ADVERTISEMENT

ಮಗ ಎನ್‌ಕೌಂಟರ್ ಆದ ಸುದ್ದಿ ಕೇಳಿ ಕುಸಿದು ಗಳಗಳನೇ ಅತ್ತ ಗ್ಯಾಂಗ್‌ಸ್ಟರ್ ಅತೀಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಏಪ್ರಿಲ್ 2023, 14:28 IST
Last Updated 13 ಏಪ್ರಿಲ್ 2023, 14:28 IST
ಅತೀಕ್
ಅತೀಕ್   

ಲಖನೌ: ಉಮೇಶ್ ಪಾಲ್ ಹತ್ಯೆ ಪ್ರಕರಣದ ‍ಪ್ರಮುಖ ಆರೋಪಿಯಾಗಿದ್ದ ಹಾಗೂ ಸಮಾಜವಾದಿ ಪಕ್ಷದ ರಾಜಕಾರಣಿ ಅತೀಕ್ ಅಹ್ಮದ್ ಪುತ್ರ ಅಸಾದ್ ಅಹ್ಮದ್‌ನನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ.

ಈ ಸುದ್ದಿ ಕೇಳಿ ಬಂಧನದಲ್ಲಿರುವ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಕುಸಿದು ಬಿದ್ದು ಗಳಗಳನೇ ಅತ್ತಿದ್ದಾನೆ. ಈ ಘಟನೆಗೆ ನಾನೇ ಕಾರಣ, ನಾನೇ ಇದರ ಹೊಣೆ ಹೊರುತ್ತೇನೆ ಎಂದು ಪೊಲೀಸರ ಬಳಿ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಅಲ್ಲದೇ ಅತೀಕ್ ಅಹ್ಮದ್ ಮಗನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದಾನೆ ಎಂದು ವರದಿಯಾಗಿದೆ.

ADVERTISEMENT

ಉತ್ತರಪ್ರದೇಶದ ಝಾನ್ಸಿಯಲ್ಲಿ ಎನ್‌ಕೌಂಟರ್ ನಡೆದಿತ್ತು. ಘಟನೆಯಲ್ಲಿ ಅಸಾದ್ ಸಹಚರ ಗುಲಾಂ ಮೊಹಮ್ಮದ್‌​ನನ್ನು ಕೂಡ ಹತ್ಯೆ ಮಾಡಲಾಗಿದೆ.

ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅಸಾದ್ ಮತ್ತು ಗುಲಾಂ ಪ್ರಮುಖ ಆರೋಪಿಗಳಾಗಿದ್ದರು. ಆರೋಪಿಗಳ ಬಗ್ಗೆ ಸುಳಿವು ಕೊಟ್ಟವರಿಗೆ ತಲಾ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಆರೋಪಿಗಳನ್ನು ಯುಪಿ ಎಸ್‌ಟಿಎಫ್ ತಂಡ ಎನ್‌ಕೌಂಟರ್‌ ಮಾಡಿದೆ ಎಂದು ವಿಶೇಷ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ 2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್ ಅವರ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರ ಅಪಹರಣ ಪ್ರಕರಣದಲ್ಲಿ ಮಾಫಿಯಾ ಡಾನ್, ಮಾಜಿ ಸಂಸದ ಅತೀಕ್ ಅಹ್ಮದ್ ಅಪರಾಧಿ ಎಂದು ಸಾಬೀತಾಗಿದ್ದು, ಅವರಿಗೆ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಉಮೇಶ್ ಪಾಲ್ ಅವರ ಪತ್ನಿ ಜಯಪಾಲ್ ನೀಡಿದ್ದ ದೂರಿನನ್ವಯ ಅತೀಕ್ ಅಹ್ಮದ್, ಆತನ ಸಹೋದರ ಅಶ್ರಫ್, ಅಸಾದ್, ಗುಲಾಂ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 147 (ಗಲಭೆ), 302 (ಕೊಲೆ), 307 (ಕೊಲೆಗೆ ಯತ್ನ) ಹಾಗೂ ಬೆದರಿಕೆ ಒಡ್ಡಿದ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.