ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಹಾಗೂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷಗಳನ್ನೊಳಗೊಂಡ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ‘ಜಾತಿ ಗಣತಿ’ ನಡೆಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಾರಾಷ್ಟ್ರ ಚುನಾವಣೆಯು ಸಿದ್ಧಾಂತಗಳ ಚುನಾವಣೆಯಾಗಿದೆ. ಆದೇ ರೀತಿ ಒಂದಿಬ್ಬರು ಕೋಟ್ಯಧಿಪತಿಗಳು ಮತ್ತು ಬಡವರ ನಡುವಿನ ಯುದ್ಧವಾಗಿದೆ’ ಎಂದು ಹೇಳಿದ್ದಾರೆ.
‘ಬಿಜೆಪಿಗರು ಕೋಟ್ಯಂತರ ರೂಪಾಯಿ ಮೌಲ್ಯದ ಧಾರಾವಿ ಅಭಿವೃದ್ಧಿ ಯೋಜನೆಯ ಜಾಗವನ್ನು ಉದ್ಯಮಿ ಗೌತಮ್ ಅದಾನಿಗೆ ಹಸ್ತಾಂತರಿಸಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
ಕೋಟ್ಯಧಿಪತಿಗಳು ಮುಂಬೈ ಭೂಮಿಯನ್ನು ಕಬಳಿಸಲು ಬಯಸುತ್ತಿದ್ದಾರೆ. ಆದರೆ, ನಾವು ಮಹಾರಾಷ್ಟ್ರದ ರೈತರು, ಬಡವರು, ನಿರುದ್ಯೋಗಿಗಳು, ಯುವಕರಿಗೆ ಸಹಾಯವಾಗಬೇಕು ಎಂಬುದು ನಮ್ಮ ಚಿಂತನೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹3,000 ಜಮೆ ಮಾಡುತ್ತೇವೆ. ₹3 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡುತ್ತೇವೆ. ಮಹಿಳೆಯರು ಮತ್ತು ರೈತರಿಗೆ ಉಚಿತ ಬಸ್ ಪ್ರಯಾಣ, ಸೋಯಾಬೀನ್‌ಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಬೋನಸ್ ಸೇರಿದಂತೆ ಪ್ರತಿ ಕ್ವಿಂಟಲ್‌ಗೆ ₹7,000 ನೀಡಲಾಗುವುದು ಎಂದು ರಾಹುಲ್ ಭರವಸೆ ನೀಡಿದ್ದಾರೆ.
ತೆಲಂಗಾಣ, ಕರ್ನಾಟಕ ಮಾದರಿಯಲ್ಲಿ ಮಹಾರಾಷ್ಟ್ರದಲ್ಲೂ ಜಾತಿ ಗಣತಿ ನಡೆಸುತ್ತೇವೆ ಮತ್ತು ಶೇ 50ರ ಮೀಸಲಾತಿ ಮಿತಿಯನ್ನು ತೆಗೆದುಹಾಕುತ್ತೇವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.