ADVERTISEMENT

ಸುಳ್ಳು ಹೇಳುತ್ತಿದ್ದಾರೆ ವಾಯುಪಡೆ ಮುಖ್ಯಸ್ಥರು: ವೀರಪ್ಪ ಮೊಯಿಲಿ

ಏಜೆನ್ಸೀಸ್
Published 21 ಡಿಸೆಂಬರ್ 2018, 6:47 IST
Last Updated 21 ಡಿಸೆಂಬರ್ 2018, 6:47 IST
ವೀರಪ್ಪ ಮೊಯಿಲಿ
ವೀರಪ್ಪ ಮೊಯಿಲಿ   

ನವದೆಹಲಿ: ‘ವಾಯುಪಡೆ ಮುಖ್ಯಸ್ಥ ರಫೇಲ್‌ ಖರೀದಿ ಬಗ್ಗೆ ಸತ್ಯವನ್ನು ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ‘ ಎಂದು ಬಿ.ಎಸ್‌.ಧನೋವಾ ವಿರುದ್ಧ ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ವಾಗ್ದಾಳಿ ನಡೆಸಿದ್ದಾರೆ.

ಸತ್ಯವನ್ನು ಮರೆಮಾಚಿ, ಸುಳ್ಳುಗಳನ್ನು ಹೇಳುತ್ತಿದ್ದಾರೆ ವಾಯುಪಡೆ ಮುಖ್ಯಸ್ಥರು. ಅವರು ಇಡೀ ಡೀಲ್‌ನ ಮಾಹಿತಿಯನ್ನು ಸಂಪೂರ್ಣವಾಗಿ ನೀಡುತ್ತಿಲ್ಲ ಎಂದು ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಎಚ್‌ಎಎಲ್‌ ಮತ್ತು ಡಸಾಲ್ಟ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಎರಡೂ ಕಡೆ ಹೋಗಿ ಪರಿಶೀಲನೆ ನಡೆಸಿದಾಗ, ಡಸಾಲ್ಟ್‌ ಕಡೆಗೆ ಹೆಚ್ಚು ತೂಕ ಬಂದಿತು. ಹೀಗಾಗಿ ಆ ಕಂಪನಿಗೆ ಒಪ್ಪಂದ ನೀಡಲಾಯಿತು ಎಂದು ಧನೋವಾ ಹೇಳಿದ್ದರು.

ADVERTISEMENT

’36 ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆಪ್ರಧಾನಿ ನರೇಂದ್ರ ಮೋದಿ ಸಹಿ ಹಾಕುವ ಒಂದು ವಾರದ ಮೊದಲು ವಾಯುಪಡೆ ಮುಖ್ಯಸ್ಥ ಧನೋವಾ ಅವರು ಡಸಾಲ್ಟಾ ಮುಖ್ಯಸ್ಥರೊಂದಿಗೆ ಬೆಂಗಳೂರಿನಲ್ಲಿನ ಎಚ್‌ಎಎಲ್‌ ಕಚೇರಿಗೆ ಭೇಟಿ ನೀಡಿದ್ದರು. ಅಲ್ಲಿ ಅವರು, ತಾಂತ್ರಿಕವಾಗಿ ಸಮರ್ಥವಿರುವ ವಿಮಾನವನ್ನು ಕಂಡಿದ್ದರು‘ ಎಂದು ಮೊಯಿಲಿ ವಿವರಿಸಿದ್ದಾರೆ.

’ರಫೇಲ್‌ ಖರೀದಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಸರಿ ಎಂದು ಹೇಳುತ್ತಿರುವ ವಾಯುಪಡೆ ಮುಖ್ಯಸ್ಥರೇ ಸರಿಯಿಲ್ಲ ಎಂದು ನನಗೆ ಅನ್ನಿಸುತ್ತಿದೆ. ಸತ್ಯವನ್ನು ಮುಚ್ಚಿಡುತ್ತಿದ್ದಾರೆ’ ಎಂದಿದ್ದಾರೆ.

