ನವದೆಹಲಿ: ‘ನಾನು ಲೋಕ ಜನಶಕ್ತಿ ಪಕ್ಷದ ಮಾಜಿ ಮುಖ್ಯಸ್ಥ ಹಾಗೂ ನನ್ನ ಅಣ್ಣ ದಿವಂಗತ ರಾಮವಿಲಾಸ್ ಪಾಸ್ವಾನ್ ಅವರ ರಾಜಕೀಯ ಉತ್ತರಾಧಿಕಾರಿ. ಚಿರಾಗ್ ಪಾಸ್ವಾನ್ ತನ್ನ ತಂದೆಯ ಸ್ವತ್ತುಗಳಿಗೆ ಮಾತ್ರ ಉತ್ತರಾಧಿಕಾರಿ’ ಎಂದು ಕೇಂದ್ರ ಸಚಿವ ಪಶುಪತಿಕುಮಾರ್ ಪಾರಸ್ ಮಂಗಳವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಹಾಜಿಪುರ ಕ್ಷೇತ್ರದಿಂದಲೇ ಸ್ಪರ್ಧಿಸುವೆ’ ಎಂದರು.
‘2019ರ ಚುನಾವಣೆಯಲ್ಲಿಯೂ ಹಾಜಿಪುರ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ರಾಮವಿಲಾಸ್ ಪಾಸ್ವಾನ್ ನನಗೆ ಹೇಳಿದ್ದರು. ತಮ್ಮ ಕನಸುಗುಳನ್ನು ನನಸು ಮಾಡುವಂತೆ ಹೇಳಿದ್ದರು’ ಎಂದು ಪಾರಸ್ ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಜಿಪುರ ಕ್ಷೇತ್ರದಿಂದ ಸ್ಪರ್ಧಿಸಲು ಚಿರಾಗ್ ಒಲವು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪಾರಸ್ ಅವರ ಹೇಳಿಕೆಗೆ ಮಹತ್ವ ಬಂದಿದೆ.
ದೀರ್ಘಕಾಲದ ಅಸ್ವಸ್ಥತೆ ಕಾರಣದಿಂದ 2020ರ ಅಕ್ಟೋಬರ್‌ನಲ್ಲಿ ರಾಮವಿಲಾಸ್ ಪಾಸ್ವಾನ್ ನಿಧನರಾದರು. ನಂತರ ಚಿರಾಗ್ ಮತ್ತು ಪಶುಪತಿಕುಮಾರ್ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪಕ್ಷ ಒಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.