ನವದೆಹಲಿ: ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಘಟನೆ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿದೆ. ಅತ್ಯಾಚಾರಿಗಳಿಗೆ ಮರಣದಂಡನೆ ನೀಡಬೇಕು, ಸಾರ್ವಜನಿಕವಾಗಿ ಅವರನ್ನು ಥಳಿಸಬೇಕು ಎಂಬಿತ್ಯಾದಿ ಒತ್ತಾಯಗಳು ಸದಸ್ಯರಿಂದ ಸೋಮವಾರ ಕೇಳಿಬಂದವು.
ದೇಶದ ವಿವಿಧ ಭಾಗಗಳಲ್ಲಿ ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯವನ್ನು ಸದಸ್ಯರು ಪಕ್ಷಭೇದ ಮರೆತು ಖಂಡಿಸಿದರು. ಅಪರಾಧಿಗಳನ್ನು ಶಿಕ್ಷಿಸಲು ಕಾನೂನಿನ ಕೈಗಳನ್ನು ಬಿಗಿಗೊಳಿಸುವ ಹಾಗೂ ಅದಕ್ಕೆ ಕಾಲಮಿತಿ ನಿಗದಿಪಡಿಸುವ ಅಗತ್ಯವಿದೆ ಎಂದರು.
ಸಂತ್ರಸ್ತರಿಗೆ ಶೀಘ್ರಗತಿಯಲ್ಲಿ ನ್ಯಾಯ ಒದಗಿಸಲು ಕಠಿಣ ನಿಯಮಗಳನ್ನು ಒಳಗೊಂಡ ತಿದ್ದುಪಡಿ ಮಸೂದೆ ಜಾರಿಗೊಳಿಸಲು ಬದ್ಧ ಎಂದು ಸರ್ಕಾರ ಭರವಸೆ ನೀಡಿತು. ಮೇಲ್ಮನೆಯಲ್ಲಿ ಮಾತನಾಡಿದ ಸಂಸದೆ ಜಯಾ ಬಚ್ಚನ್, ‘ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಧರ್ಮ, ಜಾತಿ ಎಂದು ಪಕ್ಷಪಾತ ಮಾಡದೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಒತ್ತಾಯಿಸಿದರು.
ಅಪರಾಧಿಗಳು ಮತ್ತೆ ಹೀನ ಕೃತ್ಯಗಳಲ್ಲಿ ತೊಡಗುವುದನ್ನು ತಡೆಯಲು, ಅವರನ್ನು ನಿರ್ವೀರ್ಯಗೊಳಿಸುವ ಆದೇಶ ನೀಡಲು ಕೋರ್ಟ್‌ಗಳಿಗೆ ಅಧಿಕಾರ ನೀಡಬೇಕು ಎಂದು ಡಿಎಂಕೆ ಸಂಸದ ಪಿ. ವಿಲ್ಸನ್ ಅಭಿಪ್ರಾಯಪಟ್ಟರು.
ಕಾಲಮಿತಿಯಲ್ಲಿ ವಿಚಾರಣೆ ಹಾಗೂ ಶಿಕ್ಷೆ ಪ್ರಕ್ರಿಯೆ ಮುಗಿಯಬೇಕು ಎಂದು ಕಾಂಗ್ರೆಸ್‌ನ ಮೊಹಮ್ಮದ್ ಅಲಿ ಖಾನ್, ಎಎಪಿ ಸಂಸದ ಸಂಜಯ್ ಸಿಂಗ್ ಒತ್ತಾಯಿಸಿದರು. ‘ಇಂತಹ ಪ್ರಕರಣಗಳನ್ನು ನಾವು ಒಗ್ಗಟ್ಟಾಗಿ ಖಂಡಿಸುತ್ತೇವೆ’ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.
ಕಾಯ್ದೆ ತಿದ್ದುಪಡಿಗೆ ಸರ್ಕಾರ ಸಿದ್ಧವಿದ್ದು, ಈ ಸಂಬಂಧ ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಪೊಲೀಸ್ ಪಡೆಗ
ಳಿಗೆ ಪತ್ರ ಬರೆಯಲಾಗಿದೆ ಎಂದು ಸಚಿವ ಜಿ. ಕೃಷ್ಣನ್ ರೆಡ್ಡಿ ಮಾಹಿತಿ ನೀಡಿದರು.