‘1985ರಿಂದ ವಾಯುಪಡೆಗೆ ಯಾವುದೇ ಹೊಸ ಯುದ್ಧ ವಿಮಾನ ಸೇರ್ಪಡೆಯಾಗಿಲ್ಲ.ವಾಯುಪಡೆಗೆ ರಫೇಲ್‌ ಯುದ್ಧ ವಿಮಾನ ತೀವ್ರ ಅಗತ್ಯವಿದೆ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಉತ್ತಮ ತೀರ್ಪು ನೀಡಿದೆ. ರಫೇಲ್‌ನಿಂದ ಸೇನೆಯಲ್ಲಿ ಬೃಹತ್‌ ಬದಲಾವಣೆ ಕಾಣಲಿದೆ’ ಎಂದು ಧನೋವಾ ಹೇಳಿಕೆ ನೀಡಿದ್ದರು.

ವಾಯುಪಡೆ ಮುಖ್ಯಸ್ಥರ ಕುರಿತುನೀಡಿದ್ದ ಹೇಳಿಕೆಯನ್ನು ನಂತರಹಿಂತೆಗೆದುಕೊಂಡ ವೀರಪ್ಪ ಮೊಯಿಲಿ, ‘ನಾನು ಅವರನ್ನು ಸುಳ್ಳುಗಾರ ಎಂದು ಹೇಳಿಲ್ಲ. ಬದಲಿಗೆ, ಅವರನ್ನು ಪ್ರಶ್ನಿಸುತ್ತಿದ್ದೇನೆ. ಆಕ್ಷೇಪಾರ್ಹವಾಗಿರುವ ಸುಪ್ರೀಂಕೋರ್ಟ್‌ ತೀರ್ಪಿನ ಆಧಾರದ ಮೇಲೆರಫೇಲ್‌ ಖರೀದಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆಯೇ? ಎಚ್‌ಎಎಲ್‌ ಕೂಡ ಉತ್ತಮವಾಗಿದೆ ಎಂದರೆ... ಎರಡೂ ಹೇಗೆ ಉತ್ತಮವಾಗಿರಲು ಸಾಧ್ಯ?’ ಎಂದರು.

ಫ್ರಾನ್ಸ್‌ನೊಂದಿಗಿನ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಪ್ರಶಾಂತ್ ಭೂಷಣ್, ಎಂಎಲ್ ಶರ್ಮಾ, ಮಾಜಿ ಸಚಿವರಾದ ಯಶವಂತ ಸಿನ್ಹಾ ಮತ್ತು ಅರುಣ್ ಶೌರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು.

ಇವುಗಳ ವಿಚಾರಣೆ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ, ‘ರಫೇಲ್ ಖರೀದಿ ವಿಚಾರದಲ್ಲಿ ಕೇಂದ್ರ ಸರಿಯಾದ ಕ್ರಮ ಅನುಸರಿಸಿದೆ. ಎಲ್ಲ ರಕ್ಷಣಾ ಒಪ್ಪಂದಗಳನ್ನು ವಿಮರ್ಶೆ ಮಾಡುತ್ತಾ ಕೂರಲು ಸಾಧ್ಯವಿಲ್ಲ. ರಫೇಲ್ ಒಪ್ಪಂದದಲ್ಲಿ ಯಾವುದೇ ಸಂದೇಹ ಬೇಡ. ಜತೆಗೆ ವಿಮಾನ ಖರೀದಿಯ ಮೊತ್ತ ತಿಳಿಯುವುದೂ ಬೇಡ. ಈ ಒಪ್ಪಂದದಿಂದ ವಾಣಿಜ್ಯವಾಗಿ ಲಾಭವಿದೆ ಎನ್ನುವ ವಿಚಾರದಲ್ಲಿ ಹುರುಳಿಲ್ಲ. ಈ ಒಪ್ಪಂದದಲ್ಲಿ ನಾವು ಮಧ್ಯ ಪ್ರವೇಶಿಸುವ ಮಾತೇ ಇಲ್ಲ‘ ಎಂದು ತೀರ್ಪು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.