ADVERTISEMENT

ಹೈಡ್ರಾಕ್ಸಿಕ್ಲೊರೊಕ್ವಿನ್‌ ಅದ್ಭುತ ಔಷಧವಲ್ಲ: ತಜ್ಞರ ಅಭಿಮತ

ಪಿಟಿಐ
Published 7 ಮೇ 2020, 20:31 IST
Last Updated 7 ಮೇ 2020, 20:31 IST
   

ನವದೆಹಲಿ: ಕೋವಿಡ್‌–19ಗೆ ಚಿಕಿತ್ಸೆ ನೀಡಲು ಹೈಡ್ರಾಕ್ಸಿಕ್ಲೊರೊಕ್ವಿನ್‌ (ಎಚ್‌ಸಿಕ್ಯು) ಅದ್ಭುತ ಔಷಧವಲ್ಲ. ಕೆಲವು ಪ್ರಕರಣಗಳಲ್ಲಿ ಇದರಿಂದ ಸಾವು ಸಂಭವಿಸುವ ಸಾಧ್ಯತೆಗಳಿವೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್‌ಗೆ ಎಚ್‌ಸಿಕ್ಯೂ ರಾಮಬಾಣ ಎನ್ನುವ ಭ್ರಮೆಯಿಂದ ಹೊರಬರಬೇಕು. ಅದರ ಮೇಲೆ ಅವಲಂಬನೆಯಾಗಬಾರದು. ಕೋವಿಡ್‌–19ಗೆ ಚಿಕಿತ್ಸೆ ನೀಡಲು ಎಚ್‌ಸಿಕ್ಯು ಪ್ರಯೋಜನಕಾರಿಯಾಗಿದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ ಎಂದು ಪ್ರತಿಪಾದಿಸಿದ್ದಾರೆ.

‘ಕೋವಿಡ್‌–19ಗೆ ಇನ್ನೂ ಖಚಿತವಾದ ಔಷಧಿ ಇಲ್ಲ. ಹೀಗಾಗಿ, ವೈರಾಣು ವಿರುದ್ಧ ಚಿಕಿತ್ಸೆ ನೀಡಲು ಎಚ್‌ಸಿಕ್ಯು ಬಳಸುತ್ತಿದ್ದಾರೆ’ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್‌) ಮಾಜಿ ನಿರ್ದೇಶಕ ಮತ್ತು ಖ್ಯಾತ ತಜ್ಞ ವೈದ್ಯರಾಗಿರುವ ಎಂ.ಸಿ. ಮಿಶ್ರಾ ತಿಳಿಸಿದ್ದಾರೆ.

ADVERTISEMENT

’ಎಚ್‌ಸಿಕ್ಯು ಬಳಕೆಯಿಂದ ಕೆಲವು ರೋಗಿಗಳು ಹೃದ್ರೋಗದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದರಿಂದ, ದಿಢೀರನೆ ಹೃದಯಾಘಾತವಾಗಿ ಸಾವು ಸಂಭವಿಸುತ್ತಿರುವ ಪ್ರಕರಣಗಳು ವರದಿಯಾಗಿವೆ’ ಎಂದು ಅವರು ತಿಳಿಸಿದ್ದಾರೆ.

‘ಜಾಗತಿಕವಾಗಿ ಕೆಲವು ಸಾವುಗಳು ಎಚ್‌ಸಿಕ್ಯು ನೀಡಿದ್ದರಿಂದಲೇ ಸಂಭವಿಸಿವೆ ಎಂದು ವರದಿಯಾಗಿದೆ. ಎಚ್‌ಸಿಕ್ಯು ಬಳಕೆ ಬಗ್ಗೆ ವ್ಯತಿರಿಕ್ತ ವರದಿಗಳಿವೆ. ಹೀಗಾಗಿ, ಈ ಬಗ್ಗೆ ಇನ್ನೂ ಸಂಶೋಧನೆ ನಡೆಯುವುದು ಅಗತ್ಯವಿದೆ’ ಎಂದು ಏಮ್ಸ್‌ನ ಸಹಾಯಕ ಪ್ರಾಧ್ಯಾಪಕ ಯಾಧ್ಯವೀರ್‌ ಸಿಂಗ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.