ಮಹಿಳೆಯರ ವಿರುದ್ಧದ ಕ್ರೌರ್ಯ ತಡೆಗೆ ತೆಲಂಗಾಣ ಸರ್ಕಾರ ಆದ್ಯತೆ ನೀಡಿದ್ದು, ಘಟನೆ ನಡೆದ ಆರು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಟಿಆರ್‌ಎಸ್ ಸಂಸದ ನಾಗೇಶ್ವರ ರಾವ್ ತಿಳಿಸಿದರು. ಕಾನೂನಿಗೆ ತಿದ್ದುಪಡಿ ತಂದು ಇಂತಹ ಪ್ರಕರಣಗಳಲ್ಲಿ 30 ದಿನದೊಳಗೆ ನ್ಯಾಯದಾನ ಆಗಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯಸಭೆಯಲ್ಲಿ ಚರ್ಚೆಯ ವೇಳೆ ಮಾತನಾಡಿದ ಸಭಾಪತಿ ಎಂ. ವೆಂಕಯ್ಯ ನಾಯ್ಡು, ‘ಮಹಿಳೆಯರ ಘನತೆಗೆ ಧಕ್ಕೆ ತರುವ ಇಂತಹ ಘಟನೆಗಳು ನಿಲ್ಲಬೇಕು. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆ ಬಗ್ಗೆ ಚಿಂತಿಸಬೇಕಿದೆ’ ಎಂದರು.
ದೆಹಲಿಯ ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲಾಗಿದ್ದರೂ, ಮೇನ್ಮನವಿ ಅರ್ಜಿಗಳ ಕಾರಣ, ಅವರಿಗೆ ಶಿಕ್ಷೆ ಇನ್ನಷ್ಟೇ ಜಾರಿಯಾಗಬೇಕಿದೆ ಎಂದು ಬಿಜೆಪಿಯ ಆರ್.ಕೆ ಸಿನ್ಹಾ ಹೇಳಿದರು.
ಆರೋಪಿಯ ಬೆತ್ತಲೆ ಮೆರವಣಿಗೆ
ನಾಗಪುರ: ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಆರೋಪದ ಮೇಲೆ 35 ವರ್ಷದ ವ್ಯಕ್ತಿಯೊಬ್ಬನ ಬೆತ್ತಲೆ ಮೆರವಣಿಗೆ ಮಾಡಿದ ಘಟನೆ ಮಹಾರಾಷ್ಟ್ರದ ನಾಗಪುರ ಸಮೀಪದ ಪರಡಿ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ.
ಜವಾಹರ್ ವೈದ್ಯ ಎಂಬಾತನನ್ನು ಪೊಲೀಸರಿಗೆ ಒಪ್ಪಿಸುವ ಮುನ್ನ ಆತನನ್ನು ಥಳಿಸಿದ ಸ್ಥಳೀಯರು, ಕೈಗಳನ್ನು ಹಗ್ಗದಿಂದ ಕಟ್ಟಿ, ಬೀದಿಯಲ್ಲಿ ಮೆರವಣಿಗೆ ಮಾಡಿದರು. ನಗರದ ಸಹಕಾರಿ ಬ್ಯಾಂಕ್‌ವೊಂದರಲ್ಲಿ ಹಣ ಸಂಗ್ರಹಿಸುವ ಏಜೆಂಟ್ ಆಗಿ ಆರೋಪಿ ಕೆಲಸ ಮಾಡುತ್ತಿದ್ದಾನೆ.
‘ಹಣ ಸಂಗ್ರಹಿಸುವ ಸಲುವಾಗಿ ಸಂತ್ರಸ್ತ ಬಾಲಕಿಯ ಮನೆಗೆ ನಿತ್ಯವೂ ಆರೋಪಿ ಹೋಗಿಬರುತ್ತಿದ್ದ. ಬಾಲಕಿ ಒಬ್ಬಂಟಿಯಾಗಿರುವುದನ್ನು ಮನಗಂಡ ಆತ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ. ಮನೆಯಿಂದ ಹೊರಹೋಗಿದ್ದ ಬಾಲಕಿಯ ತಾಯಿ ಅದೇ ಸಮಯದಲ್ಲಿ ವಾಪಸಾಗಿ, ಸಹಾಯಕ್ಕೆ ಕೂಗಿಕೊಂಡಿದ್ದಾರೆ. ತಕ್ಷಣ ನೆರವಿಗೆ ಬಂದ ಅಕ್ಕಪಕ್ಕದ ಮನೆಯ ಜನರು ಆರೋಪಿಯನ್ನು ಥಳಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ
ದೇಶದ ವಿವಿಧೆಡೆ ವರದಿಯಾಗುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್ ಅವರು ದೆಹಲಿಯ ಜಂತರ್‌ಮಂತರ್‌ನಲ್ಲಿ ಮಂಗಳವಾರದಿಂದ (ಡಿ.3)
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ಮೊಬೈಲ್, ಇಂಟರ್‌ನೆಟ್ ಕಾರಣ: ಸಚಿವ ಕಲ್ಲಾ
(ಜೈಪುರ ವರದಿ): ಪರಿಶೀಲನೆಗೊಳಪಡದ ಮೊಬೈಲ್ ಹಾಗೂ ಇಂಟರ್‌ನೆಟ್ ಬಳಕೆಯಿಂದಾಗಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗಿವೆ ಎಂದು ರಾಜಸ್ಥಾನದ ಸಚಿವ ಬಿ.ಡಿ.ಕಲ್ಲಾ ಅವರು ಸೋಮವಾರ ಹೇಳಿದ್ದಾರೆ.
