ತಿರುವನಂತಪುರ: ತನ್ನ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾದಾಗ ಅನುಭವಿಸಿದ್ದ ಸಂಕಟಕ್ಕಿಂತ ಹೆಚ್ಚಿನ ದುಃಖವನ್ನು ವಯನಾಡ್ ಜನರು ಅನುಭವಿಸುತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ, ವಯನಾಡ್ ಕ್ಷೇತ್ರದ ಮಾಜಿ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
‘ನನ್ನ ತಂದೆ ತೀರಿಕೊಂಡಾಗ ಅನುಭವಿಸಿದ್ದ ಸಂಕಟ ಈಗ ಅನುಭವಕ್ಕೆ ಬರುತ್ತಿದೆ. ಇಲ್ಲಿಯ ಜನರು ತಮ್ಮ ತಂದೆಯನ್ನು ಮಾತ್ರ ಕಳೆದುಕೊಂಡಿಲ್ಲ, ಕುಟುಂಬದ ಹಲವು ಸದಸ್ಯರನ್ನೂ ಕಳೆದುಕೊಂಡಿದ್ದಾರೆ. ಹಾಗಾಗಿ ಅವರು ಅನುಭವಿಸುತ್ತಿರುವ ದುಃಖ, ನಾನು ಅನುಭವಿಸಿದ್ದಕ್ಕಿಂತಲೂ ತೀವ್ರವಾಗಿರುತ್ತದೆ. ಕುಟುಂಬದ ಹಲವು ಸದಸ್ಯರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿರುವ ಜನರನ್ನು ಮಾತನಾಡಿಸಲು ಕಷ್ಟವಾಗುತ್ತಿದೆ’ ಎಂದು ಗುರುವಾರ ಭೂಕುಸಿತದ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಅವರು ತಿಳಿಸಿದರು.
ರಾಹುಲ್ ಜೊತೆಗಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ‘ನನ್ನ ಸಹೋದರ (ರಾಹುಲ್) ಅನುಭವಿಸುತ್ತಿರುವ ಅದೇ ಸಂಕಟ ನನಗೂ ಆಗುತ್ತಿದೆ’ ಎಂದರು.
2019ರಲ್ಲಿ ವಯನಾಡ್ ಸಂಸದರಾಗಿ ಆಯ್ಕೆಯಾಗಿದ್ದ ರಾಹುಲ್ ಅವರು ಈ ಬಾರಿಯ ಚುನಾವಣೆಯಲ್ಲೂ ಗೆದ್ದಿದ್ದರು. ಆದರೆ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳುವುದಕ್ಕಾಗಿ, ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ.
ವಯನಾಡ್ ಭೂಕುಸಿತ ಖಂಡಿತವಾಗಿಯೂ ರಾಷ್ಟ್ರೀಯ ದುರಂತ. ಆದರೆ ಆದರೆ ಕೇಂದ್ರ ಸರ್ಕಾರ ಏನು ಹೇಳುತ್ತದೆ ಎಂಬುದನ್ನು ನೋಡೋಣರಾಹುಲ್ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.