ADVERTISEMENT

ಚೆನ್ನೈನ ಮರೀನಾ ಬೀಚ್‌ನಲ್ಲಿ ಭಾರತೀಯ ವಾಯುಸೇನೆಯ ಬೃಹತ್ ಏರ್‌ಶೋ ಅಕ್ಟೋಬರ್ 6ರಂದು

ಪಿಟಿಐ
Published 21 ಸೆಪ್ಟೆಂಬರ್ 2024, 14:04 IST
Last Updated 21 ಸೆಪ್ಟೆಂಬರ್ 2024, 14:04 IST
<div class="paragraphs"><p>ಸೂರ್ಯಕಿರಣ್ ತಂಡದ ವೈಮಾನಿಕ ಪ್ರದರ್ಶನ (ಸಂಗ್ರಹ ಚಿತ್ರ)</p></div>

ಸೂರ್ಯಕಿರಣ್ ತಂಡದ ವೈಮಾನಿಕ ಪ್ರದರ್ಶನ (ಸಂಗ್ರಹ ಚಿತ್ರ)

   

ಪ್ರಜಾವಾಣಿ ಚಿತ್ರ

ನವದೆಹಲಿ: ವಾಯು ಸೇನೆಯಲ್ಲಿ ಮುಂಚೂಣಿಯಲ್ಲಿರುವ 72 ಯುದ್ಧ ವಿಮಾನಗಳು ಚೆನ್ನೈನ ಮರೀನಾ ಬೀಚ್‌ನಲ್ಲಿ ಅ. 6ರಂದು ವಿವಿಧ ರಚನೆಗಳನ್ನು ಒಳಗೊಂಡ ಬೃಹತ್ ವೈಮಾನಿಕ ಪ್ರದರ್ಶನವನ್ನು ಆಯೋಜಿಸಿದೆ. 

ADVERTISEMENT

ಭಾರತೀಯ ವಾಯುಸೇನೆಯ 92ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಏರ್‌ಶೋ ಆಯೋಜನೆಗೊಂಡಿದೆ. ಪ್ರತಿ ವರ್ಷ ಅ. 8ರಂದು ಭಾರತೀಯ ವಾಯುಸೇನೆಯು ‘ಐಎಎಫ್ ಡೇ’ ಆಯೋಜಿಸುತ್ತಾ ಬಂದಿದೆ.

‘‘ಭಾರತೀಯ ವಾಯು ಸೇನಾ– ಸಕ್ಷಮ, ಸಶಕ್ತ, ಆತ್ಮನಿರ್ಭರ’ ಎಂಬ ಪರಿಕಲ್ಪನೆಯೊಂದಿಗೆ ಈ ಬಾರಿಯ ವಾಯುಸೇನೆ ದಿನವನ್ನು ಆಯೋಜಿಸಲಾಗುತ್ತಿದೆ. ದೇಶದ ವಾಯು ಪ್ರದೇಶವನ್ನು ಅಚಲ ಬದ್ಧತೆಯೊಂದಿಗೆ ರಕ್ಷಿಸುತ್ತಿರುವುದನ್ನು ಮುಖ್ಯವಾಗಿಟ್ಟುಕೊಂಡು ವಾಯುಸೇನೆಯು ಈ ವೈಮಾನಿಕ ಪ್ರದರ್ಶನ ಆಯೋಜಿಸಲಾಗಿದೆ’ ಎಂದು ವಾಯು ಸೇನೆಯ ಪ್ರಕಟಣೆ ತಿಳಿಸಿದೆ.

ಈ ಏರ್‌ಶೋನಲ್ಲಿ ಸ್ಕೈಡೈವಿಂಗ್‌ನಲ್ಲಿ ಸಿದ್ಧಹಸ್ತರೆನಿಸಿರುವ ಐಎಎಫ್‌ ಆಕಾಶ ಗಂಗಾ ತಂಡದಿಂದ ಪ್ರದರ್ಶನ ನಡೆಯಲಿದೆ. ಇವರೊಂದಿಗೆ ಸೂರ್ಯಕಿರಣ ಏರೊಬ್ಯಾಟಿಕ್ ತಂಡ ಹಾಗೂ ಸಾರಂಗ್ ಹೆಲಿಕಾಪ್ಟರ್‌ನ ಪ್ರದರ್ಶನವೂ ಆಯೋಜನೆಗೊಂಡಿದೆ. 

‘ಈ ಪ್ರದರ್ಶನದಲ್ಲಿ ಭಾರತೀಯ ವಾಯುಸೇನೆಯು ತನ್ನಲ್ಲಿರುವ ಯುದ್ಧ ವಿಮಾನಗಳ ಸಾಮರ್ಥ್ಯವನ್ನು ಪರಿಚಯಿಸಲಿದೆ. ಇದರಲ್ಲಿ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌, ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂಡ ಹಾಗೂ ಪಾರಂಪರಿಕ ವಿಮಾನವಾದ ಡಕೊಟಾ ಹಾಗೂ ಹಾರ್ವರ್ಡ್‌ಗಳ ಪ್ರದರ್ಶನವನ್ನೂ ಆಯೋಜಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಅ. 6ರಂದು ಬೆಳಿಗ್ಗೆ 11ಕ್ಕೆ ಮರೀನಾ ಸಮುದ್ರ ದಂಡೆಯ ಆಗಸದಲ್ಲಿ ನಡೆಯಲಿರುವ ಈ ಏರ್‌ಶೋ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಕಳೆದ ವರ್ಷ ಅ. 8ರಂದು ಇದೇ ಮಾದರಿಯ ಏರ್‌ಶೋವನ್ನು ಪ್ರಯಾಗ್‌ರಾಜ್‌ನ ಸಂಗಮ್ ಪ್ರದೇಶದಲ್ಲಿ ಭಾರತೀಯ ವಾಯುಸೇನೆ ಆಯೋಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.