ನವದೆಹಲಿ: ಕೈಮುಗಿದು ಪ್ರಾರ್ಥಿಸುತ್ತೇನೆ ಹಿಂಸೆಯನ್ನು ನಿಲ್ಲಿಸಿ ಎಂದು ಮಣಿಪುರದ ಮೈತೇಯಿ ಮತ್ತು ಕುಕಿ ಸಮುದಾಯಗಳಿಗೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ ಮಣಿಪುರ ಹಿಂಸಾಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂಸಾಚಾರದಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕೈಮುಗಿದು ಪ್ರಾರ್ಥಿಸುತ್ತೇನೆ. ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸುವ ವಾಗ್ಧಾನವನ್ನು ನಾವು ಮಾಡುತ್ತೇವೆ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದರು.
ಹಿಂಸಾಚಾರ ತಡೆಗೆ ಮುಖ್ಯಮಂತ್ರಿ ಸಹಕಾರ ನೀಡದಿದ್ದರೆ ಅವರನ್ನು ಬದಲಾಯಿಸಬಹುದು. ಆದರೆ, ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಕೇಂದ್ರದ ಜೊತೆ ಸಹಕಾರ ತೋರುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಪ್ರಕರಣ ಕುರಿತಂತೆ ಮಾತನಾಡಿದ ಅವರು, ಈ ಘಟನೆ ಅತ್ಯಂತ ದುರದೃಷ್ಟಕರ ಮತ್ತು ಸಮಾಜಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಆದರೆ, ಸಂಸತ್ತಿನ ಅಧಿವೇಶನ ಆರಂಭಕ್ಕೂ ಮುನ್ನ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು ಹೇಗೆ? ಈ ವಿಡಿಯೊ ಇಟ್ಟುಕೊಂಡಿದ್ದವರು ಮೊದಲೇ ಡಿಜಿಪಿಗೆ ನೀಡಿದ್ದರೆ ಮೇ 4ರಂದೇ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೆವು. ಕೃತ್ಯ ಎಸಗಿದ 9 ಮಂದಿಯನ್ನೂ ಗುರುತಿಸಿ, ಬಂಧಿಸಿದ್ದೇವೆ ಎಂದರು.
ನಾನು ಮಣಿಪುರದಲ್ಲಿ ಮೂರು ದಿನ ಇದ್ದೆ, ಈ ಅವಧಿಯಲ್ಲಿ ನಾವು ಹಲವಾರು ನಿರ್ಧಾರಗಳನ್ನು ಮಾಡಿದ್ದೇವೆ. ರಾಜ್ಯದಲ್ಲಿ ಸಹಜ ಸ್ಥಿತಿ ಸ್ಥಾಪಿಸಲು ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ ಎಂದು ಲೋಕಸಭೆಯಲ್ಲಿ ಶಾ ಹೇಳಿದರು.
ಮಣಿಪುರದಲ್ಲಿ ಹಿಂಸಾಚಾರ ಭುಗಿಲೇಳಲು ಕಾರಣಗಳೇನು? ಮತ್ತು ತಡೆಗೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಕುರಿತಾದ ವಿವರವಾದ ವರದಿಯನ್ನು ಅಮಿತ್ ಶಾ ಲೋಕಸಭೆ ಮುಂದೆ ಮಂಡಿಸಿದರು.
ಅಧಿವೇಶನ ಆರಂಭವಾದ ಮೊದಲ ದಿನದಿಂದಲೂ ಮಣಿಪುರ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಚರ್ಚೆಗೆ ಸಿದ್ಧನಿದ್ದೆ. ಆದರೆ, ವಿಪಕ್ಷಗಳಿಗೆ ಚರ್ಚೆ ನಡೆಸುವುದು ಬೇಕಿರಲಿಲ್ಲ. ನಾನು ಮಾತನಾಡುವುದು ಅವರಿಗೆ ಬೇಕಿರಲಿಲ್ಲ. ಆದರೆ, ಅವರು ನನ್ನನ್ನು ಸುಮ್ಮನಿರಿಸಲು ಸಾಧ್ಯವಿಲ್ಲ ಎಂದು ಶಾ ಹೇಳಿದರು. 130 ಕೋಟಿ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಹಾಗಾಗಿ, ನಮ್ಮ ಮಾತನ್ನು ಅವರು(ವಿಪಕ್ಷಗಳು) ಕೇಳಿಸಿಕೊಳ್ಳಲೇಬೇಕು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.