ADVERTISEMENT

IAF Air Show: ಚೆನ್ನೈಯಲ್ಲಿ ಬಳಲಿಕೆಯಿಂದ ಐವರು ಪ್ರೇಕ್ಷಕರು ಸಾವು

ಪಿಟಿಐ
Published 6 ಅಕ್ಟೋಬರ್ 2024, 23:30 IST
Last Updated 6 ಅಕ್ಟೋಬರ್ 2024, 23:30 IST
<div class="paragraphs"><p>ವಿಮಾನಗಳ ವೈಮಾನಿಕ ಪ್ರದರ್ಶನ (ಸಾಂದರ್ಭಿಕ ಚಿತ್ರ)</p></div>

ವಿಮಾನಗಳ ವೈಮಾನಿಕ ಪ್ರದರ್ಶನ (ಸಾಂದರ್ಭಿಕ ಚಿತ್ರ)

   

ಚೆನ್ನೈ: ಭಾರತೀಯ ವಾಯುಪಡೆಯ (ಐಎಎಫ್) 92ನೇ ವಾರ್ಷಿಕೋತ್ಸವದ ನೆನಪಿಗೆ ಇಲ್ಲಿನ ಮರೀನಾ ಬೀಚ್‌ನಲ್ಲಿ ಭಾನುವಾರ ನಡೆಸಿದ ವೈಮಾನಿಕ ಪ್ರದರ್ಶನ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರಲ್ಲಿ ಐದು ಮಂದಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. 40 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ಸೇನೆಯ ಕಸರತ್ತು ವೀಕ್ಷಿಸಲು 10 ಲಕ್ಷಕ್ಕೂ ಹೆಚ್ಚು ಜನರು ಏಷ್ಯಾದ ಅತಿ ಉದ್ದದ ಕಡಲತೀರ ಮರೀನಾ ಬೀಚ್ ಬಳಿ ಸೇರಿದ್ದರು. ಸುಡುವ ಬಿಸಿಲಿನಲ್ಲಿ ಸರಿಯಾದ ಸಾರಿಗೆ ವ್ಯವಸ್ಥೆ ಸೇರಿ ಅಗತ್ಯ ಸೌಲಭ್ಯಗಳು ಇಲ್ಲದ ಕಾರಣ ಜನರು ಕಿಲೋಮೀಟರ್ ಗಟ್ಟಲೆ ನಡೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ.

ADVERTISEMENT

ನಿರ್ಜಲೀಕರಣ ಮತ್ತು ಬಳಲಿಕೆಯಿಂದಾಗಿ ಅಸ್ವಸ್ಥಗೊಂಡು ಐದು ಮಂದಿ ಮರೀನಾ ಬೀಚ್‌ ಸಮೀಪದ ಅಣ್ಣಾ ಸಲೈ ರಸ್ತೆಯಲ್ಲಿ ಮೃತಪಟ್ಟಿದ್ದಾರೆ. ನಗರದಾದ್ಯಂತ ಆಸ್ಪತ್ರೆಗಳಲ್ಲಿ 150 ಕ್ಕೂ ಹೆಚ್ಚು ಜನರಿಗೆ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲೋಹದ ಹಕ್ಕಿಗಳ ರೋಮಾಂಚನಕಾರಿ ಕಸರತ್ತು ವೀಕ್ಷಿಸುವಾಗ ಮರೀನಾ ಬೀಚ್‌ನಲ್ಲಿ ಪ್ರೇಕ್ಷಕರ ದಟ್ಟಣೆಯಿಂದ ಸಾವು ಸಂಭವಿಸಿವೆ. ವೈಮಾನಿಕ ಪ್ರದರ್ಶನದಲ್ಲಿನ ವೀಕ್ಷಕರ ಹಾಜರಾತಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆಯಿತು. ಆದರೆ, ಸಾವು–ನೋವಿನ ಪ್ರಕರಣಗಳು ಕಾರ್ಯಕ್ರಮದ ಹೊಳಪನ್ನು ಕುಗ್ಗಿಸಿದವು. 

ವೈಮಾನಿಕ ಪ್ರದರ್ಶನದ ಬಗ್ಗೆ ಐಎಎಫ್‌ ಮತ್ತು ರಾಜ್ಯ ಸರ್ಕಾರವು ವ್ಯಾಪಕವಾಗಿ ಪ್ರಚಾರ ಮಾಡಿದ್ದವು. ಸೇರಿದ್ದ 10 ಲಕ್ಷಕ್ಕೂ ಹೆಚ್ಚು ಜನರನ್ನು ನಿಭಾಯಿಸಲು ಮಾಡಿಕೊಂಡಿದ್ದ ವ್ಯವಸ್ಥೆಗಳು ಮಾತ್ರ ಅಸಮರ್ಪಕವಾಗಿದ್ದವು. ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ರ ವರೆಗೆ ನಡೆದ ಏರ್ ಶೋಗಾಗಿ ಮರೀನಾ ಬೀಚ್‌ನಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಜನರು ಸೇರಲು ಪ್ರಾರಂಭಿಸಿದ್ದರು. ನಗರದಾದ್ಯಂತ ಭಾರಿ ಸಂಚಾರ ದಟ್ಟಣೆ ಕೂಡ ಕಂಡುಬಂದಿತು. 

‘ಸಂಚಾರ ದಟ್ಟಣೆ ನಿಭಾಯಿಸಲು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಜನರು ಕಿಲೋಮೀಟರ್‌ಗಟ್ಟಲೆ ಕಾಲ್ನಡಿಯಲ್ಲೇ ಸಾಗಬೇಕಾಗಿ ಬಂದಿದೆ. ನನ್ನ ಕಣ್ಣೆದುರಲ್ಲೇ ಕೆಲವರು ಪ್ರಜ್ಞೆ ಕಳೆದುಕೊಂಡು ಬಿದ್ದರು’ ಎಂದು ಆನಂದಿ ಎಂಬವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.