ನವದೆಹಲಿ: ಕಾಶ್ಮೀರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹೊರತುಪಡಿಸಿ, ಬೇರೆ ವಿಚಾರಗಳಿಗೆ ನಾನು ಕೋಪಗೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಲೋಕಸಭೆಗೆ ತಿಳಿಸಿದರು.
‘ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಮಸೂದೆ’ 2022 ರ ಚರ್ಚೆಯನ್ನು ಪ್ರಾರಂಭಿಸುವ ಮೊದಲು ವಿರೋಧ ಪಕ್ಷಗಳಿಗೆ ಪ್ರತಿಕ್ರಿಯಿಸಿದ ಶಾ, 'ನಾನು ಸಾಮಾನ್ಯವಾಗಿ ಎಂದಿಗೂ ಕೋಪಗೊಳ್ಳುವುದಿಲ್ಲ. ಆದರೆ ಕಾಶ್ಮೀರ ವಿಷಯಕ್ಕೆ ಬಂದಾಗ ಮಾತ್ರ ನಾನು ಕೋಪಗೊಳ್ಳುತ್ತೇನೆ' ಎಂದು ಹೇಳಿದರು.
'ನಾನು ಎಂದಿಗೂ ಯಾರನ್ನೂ ನಿಂದಿಸುವುದಿಲ್ಲ. ಹುಟ್ಟಿನಿಂದಲೇ ನನಗೊಂದು ದೋಷವಿದೆ. ಅದೇನೆಂದರೆ ನನ್ನ ಧ್ವನಿ ಜೋರಾಗಿದೆ' ಎಂದಾಗ ಸದನದ ಸದಸ್ಯರು ನಗೆಗಡಲಲ್ಲಿ ತೇಲಿದರು.
2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಮರುರಚನೆ ಮಸೂದೆ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಲೋಕಸಭೆಯಲ್ಲಿ ಶಾ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನಡುವೆ ತೀವ್ರ ವಾಗ್ವಾದ ನಡೆಯಿತು.
ಚೌಧರಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಗೃಹ ಸಚಿವರು, ಕಾಶ್ಮೀರಕ್ಕಾಗಿ ಪ್ರಾಣ ಕೊಡುವುದಕ್ಕೂ ಸಿದ್ಧ ಎಂದು ಹೇಳಿದ್ದರು. ಇದೇ ವಿಚಾರವನ್ನು ಸೋಮವಾರ ವಿರೋಧ ಪಕ್ಷಗಳು ಉಲ್ಲೇಖಿಸಿದವು, ಇದಕ್ಕೆ ಶಾ ಪ್ರತಿಕ್ರಿಯಿಸಿದರು.
ಇದಕ್ಕೂ ಮುನ್ನ ‘ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಮಸೂದೆ’ 2022 ಕುರಿತು ಮಾತನಾಡಿದ ಶಾ, ಈ ಮಸೂದೆಯು ಸದ್ಯ ವಿಜ್ಞಾನ, ನ್ಯಾಯಾಲಯಗಳಲ್ಲಿ ಅಪರಾಧ ಸಾಬೀತುಪಡಿಸುವಿಕೆ, ಕಾನೂನು ಜಾರಿ ಸಂಸ್ಥೆಗಳನ್ನು ಬಲಪಡಿಸುವುದು ಸೇರಿದಂತೆ ವಿವಿಧ ಆಯಾಮಗಳಿಂದ ಗಮನಿಸಿದಾಗ ಹಾಲಿ ಇರುವ ‘ಕೈದಿಗಳ ಗುರುತುಪತ್ತೆ ಕಾಯ್ದೆ 1920’ ಅಪ್ರಸ್ತುತವಾಗಿದೆ. ಈಗಿನ ಸವಾಲುಗಳನ್ನು ಸೂಕ್ತವಾಗಿ ಎದುರಿಸುವ ಜೊತೆಗೆ ವ್ಯವಸ್ಥೆ ಬಲಪಡಿಸಲು ಈ ಮಸೂದೆ ಪೂರಕವಾಗಿದೆ. 1980ರಲ್ಲಿಯೇ ಆಗಿನ ಕಾನೂನು ಆಯೋಗವು ಕಾಯ್ದೆಯ ಪುನರ್ ರಚಿಸುವ ಅಗತ್ಯವಿದೆ ಎಂದು ಹೇಳಿತ್ತು’ ಎಂದರು.
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಕುರಿತು ರಾಜ್ಯಗಳ ಜೊತೆಗೂ ಚರ್ಚಿಸಿದ್ದು, ಅಭಿಪ್ರಾಯಗಳನ್ನು ಪಡೆಯಲಾಗಿದೆ. ಮಾನವ ಮತ್ತು ವೈಯಕ್ತಿಕ ಹಕ್ಕು ಕುರಿತು ಸದಸ್ಯರು ಈಗಾಗಲೇ ವ್ಯಕ್ತಪಡಿಸಿರುವ ಆತಂಕಗಳು ಸಕಾಲಿಕವಾಗಿವೆ. ಅವರ ಸಲಹೆಗಳನ್ನು ಒಳಗೊಂಡು ಮಸೂದೆಯನ್ನು ಅಂತಿಮಗೊಳಿಸಲಾಗಿದೆ ಎಂದು ಶಾ ಸಮರ್ಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.