ADVERTISEMENT

ತೆಲಂಗಾಣ: ‘ಹೈದ್ರಾ’ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

‘ಬುಲ್ಡೋಜರ್‌ ಕಾರ್ಯಾಚರಣೆ’ಗೆ ಮತ್ತಷ್ಟು ಬಲ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 15:43 IST
Last Updated 2 ಅಕ್ಟೋಬರ್ 2024, 15:43 IST
.
.   

ಹೈದರಾಬಾದ್‌: ಹೈದರಾಬಾದ್‌ ವಿಕೋಪ ಸ್ಪಂದನೆ, ಆಸ್ತಿಗಳ ನಿಗಾ ಹಾಗೂ ರಕ್ಷಣಾ ಏಜೆನ್ಸಿಗೆ (ಹೈದ್ರಾ) ಹೆಚ್ಚಿನ ಅಧಿಕಾರ ನೀಡುವ ವಿವಾದಾತ್ಮಕ ಸುಗ್ರೀವಾಜ್ಞೆಗೆ ತೆಲಂಗಾಣ ರಾಜ್ಯಪಾಲ ಜಿಷ್ಣುದೇವ ವರ್ಮಾ ಅವರು ಅನುಮೋದನೆ ನೀಡಿದ್ದಾರೆ.

ಈ ಸಂಬಂಧ ಶೀಘ್ರವೇ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

‘ಹೈದ್ರಾ’ ಏಜೆನ್ಸಿಯು ಹೈದರಾಬಾದ್‌ ಸುತ್ತಮುತ್ತ ಇರುವ ಅನಧಿಕೃತ ಕಟ್ಟಡಗಳನ್ನು ನೆಲಸಮ ಮಾಡುತ್ತದೆ.

ADVERTISEMENT

ರಾಜ್ಯಪಾಲರ ಅನುಮೋದನೆ ಪಡೆದಿರುವ ‘ಹೈದ್ರಾ’ ಸುಗ್ರೀವಾಜ್ಞೆಯನ್ನು ಕಾಯ್ದೆಯಾಗಿ ಪರಿವರ್ತಿಸಲು ಮುಂದಿನ  ವಿಧಾನಸಭೆ ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಸುಗ್ರೀವಾಜ್ಞೆ ಮೂಲಕ ಸರ್ಕಾರವು ತೆಲಂಗಾಣ ಪಾಲಿಕೆ ಕಾಯ್ದೆ–2019, ಹೈದರಾಬಾದ್‌ ಮಹಾನಗರ ಪಾಲಿಕೆ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ– 2008 ಸೇರಿದಂತೆ ಹಲವು ಪ್ರಮುಖ ಕಾಯ್ದೆಗಳನ್ನು ತಿದ್ದುಪಡಿ ಮಾಡುತ್ತದೆ. ಇದು ‘ಹೈದ್ರಾ’ಗೆ ಮತ್ತಷ್ಟು ಅಧಿಕಾರ ನೀಡುತ್ತದೆ.

ಒತ್ತುವರಿ ಪರಿಶೀಲನೆ, ನೋಟಿಸ್ ರವಾನೆ, ಸರ್ಕಾರಿ ಜಾಗದ ಒತ್ತುವರಿ ತೆರವು ಮೇಲ್ವಿಚಾರಣೆ ಮತ್ತು ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ದಂಡ ವಿಧಿಸಲು  ಸುಗ್ರೀವಾಜ್ಞೆಯು ಅನುವು ಮಾಡಿಕೊಡುತ್ತದೆ.

ಕಳೆದ ತಿಂಗಳು ರಾಜ್ಯ ಸಂಪುಟವು ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿತ್ತು.  ಹತ್ತು ದಿನಗಳ ಹಿಂದೆ ಅದನ್ನು ರಾಜಭವನಕ್ಕೆ ಕಳುಹಿಸಲಾಗಿತ್ತು.

ವಿಪಕ್ಷಗಳಿಂದ ವಿರೋಧ:

ರೇವಂತ ರೆಡ್ಡಿ ನೇತೃತ್ವದ ಸರ್ಕಾರವು ಬಡ ಮಧ್ಯಮ ವರ್ಗದ ಕುಟುಂಬಗಳ ಮನೆಗಳನ್ನು ಬುಲ್ಡೋಜರ್‌ ಬಳಸಿ ನೆಲಸಮ ಮಾಡುತ್ತದೆ. ಆದರೆ ಪ್ರಭಾವಿಗಳಿಗೆ ನೋಟಿಸ್‌ ರವಾನಿಸಿ, ತೆರವಿಗೆ ಕಾಲಾವಕಾಶ ನೀಡುತ್ತದೆ. ಈ ಮಧ್ಯೆ ಅವರು ನ್ಯಾಯಾಲಯದ ಮೊರೆ ಹೋಗುತ್ತಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

 ಈ ನಡುವೆ ‘ಹೈದ್ರಾ’ ವಿರುದ್ಧ ನ್ಯಾಯಾಲಯದಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.