ತ

ಅಪರಾಧ ನ್ಯಾಯ ವ್ಯವಸ್ಥೆಯ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ ಎಂಬುದು ಚಿಂತೆಯ ವಿಚಾರ. ನ್ಯಾಯ ವ್ಯವಸ್ಥೆ ಸರಿಪಡಿಸಲು ಸರ್ಕಾರಗಳು ಜತೆಯಾಗಿ ಕ್ರಮ ಕೈಗೊಳ್ಳಬೇಕು

- ಅರವಿಂದ ಕೇಜ್ರಿವಾಲ್‌,ದೆಹಲಿ ಮುಖ್ಯಮಂತ್ರಿ

ಇದು ಘೋರ ಕೃತ್ಯ. ನಿಮ್ಮ ಇಷ್ಟದಂತೆ ಜನರನ್ನು ಕೊಲ್ಲಲು ಅವಕಾಶ ಇಲ್ಲ. ನೀವು ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ. ಹೇಗಿದ್ದರೂ ಅವರನ್ನು (ಆರೋಪಿಗಳು) ನ್ಯಾಯಾಲಯವು ಗಲ್ಲಿಗೇರಿಸುತ್ತಿತ್ತು

- ಮೇನಕಾ ಗಾಂಧಿ,ಬಿಜೆಪಿ ಸಂಸದೆ

ನ್ಯಾಯಾಲಯದ ಮೂಲಕ ಅವರಿಗೆ ಗಲ್ಲು ಶಿಕ್ಷೆಯಾಗಬಹುದು ಎಂದುಕೊಂಡಿದ್ದೆವು. ಪೊಲೀಸರ ನಡೆಯು ಅಪರಾಧಿಗಳಿಗೆ ಸಂದೇಶ ನೀಡಿದೆ. ಇಂತಹ ಹೀನ ಕೃತ್ಯಗಳು ಇನ್ನು ಮುಂದೆ ನಡೆಯದಂತಾಗಲಿ

- ಪಶುವೈದ್ಯೆಯ ಸಹೋದರಿ

ಮುಂಜಾನೆ ನಡೆದದ್ದು...

1. ಆರೋಪಿಗಳು ನೀಡಿದ್ದ ಹೇಳಿಕೆಗಳು ಮತ್ತು ಕೃತ್ಯದ ಸ್ಥಳಗಳನ್ನು ಹೋಲಿಸಿ ನೋಡುವ ಉದ್ದೇಶದಿಂದ, ಆರೋಪಿಗಳನ್ನು ಮೊದಲು ಶಂಶಾಬಾದ್ ಟೋಲ್‌ ಕೇಂದ್ರದ ಬಳಿ ಕರೆತರಲಾಯಿತು. ಅತ್ಯಾಚಾರ ಮತ್ತು ಕೊಲೆ ನಡೆದ ಸ್ಥಳಗಳ ಪರಿಶೀಲನೆ ನಡೆಸಲಾಯಿತು

2. ಪಶುವೈದ್ಯೆಯ ಶವವನ್ನು ಸುಟ್ಟಿದ್ದ ಚತನಪಲ್ಲಿ ಅಂಡರ್‌ಪಾಸ್ ಬಳಿಗೆ ಆರೋಪಿಗಳನ್ನು ಕರೆದೊಯ್ಯುವಷ್ಟರಲ್ಲಿ ತಡರಾತ್ರಿ 3 ಗಂಟೆಯಾಗಿತ್ತು

3. ಶವ ಸುಟ್ಟ ಸ್ಥಳದ ಬಳಿಯೇ ಸಂತ್ರಸ್ತೆಯ ಮೊಬೈಲ್‌ ಎಸೆದಿದ್ದೆವು ಎಂದು ಆರೋಪಿಗಳು ಹೇಳಿದ್ದರು. ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆಗ ಆರೋಪಿಗಳು ಪೊಲೀಸರತ್ತ ಕಲ್ಲು ತೂರಿದರು. ಇಬ್ಬರು ಆರೋಪಿಗಳು ಪೊಲೀಸರ ಬಂದೂಕು ಕಿತ್ತುಕೊಂಡರು. ಆರೋಪಿ ಆರಿಫ್ ಪೊಲೀಸರತ್ತ ಗುಂಡುಹಾರಿಸಿದ

4. ಶರಣಾಗುವಂತೆ ಪೊಲೀಸರು ಆರೋಪಿಗಳಿಗೆ ಸೂಚನೆ ನೀಡಿದರು. ಇದನ್ನು ಕಡೆಗಣಿಸಿ, ಆರೋಪಿಗಳು ಮತ್ತೆ ಗುಂಡು ಹಾರಿಸಿದರು. ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳತ್ತ ಗುಂಡುಹಾರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.