ಮುಂಬೈ: ಏಕನಾಥ ಶಿಂದೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ, ಪಕ್ಷದಲ್ಲಿನ ಬೆಳವಣಿಗೆಗಳು ಪ್ರತಿಪಕ್ಷಗಳ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಭಾನುವಾರ ಹೇಳಿದ್ದಾರೆ.
ಮುಂಬೈನಲ್ಲಿ ತಡರಾತ್ರಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸುಳೆ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿರುವುದರಿಂದ ತಮ್ಮ ತಂದೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರ ಸ್ಥಾನಮಾನ ಮತ್ತು ನಮ್ಮ ವಿಶ್ವಾಸಾರ್ಹತೆ ಮತ್ತಷ್ಟು ಹೆಚ್ಚಾಗಲಿದೆ. ಅಜಿತ್ ಪವಾರ್ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರಬಹುದು, ಆದರೆ ತನ್ನ ಅಣ್ಣನೊಂದಿಗೆ ಎಂದಿಗೂ ಜಗಳವಾಡಲು ಸಾಧ್ಯವಿಲ್ಲ ಮತ್ತು ನಾನು ಅವರನ್ನು ಯಾವಾಗಲೂ ಸಹೋದರಿಯಂತೆ ಪ್ರೀತಿಸುತ್ತೇನೆ ಎಂದು ಸುಳೆ ಹೇಳಿದರು.
ಅಜಿತ್ ಪವಾರ್ ಭಾನುವಾರ ಮಹಾರಾಷ್ಟ್ರದ ಶಿವಸೇನೆ–ಬಿಜೆಪಿ ಸರ್ಕಾರಕ್ಕೆ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದು, ಅವರೊಂದಿಗೆ ಪಕ್ಷದ ಇತರ ಎಂಟು ನಾಯಕರು ಸಚಿವರಾಗಿ ಸೇರ್ಪಡೆಗೊಂಡರು. ಕಳೆದ ತಿಂಗಳು ಪಕ್ಷದ ಕಾರ್ಯಾಧ್ಯಕ್ಷರಾಗಿ ಸುಳೆ ಉನ್ನತೀಕರಣಗೊಂಡಿದ್ದು ಅಜಿತ್ ಪವಾರ್ ಅವರ ಬಂಡಾಯವನ್ನು ಪ್ರಚೋದಿಸಿತು ಎನ್ನಲಾಗಿದೆ.
ನಾವಿಬ್ಬರೂ ವೈಯಕ್ತಿಕ ಮತ್ತು ವೃತ್ತಿಪರ ರಂಗಗಳಲ್ಲಿ ನಮ್ಮ ಜೀವನವನ್ನು ವಿಭಾಗಿಸುವಷ್ಟು ಪ್ರಬುದ್ಧರಾಗಿದ್ದೇವೆ. ‘ನನ್ನ ಸಹೋದರನೊಂದಿಗೆ ನಾನು ಎಂದಿಗೂ ಜಗಳವಾಡಲು ಸಾಧ್ಯವಿಲ್ಲ. ಭಾವನಾತ್ಮಕ ಸಂಬಂಧಗಳು ಮತ್ತು ವೃತ್ತಿಪರ ಕೆಲಸಗಳು ಎರಡು ವಿಭಿನ್ನ ವಿಷಯಗಳಾಗಿವೆ. ನಾನು ಎರಡನ್ನು ಎಂದಿಗೂ ಮಿಶ್ರಣ ಮಾಡುವುದಿಲ್ಲ’ ಎಂದು ಸುಪ್ರಿಯಾ ಸುಳೆ ಹೇಳಿದರು.
‘ಪಕ್ಷ ಸಂಘಟನೆಯನ್ನು ಬಲಪಡಿಸಲು, ರಾಜ್ಯ ಮತ್ತು ದೇಶದ ಕಲ್ಯಾಣಕ್ಕಾಗಿ ನವ ಚೈತನ್ಯದಿಂದ ಕೆಲಸ ಮಾಡುತ್ತೇವೆ. ಎನ್‌ಸಿಪಿಯ ಪ್ರತಿಯೊಬ್ಬ ಶಾಸಕರೂ ಪ್ರಮುಖರು. ನಮಗೆ ಅವರ ಬಗ್ಗೆ ಪ್ರೀತಿ, ವಾತ್ಸಲ್ಯ ಮತ್ತು ಗೌರವವಿದೆ. ನಾವು ಕುಟುಂಬವಾಗಿ ಬದುಕಿದ್ದೇವೆ’ ಎಂದು ಸುಪ್ರಿಯಾ ಸುಳೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.