‘ನಮ್ಮ ಸುತ್ತಲಿನ ಹೆಣ್ಣುಮಕ್ಕಳಿಗೆ ಗೌರವ ಕೊಡುವುದುನ್ನು ಮಕ್ಕಳಿಗೆ ಹೇಳಿಕೊಡಬೇಕು. ಇಂಟರ್‌ನೆಟ್‌ನಲ್ಲಿ ಅಶ್ಲೀಲ ದೃಶ್ಯಗಳು ಪ್ರಸಾರವಾಗದಂತೆ ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.
ಮೋದಿ ಮೌನ ಪ್ರಶ್ನಿಸಿದ ಕಾಂಗ್ರೆಸ್
ಪಶುವೈದ್ಯೆಯ ಅತ್ಯಾಚಾರ ಪ್ರಕರಣದಲ್ಲಿ ಪ್ರತಿಕ್ರಿಯಿಸದೆ ಮೌನ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಿಳಾ–ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
‘ಬೇಟಿ ಬಚಾವೊ, ಬೇಟಿ ಪಢಾವೋ ಬಗ್ಗೆ ನಾವು ಮಾತನಾಡುತ್ತೇವೆ. ಹೆಣ್ಣುಮಕ್ಕಳು ಓದು ಮುಗಿಸಿ ಕೆಲಸಕ್ಕೆ ಸೇರುತ್ತಾರೆ. ಆದರೆ ಇಂತಹ ಅಚಾತುರ್ಯ ಘಟಿಸಿದಾಗ, ಆಳುವ ಸರ್ಕಾರಗಳ ನಾಯಕರು ಮೌನವಾಗಿ ನೋಡುತ್ತಾ ಕುಳಿತಿರುತ್ತಾರೆ’ ಎಂದು ಕಾಂಗ್ರೆಸ್ ಸಂಸದೆ ಅಮೀ ಯಾಗ್ನಿಕ್ ಹೇಳಿದರು. ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ, ಈ ಸಂಬಂಧ ತುರ್ತು ಯೋಜನೆಯೊಂದನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
***
ಈಗ ಅತ್ಯವಿರುವುದು ಮಸೂದೆ (ಬಿಲ್) ಅಲ್ಲ. ಬೇಕಿರುವುದು ರಾಜಕೀಯ ಇಚ್ಛಾಶಕ್ತಿ (ವಿಲ್). ಮನಸ್ಥಿತಿ ಬದಲಾಗಿ ದುಷ್ಟತೆಯನ್ನು (ಈವಿಲ್) ಕೊಲ್ಲಬೇಕಿದೆ (ಕಿಲ್)
- ಎಂ. ವೆಂಕಯ್ಯ ನಾಯ್ಡು, ಸಭಾಪತಿ
ನಿರ್ಭಯಾ ಪ್ರಕರಣದ ಬಳಿಕ ಕಠಿಣ ಕಾನೂನು ಜಾರಿಗೊಳಿಸಿದ್ದರೂ, ಇಂತಹ ಹೀನ ಕೃತ್ಯಗಳು ಮುಂದುವರಿದಿವೆ
ರಾಜನಾಥ್ ಸಿಂಗ್, ರಕ್ಷಣಾ ಸಚಿವ
ಅತ್ಯಾಚಾರಿಗಳಿಗೆ ಇನ್ನಷ್ಟು ಕಠಿಣ ಶಿಕ್ಷೆ ನೀಡಲು ಅನುವಾಗುವಂತೆ ಐಪಿಸಿ ಹಾಗೂ ಸಿಆರ್‌ಪಿಸಿಗೆ ತಿದ್ದುಪಡಿ ತರಲು ಸರ್ಕಾರ ಸಿದ್ಧವಿದೆ
- ಜಿ. ಕೃಷ್ಣನ್ ರೆಡ್ಡಿ, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.