ADVERTISEMENT

ಅಜಂ ಖಾನ್ ವಿರುದ್ಧ ಐಟಿ ದಾಳಿ: ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಎಂದು ಎಸ್‌ಪಿ ಟೀಕೆ

ಪಿಟಿಐ
Published 13 ಸೆಪ್ಟೆಂಬರ್ 2023, 12:50 IST
Last Updated 13 ಸೆಪ್ಟೆಂಬರ್ 2023, 12:50 IST
ಅಜಂ ಖಾನ್‌
ಅಜಂ ಖಾನ್‌   

ಲಖನೌ: ಪಕ್ಷದ ಮಾಜಿ ನಾಯಕ ಅಜಂ ಖಾನ್‌ ಹಾಗೂ ಅವರೊಂದಿಗೆ ನಂಟಿರುವವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ದಾಳಿಗಳು, ‘ಸರ್ವಾಧಿಕಾರ ಮತ್ತು ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ’ಯನ್ನು ತೋರಿಸುತ್ತವೆ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಬುಧವಾರ ಟೀಕಿಸಿದೆ.

‘ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಳಲ್ಲಿ ಜನರು ಇದಕ್ಕೆ ಸಮರ್ಪಕ ಉತ್ತರ ನೀಡುವರು’ ಎಂದು ಪಕ್ಷವು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಹೇಳಿದೆ.

ಅಜಂ ಖಾನ್‌ ಹಾಗೂ ಅವರ ಜೊತೆ ನಂಟಿರುವವರ ವಿರುದ್ಧದ ತನಿಖೆಯ ಭಾಗವಾಗಿ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿನ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಲಾಖೆಯು ಬುಧವಾರ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಪಕ್ಷವು ಕೇಂದ್ರ ಸರ್ಕಾರವನ್ನು ಟೀಕಿಸಿದೆ.

ADVERTISEMENT

‘ಅಜಂ ಖಾನ್‌ ಅವರು ಸತ್ಯದ ಧ್ವನಿಯಾಗಿದ್ದಾರೆ. ಶಿಕ್ಷಣಕ್ಕೆ ಮಹತ್ವ ನೀಡುವ ಅವರು ವಿಶ್ವವಿದ್ಯಾಲಯ ನಿರ್ಮಿಸಿದ್ದು, ಮಕ್ಕಳ ಭವಿಷ್ಯಕ್ಕಾಗಿ ಬುನಾದಿ ಹಾಕಿದ್ದಾರೆ’ ಎಂದು ಪಕ್ಷವು ‘ಎಕ್ಸ್‌’ನಲ್ಲಿ ಹೇಳಿದೆ.

‘ಅವರು ಕೋಮು ಶಕ್ತಿಗಳ ವಿರುದ್ಧ ಯಾವಾಗಲೂ ಹೋರಾಡುತ್ತಿದ್ದು, ಅವರ ಪರವಾಗಿ ನಾವು ನಿಲ್ಲುತ್ತೇವೆ. ಬಿಜೆಪಿ ನೇತೃತ್ವದ ಸರ್ಕಾರ ಸರ್ವಾಧಿಕಾರಿ ಧೋರಣೆ ಮತ್ತು ಕೇಂದ್ರೀಯ ಸಂಸ್ಥೆಗಳ ದುರ್ಬಳಕೆಯನ್ನು ನಿಲ್ಲಿಸಬೇಕು. ಇಂತಹ ಅಹಂಕಾರ ನಿಶ್ಚಿತವಾಗಿ ಕೊನೆಗೊಳ್ಳುತ್ತದೆ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು’ ಎಂದು ಹಿಂದಿಯಲ್ಲಿ ಪೋಸ್ಟ್‌ ಮಾಡಿದೆ.

ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್ ಕೂಡ, ಯಾರ ಹೆಸರನ್ನು ಹೇಳದೆಯೇ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಸರ್ಕಾರ ದುರ್ಬಲಗೊಂಡಷ್ಟೂ ಇಂತಹ ದಾಳಿಗಳು ಹೆಚ್ಚುತ್ತವೆ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.