ರುದ್ರಪ್ರಯಾಗ್: ಉತ್ತರಾಖಂಡದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕೇದಾರನಾಥ ಮಾರ್ಗದಲ್ಲಿ ಸಿಲುಕಿರುವ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ವಾಯುಸೇನೆಯ ಚಿನೂಕ್ ಹಾಗೂ ಎಂಐ17 ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ ಧಾಮಿ ಹೇಳಿದ್ದಾರೆ.
ಗುರುವಾರದಿಂದ ಆರಂಭವಾದ ಈ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು. ಈವರೆಗೂ ಸುಮಾರು 5 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಇವರಲ್ಲಿ ಕೆಲವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಿದರೆ, ಇನ್ನೂ ಕೆಲವರನ್ನು ರಾಜ್ಯ ನೈಸರ್ಗಿಕ ವಿಕೋಪ ದಳದ (ಎಸ್‌ಡಿಆರ್‌ಎಫ್) ಸಿಬ್ಬಂದಿ ಹಾಗೂ ರಾಷ್ಟ್ರೀಯ ನೈಸರ್ಗಿಕ ವಿಕೋಪ ದಳ (ಎನ್‌ಡಿಆರ್‌ಎಫ್) ಸಿಬ್ಬಂದಿ ಸ್ಥಳಾಂತರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
‘ಉತ್ತರಾಖಂಡದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಪರಿಹಾರ ಕಾರ್ಯದಲ್ಲಿ ಸರ್ಕಾರದ ಇಡೀ ಆಡಳಿತ ಯಂತ್ರದೊಂದಿಗೆ ವಿಪತ್ತು ನಿರ್ವಹಣಾ ತಂಡಗಳೂ ಭಾಗಿಯಾಗಿವೆ. ಪ್ರಧಾನಮಂತ್ರಿಗೆ ಮನವಿ ಮಾಡಿಕೊಂಡ ಪರಿಣಾಮ ವಾಯುಸೇನೆಯ ಚಿನೂಕ್ ಹಾಗೂ ಎಂಐ17 ಹೆಲಿಕಾಪ್ಟರ್‌ಗಳೂ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ’ ಎಂದು ಧಾಮಿ ತಿಳಿಸಿದ್ದಾರೆ.
‘ಹವಾಮಾನ ಪರಿಸ್ಥಿತಿ ಸುಧಾರಿಸಿದರೆ, ಸಿಕ್ಕಿಬಿದ್ದಿರುವ ಯಾತ್ರಾರ್ಥಿಗಳನ್ನು ಶುಕ್ರವಾರ ಸಂಜೆಯೊಳಗೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗುವುದು. ಗೃಹ ಸಚಿವ ಅಮಿತ್ ಶಾ ಅವರು ಕರೆ ಮಾಡಿ, ರಕ್ಷಣಾ ಕಾರ್ಯಾಚರಣೆ ಬಗ್ಗೆ ವಿಚಾರಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ರೀತಿಯ ಅಗತ್ಯ ನೆರವು ನೀಡುವುದಾಗಿಯೂ ಭರವಸೆ ನೀಡಿದ್ದಾರೆ’ ಎಂದಿದ್ದಾರೆ.
ಕೇದಾರನಾಥ ತಲುಪುವ ಕಾಲುದಾರಿಯಲ್ಲಿನ ಜಂಗಲ್‌ಚಟ್ಟಿ ಹಾಗ ಲಿಂಚೋಳಿ ಬಳಿ ಮೇಘಸ್ಫೋಟದಿಂದ ಭಾರಿ ಪ್ರಮಾಣದ ಹಾನಿಯಾಗಿದೆ. ಈ ಘಟನೆಯಲ್ಲಿ ಸಿಲುಕಿದವರ ನೆರವಿಗಾಗಿ ಸಹಾಯವಾಣಿ – 7579257572 ಹಾಗೂ 01364-233387 ಆರಂಭಿಸಲಾಗಿದೆ. ಇದರೊಂದಿಗೆ ತುರ್ತು ನೆರವಿಗೆ 112 ಸಂಖ್ಯೆಯನ್ನೂ ಬಳಸುವಂತೆ ಜಿಲ್ಲಾಡಳಿತ ನಾಗರಿಕರಿಗೆ ತಿಳಿಸಿದೆ. ಕೇದಾರನಾಥ ಯಾತ್ರಾರ್ಥಿಗಳು ಗೌರಿಕುಂಡ ಹಾಗೂ ಕೇದಾರನಾಥ ಮಾರ್ಗ ನಡುವಿನ ಭಿಂಬಲಿ ಬಳಿ ಸಿಲುಕಿದ್ದಾರೆ. ಈ ಮಾರ್ಗದಲ್ಲಿ ಸುಮಾರು 20ರಿಂದ 25 ಮೀಟರ್ ಉದ್ದದ ರಸ್ತೆಯೇ ಕೊಚ್ಚಿಹೋಗಿದೆ. ಘೋರಪರವ್, ಲಿಂಚೋಳಿ, ಬಡಿ ಲಿಂಚೋಳಿ ಹಾಗೂ ಭಿಂಬಲ್ ಬಳಿ ದೇವಾಲಯದ ಮಾರ್ಗದಲ್ಲಿ ಕಲ್ಲು ಬಂಡೆಗಳು ಬಿದ್ದಿವೆ.
ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. 5 ಸಾವಿರ ಆಹಾರ ಪೊಟ್ಟಣವನ್ನು ವಿತರಿಸಲಾಗಿದೆ. ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಾದಿ ಸುಗಮವಾಗುವವರೆಗೂ ಯಾತ್ರಾರ್ಥಿಗಳು ಎಲ್ಲಿದ್ದಾರೋ ಅಲ್ಲಿಯೇ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.