ADVERTISEMENT

ಹೈದರಾಬಾದ್ ವಿದ್ಯಾರ್ಥಿ ಅಮೆರಿಕದಲ್ಲಿ ಅಪಹರಣ: ಹಣಕ್ಕಾಗಿ ದುಷ್ಕರ್ಮಿಗಳಿಂದ ಕರೆ

ಪಿಟಿಐ
Published 20 ಮಾರ್ಚ್ 2024, 12:51 IST
Last Updated 20 ಮಾರ್ಚ್ 2024, 12:51 IST
ಅಪಹರಣ (ಪ್ರಾತಿನಿಧಿಕ ಚಿತ್ರ)
ಅಪಹರಣ (ಪ್ರಾತಿನಿಧಿಕ ಚಿತ್ರ)   

ಹೈದರಾಬಾದ್: ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ತೆಲಂಗಾಣದ ಹೈದರಾಬಾದ್ ಮೂಲದ 25 ವರ್ಷದ ವಿದ್ಯಾರ್ಥಿ ಮಾರ್ಚ್ 7ರಿಂದ ನಾಪತ್ತೆಯಾಗಿದ್ದು, ಮಗನನ್ನು ಬಿಡುಗಡೆ ಮಾಡಬೇಕಾದರೆ ಹಣ ಕೊಡುವಂತೆ ಕರೆ ಬರುತ್ತಿದೆ ಎಂದು ಕುಟುಂಬ ತಿಳಿಸಿದೆ.

ಇಲ್ಲಿನ ನಚರಮ್ ಪ್ರದೇಶದ ನಿವಾಸಿಯಾದ ಮೊಹಮ್ಮದ್ ಅಬ್ದುಲ್ ಎಂಬ ವಿದ್ಯಾರ್ಥಿ, ಕ್ಲೇವ್ ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ 2023ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಅವರು ಕ್ಲೇವ್ ಲ್ಯಾಂಡ್‌ನಲ್ಲೇ ನೆಲೆಸಿದ್ದರು ಎಂದು ಕುಟುಂಬ ತಿಳಿಸಿದೆ.

ಮಾರ್ಚ್ 7ರಂದು ನನ್ನ ಮಗ ದೂರವಾಣಿ ಮೂಲಕ ಮಾತನಾಡಿದ್ದ. ಆ ಬಳಿಕ, ಆತ ಕುಟುಂಬದ ಸಂಪರ್ಕಕ್ಕೆ ಸಿಕ್ಕಿಲ್ಲ. ಮೊಬೈಲ್ ಸ್ವಿಚ್‌ಆಫ್ ಆಗಿದೆ ಎಂದು ಅಬ್ದುಲ್ ತಂದೆ ಮೊಹಮ್ಮದ್ ಸಲೀಮ್ ನೋವು ತೋಡಿಕೊಂಡಿದ್ದಾರೆ.

ADVERTISEMENT

ಅಬ್ದುಲ್ ನಾಪತ್ತೆ ಬಗ್ಗೆ ಕ್ಲೇವ್ ಲ್ಯಾಂಡ್ ಪೊಲೀಸರಿಗೆ ದೂರು ನೀಡಿರುವುದಾಗಿ ಆತನ ಜೊತೆಗಿದ್ದ ಸ್ನೇಹಿತರು ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ.

ಈ ಮಧ್ಯೆ, ಮಾರ್ಚ್ 16ರಂದು ಅಬ್ದುಲ್ ಕುಟುಂಬಕ್ಕೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ, ಡ್ರಗ್ಸ್ ಮಾರಾಟ ಮಾಡುವ ಗ್ಯಾಂಗ್ ಅವನನ್ನು ಬಂಧಿಸಿದೆ. ಆತನನ್ನು ಬಿಡುಗಡೆ ಮಾಡಬೇಕಾದರೆ 1,200 ಡಾಲರ್ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ತಂದೆ ಸಲೀಮ್ ತಿಳಿಸಿದ್ದಾರೆ.

ಒಂದೊಮ್ಮೆ, ಹಣ ನೀಡಲು ವಿಫಲವಾದರೆ ಅಬ್ದುಲ್ ಕಿಡ್ನಿಗಳನ್ನು ಮಾರಾಟ ಮಾಡುವುದಾಗಿಯೂ ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ಅವರುತಿಳಿಸಿದ್ದಾರೆ.

‘ನಿನ್ನೆ ಅಪರಿಚಿತ ದೂರವಾಣಿ ಸಂಖ್ಯೆಯಿಂದ ನನಗೆ ಕರೆ ಬಂದಿತ್ತು. ನನ್ನ ಮಗನನ್ನು ಅಪಹರಿಸಿರುವುದಾಗಿ ವ್ಯಕ್ತಿಯೊಬ್ಬ ಹೇಳಿದ. ಅಲ್ಲದೆ, ಹಣಕ್ಕಾಗಿ ಬೇಡಿಕೆ ಇಟ್ಟ. ಹಣವನ್ನು ಹೇಗೆ ತಲುಪಿಸಬೇಕೆಂಬ ಬಗ್ಗೆ ಆತ ತಿಳಿಸಲಿಲ್ಲ.ಮಗನ ಜೊತೆ ಮಾತನಾಡಲು ಅವಕಾಶ ನೀಡುವಂತೆ ಮಾಡಿದ ಮನವಿಯನ್ನು ಒಪ್ಪಲಿಲ್ಲ’ಎಂದು ಸಲೀಮ್ ಹೇಳಿದ್ದಾರೆ.

ಅಗತ್ಯ ಕ್ರಮ ಕೈಗೊಂಡು ಮಗನನ್ನು ಪತ್ತೆ ಮಾಡಿ, ಕರೆತರುವಂತೆ ಕುಟುಂಬ ಸದಸ್ಯರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತಂತೆ ಸಲೀಮ್, ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.