ADVERTISEMENT

2ನೇ ಹಂತದಲ್ಲಿ ಭಾರತಕ್ಕೆ ಮತ್ತೆ ನಾಲ್ಕು ರಫೇಲ್ ವಿಮಾನಗಳು

ಪಿಟಿಐ
Published 15 ಅಕ್ಟೋಬರ್ 2020, 21:25 IST
Last Updated 15 ಅಕ್ಟೋಬರ್ 2020, 21:25 IST
ರಫೇಲ್ ಜೆಟ್ ವಿಮಾನ (ಸಾಂದರ್ಭಿಕ ಚಿತ್ರ)
ರಫೇಲ್ ಜೆಟ್ ವಿಮಾನ (ಸಾಂದರ್ಭಿಕ ಚಿತ್ರ)   

ನವದೆಹಲಿ: ಭಾರತೀಯ ವಾಯುಪಡೆಯು (ಐಎಎಫ್‌) ಎರಡನೇ ಹಂತದಲ್ಲಿ ನಾಲ್ಕು ರಫೇಲ್ ಯುದ್ಧ ವಿಮಾನಗಳನ್ನು ಸೇರ್ಪಡೆಗೊಳಿಸುವ ಸಿದ್ಧತೆಯಲ್ಲಿದ್ದು, ಇದಕ್ಕಾಗಿ ಫ್ರಾನ್ಸ್‌ಗೆ ತಂಡವನ್ನು ಕಳುಹಿಸಿದೆ.

ಫ್ರಾನ್ಸ್‌ನ ಸೇಂಟ್-ಡಿಜಿಯರ್ ವಾಯುನೆಲೆಯಲ್ಲಿ ತರಬೇತಿ ಪಡೆಯುತ್ತಿರುವ ಪೈಲಟ್‌ಗಳ ಕಾರ್ಯಕ್ಷಮತೆ ಹಾಗೂ ರಫೇಲ್ ಯುದ್ಧವಿಮಾನಗಳ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಭಾರತೀಯ ಅಧಿಕಾರಿಗಳ ತಂಡವು ಫ್ರಾನ್ಸ್‌ಗೆ ತೆರಳಿದೆ.

ಇನ್ನು ನಾಲ್ಕು ವಾರಗಳಲ್ಲಿ ಭಾರತಕ್ಕೆ ಎರಡನೇ ಹಂತದಲ್ಲಿ ನಾಲ್ಕು ರಫೇಲ್ ಯುದ್ಧವಿಮಾನಗಳು ಬಂದಿಳಿಯುವ ನಿರೀಕ್ಷೆ ಇದೆ.

ADVERTISEMENT

ಇಲ್ಲಿಯವರೆಗೆ 10 ರಫೇಲ್ ಯುದ್ಧವಿಮಾನಗಳನ್ನು ಭಾರತಕ್ಕೆ ಕಳುಹಿಸಲಾಗಿದೆ. ಅವುಗಳಲ್ಲಿ ಐದು ರಫೇಲ್ ವಿಮಾನಗಳನ್ನು ಫ್ರಾನ್ಸ್‌ನಲ್ಲಿಯೇ ಉಳಿಸಲಾಗಿದ್ದು, ಅಲ್ಲಿ ಭಾರತೀಯ ವಾಯುಪಡೆಯ ಪೈಲಟ್‌ಗಳು ತರಬೇತಿ ಪಡೆಯುತ್ತಿದ್ದಾರೆ.

ಭಾರತವು ಫ್ರಾನ್ಸ್ ದೇಶದಿಂದ ₹ 59 ಸಾವಿರ ಕೋಟಿ ವೆಚ್ಚದಲ್ಲಿ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದ್ದು, ಅದರಲ್ಲಿ ಮೊದಲ ಹಂತದಲ್ಲಿ 5 ರಫೇಲ್ ವಿಮಾನಗಳು ಜುಲೈ 29ರಂದು ಭಾರತಕ್ಕೆ ಬಂದಿವೆ.

ರಫೇಲ್ ಯೋಜನೆಯ ಪ್ರಗತಿಯ ಮೇಲ್ವಿಚಾರಣೆಗಾಗಿ ಜನವರಿಯಿಂದ ಫ್ರಾನ್ಸ್‌ಗೆ ಐಎಎಫ್‌ನ ಹಲವು ತಂಡಗಳು ಭೇಟಿ ನೀಡಿವೆ ಎಂದು ವಾಯುಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2023ರ ವೇಳೆಗೆ ಎಲ್ಲಾ 36 ರಫೇಲ್ ವಿಮಾನಗಳು ಭಾರತದಲ್ಲಿರಲಿವೆ ಎಂದು ಏರ್‌ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.