ADVERTISEMENT

ವರದಕ್ಷಿಣೆ ವಿರೋಧಿಯಾಗಿದ್ದ ಪೈಲಟ್ ಅಭಿನವ್ ಚೌಧರಿ

ಮಿಗ್ –21 ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪೈಲಟ್ ಅಂತ್ಯಕ್ರಿಯೆ

ಪಿಟಿಐ
Published 22 ಮೇ 2021, 14:35 IST
Last Updated 22 ಮೇ 2021, 14:35 IST
ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ಐಎಎಫ್‌ನ ಮಿಗ್‌–21 ವಿಮಾನ ದುರಂತದಲ್ಲಿ ಸಾವಿಗೀಡಾದ ಪೈಲಟರ್ ಅಭಿನವ್ ಚೌಧರಿ ಅವರ ಮೃತದೇಹವನ್ನು ಐಎಎಫ್ ಅಧಿಕಾರಿಗಳು ಶನಿವಾರ ಮೀರತ್‌ನಲ್ಲಿರುವ ಅಭಿನವ್ ಅವರ ಮನೆಗೆ ತಲು‌ಪಿಸಿದರು– ಪಿಟಿಐ ಚಿತ್ರ
ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ಐಎಎಫ್‌ನ ಮಿಗ್‌–21 ವಿಮಾನ ದುರಂತದಲ್ಲಿ ಸಾವಿಗೀಡಾದ ಪೈಲಟರ್ ಅಭಿನವ್ ಚೌಧರಿ ಅವರ ಮೃತದೇಹವನ್ನು ಐಎಎಫ್ ಅಧಿಕಾರಿಗಳು ಶನಿವಾರ ಮೀರತ್‌ನಲ್ಲಿರುವ ಅಭಿನವ್ ಅವರ ಮನೆಗೆ ತಲು‌ಪಿಸಿದರು– ಪಿಟಿಐ ಚಿತ್ರ   

ಬಾಗ್ಪತ್ (ಉತ್ತರ ಪ್ರದೇಶ): ಪಂಜಾಬಿನ ಮೊಗ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಮಿಗ್–21 ವಿಮಾನವು ಪತನಗೊಂಡು ಸಾವಿಗೀಡಾದ ಭಾರತೀಯ ವಾಯುಪಡೆಯ (ಐಎಎಫ್‌) ಪೈಲಟ್ ಅಭಿನವ್ ಚೌಧರಿ ಅವರ ಅಂತ್ಯಕ್ರಿಯೆಯನ್ನು ಉತ್ತರಪ್ರದೇಶದ ಪುಸಾರ್ ಗ್ರಾಮದಲ್ಲಿ ಮಿಲಿಟರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಪಶ್ಚಿಮ ವಲಯದಲ್ಲಿ ಗುರುವಾರ ತಡರಾತ್ರಿ ತರಬೇತಿ ನಡೆಯುತ್ತಿದ್ದ ಸಮಯದಲ್ಲಿ ಮಿಗ್ -21 ವಿಮಾನವು ಗ್ರಾಮವೊಂದರಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೈಲಟ್ ಸ್ಕ್ವಾಡ್ರನ್ ಲೀಡರ್ ಅಭಿನವ್ ಚೌಧರಿ ಸಾವಿಗೀಡಾಗಿದ್ದರು.

2014ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿದ್ದ ಅಭಿನವ್ ವರದಕ್ಷಿಣೆಯಂಥ ಸಾಮಾಜಿಕ ದುಷ್ಟಪದ್ಧತಿಗಳ ವಿರೋಧಿಯಾಗಿದ್ದರು. 2019ರಲ್ಲಿ ಸೋನಿಕಾ ಅವರನ್ನು ವಿವಾಹವಾದ ಸಂದರ್ಭದಲ್ಲಿ ಅಭಿನವ್ ಮದುವೆಯ ಖರ್ಚಿಗೆಂದು ಕೇವಲ ₹ 100 ಮಾತ್ರ ತೆಗೆದುಕೊಂಡಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ತಿಳಿಸಿದ್ದಾರೆ. ಪಠಾಣ್‌ ಕೋಟ್ ವಾಯುನೆಲೆಯಲ್ಲಿ ನೆಲೆಸಿದ್ದ ಅವರು ತರಬೇತಿ ಪಡೆಯುತ್ತಿದ್ದರು.

ADVERTISEMENT

ಮಗನ ಸಾವಿನ ಸುದ್ದಿ ತಿಳಿದ ಸತ್ಯೇಂದ್ರ ಚೌಧರಿ ಅವರು, ‘ಭಾರತೀಯ ವಾಯುಪಡೆಯಲ್ಲಿ ಹಳೆಯ ಮಿಗ್ ವಿಮಾನಗಳಿದ್ದು, ಪೈಲಟ್‌ಗಳು ಅವುಗಳನ್ನೇ ಬಳಸಬೇಕಾಗಿದೆ. ಇದರಿಂದ ಪೈಲಟ್‌ಗಳ ಪ್ರಾಣಕ್ಕೆ ಅಪಾಯವಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ವರ್ಷ ಮಿಗ್–21 ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಅಭಿನವ್ ಮೂರನೆಯವರು. 1971–72ರ ನಂತರ ಇದುವರೆಗೆ ಸುಮಾರು 400 ಮಿಗ್–21 ವಿಮಾನಗಳು ಪತನಗೊಂಡಿದ್ದು, 200ಕ್ಕೂ ಹೆಚ್ಚಿನ ಪೈಲಟ್‌ಗಳು ಹಾಗೂ 50 ನಾಗರಿಕರು ಸಾವಿಗೀಡಾಗಿದ್ದಾರೆ.

ಶನಿವಾರ ಬೆಳಿಗ್ಗೆ ತ್ರಿವರ್ಣದಲ್ಲಿ ಸುತ್ತಿದ ಅಭಿನವ್ ಅವರ ಶವವನ್ನು ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಿಂದ ಐಎಎಫ್ ಅಧಿಕಾರಿಗಳು ಮೀರತ್‌ನ ಗಂಗಾಸಾಗರ್‌ನಲ್ಲಿರುವ ಅವರ ಕುಟುಂಬ ನಿವಾಸಕ್ಕೆ ತಲುಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.