ADVERTISEMENT

ಮಿಗ್‌–17 ಹೆಲಿಕಾಪ್ಟರ್‌ ಪತನ: ವಾಯುಪಡೆಯಿಂದ ತನಿಖೆ ಆರಂಭ

ಪಿಟಿಐ
Published 1 ಏಪ್ರಿಲ್ 2019, 1:17 IST
Last Updated 1 ಏಪ್ರಿಲ್ 2019, 1:17 IST
ಫೆ.27ರಂದು ಪತನಗೊಂಡಿದ್ದ ಹೆಲಿಕಾಪ್ಟರ್‌
ಫೆ.27ರಂದು ಪತನಗೊಂಡಿದ್ದ ಹೆಲಿಕಾಪ್ಟರ್‌   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಂನಲ್ಲಿ ಫೆ.27 ರಂದು ಭಾರತೀಯ ವಾಯುಪಡೆಯ ಮಿಗ್‌–17 ಹೆಲಿಕಾಪ್ಟರ್‌ ಪತನದ ಕುರಿತು ವಾಯುಪಡೆ ತನಿಖೆ ನಡೆಸಲಿದೆ. ಬಾಲಾಕೋಟ್‌ನಲ್ಲಿನ ಉಗ್ರರ ಶಿಬಿರಗಳ ಮೇಲೆ ವಾಯುದಾಳಿ ನಡೆದ ನಂತರ ಉಂಟಾದ ಸಂಘರ್ಷದ ವೇಳೆಯಲ್ಲೇ ಹೆಲಿಕಾಪ್ಟರ್ ಪತನಗೊಂಡಿತ್ತು. ಭಾರತದ ವಾಯುಪಡೆಯೇ ‘ತಪ್ಪಾಗಿ’ ಹೆಲಿಕಾಪ್ಟರ್‌ಅನ್ನು ಹೊಡೆದುರುಳಿಸಿರುವ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶತ್ರು ದೇಶ ಇಲ್ಲವೇ ತನ್ನದೇ ದೇಶಕ್ಕೆ ಸೇರಿದ ಹಾರಾಟದ ವಸ್ತುಗಳ ಬಗ್ಗೆ ರೆಡಾರ್‌ಗೆ ಮಾಹಿತಿ ನೀಡುವ ಐಎಫ್‌ಎಫ್‌ ವ್ಯವಸ್ಥೆಯನ್ನು ಹೆಲಿಕಾಪ್ಟರ್‌ನಲ್ಲಿ ಚಾಲೂ ಮಾಡಿರದೇ ಸಾಧ್ಯತೆ ಇದೆ ಎಂದು ತಮ್ಮ ಗುರುತು ತಿಳಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಐಎಫ್ಎಫ್‌ ತಂತ್ರಜ್ಞಾನವನ್ನು ಎರಡನೇ ಮಹಾಯುದ್ಧದ ವೇಳೆ ಅಭಿವೃದ್ಧಿಪಡಿಸಲಾಗಿದೆ. ಯಾವುದಾದರೂ ಹಾರಾಟದ ವಸ್ತುಗಳ ಕುರಿತು ಸಮೀಪದ ರೆಡಾರ್‌ಗೆ ಸಂ‌ಕೇತಗಳನ್ನು ರವಾನಿಸುತ್ತದೆ.

ADVERTISEMENT

ಬಾಲಾಕೋಟ್‌ನಲ್ಲಿನ ಉಗ್ರರ ಶಿಬಿರಗಳ ಮೇಲೆ ಫೆ.26 ರಂದು ವಾಯುದಾಳಿ ನಡೆಸಲಾಗಿತ್ತು. ಇದಾದ ಮಾರನೇ ದಿನವೇ ಮಿಗ್‌–17 ಹೆಲಿಕಾಪ್ಟರ್ ಪತನಗೊಂಡಿತ್ತು. ಇದರಲ್ಲಿದ್ದ ಎಲ್ಲಾ ಆರು ಮಂದಿಯೂ ಮೃತಪಟ್ಟಿದ್ದರು. ತನ್ನದೇ ವಾಯುರಕ್ಷಣಾ ವ್ಯವಸ್ಥೆಯ ಮೂಲಕ ಈ ಹೆಲಿಕಾಪ್ಟರ್‌ ಅನ್ನು ಹೊಡೆದುರುಳಿಸಲಾಗಿದೆ ಎಂಬುದನ್ನು ವಾಯುಪಡೆ ಅಲ್ಲಗಳೆದಿದೆ.

ಹಾರಾಟದ ಅವಘಡಗಳಲ್ಲಿಅಂತಿಮವಾಗಿ ಕಾರಣದ ಬಗ್ಗೆ ತೀರ್ಮಾನ ಕೈಗೊಳ್ಳುವ ಮೊದಲು ಎಲ್ಲಾ ರೀತಿಯಿಂದಲೂ ತನಿಖೆ ನಡೆಸಲಾಗುವುದು ಎಂದು ವಾಯುಪಡೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಫೆ.27 ರ ಬೆಳಿಗ್ಗೆ 10.10ಕ್ಕೆ ಶ್ರೀನಗರ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ್ದ ಮಿಗ್‌–17 ಹೆಲಿಕಾಪ್ಟರ್‌ ಬುಡ್ಗಾಂನಲ್ಲಿ ಪತನಗೊಂಡಿತ್ತು. ಭಾರತದ ವಾಯಪ್ರದೇಶವನ್ನು ಪಾಕಿಸ್ತಾನ ವಾಯುಪಡೆಯ ವಿಮಾನ ಪ್ರವೇಶಕ್ಕೆ ಯತ್ನಿಸುವ ವೇಳೆಯಲ್ಲಿ ಅವಘಡ ಸಂಭವಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.