ADVERTISEMENT

ಅಲಾಸ್ಕಾದಲ್ಲಿ ‘ರೆಡ್‌ ಫ್ಲಾಗ್‌’ ಸಮರಾಭ್ಯಾಸ: ವಾಯುಪಡೆಯ ರಫೇಲ್‌ ಭಾಗಿ

ಪಿಟಿಐ
Published 16 ಜೂನ್ 2024, 15:46 IST
Last Updated 16 ಜೂನ್ 2024, 15:46 IST
.
.   

ನವದೆಹಲಿ: ಭಾರತೀಯ ವಾಯುಪಡೆಯ ರಫೇಲ್‌ ಯುದ್ಧ ವಿಮಾನಗಳು ಅಮೆರಿಕದ ಅಲಾಸ್ಕಾದಲ್ಲಿ ಜೂನ್‌ 4 ರಿಂದ 14ರ ವರೆಗೆ  ನಡೆದ ‘ರೆಡ್‌ ಫ್ಲಾಗ್‌’ ಸಮರಾಭ್ಯಾಸದಲ್ಲಿ ಇತರ ದೇಶಗಳ ಅತ್ಯಾಧುನಿಕ ಯುದ್ಧ ವಿಮಾನಗಳ ಜತೆ ಪಾಲ್ಗೊಂಡು ಕಸರತ್ತು ಪ್ರದರ್ಶಿಸಿವೆ.

‘ರೆಡ್‌ ಫ್ಲಾಗ್‌ ಸಮರಾಭ್ಯಾಸವು ಅಂತರರಾಷ್ಟ್ರೀಯ ಪಾಲುದಾರರ ಜತೆಗೂಡಿ ನಡೆಸಬಹುದಾದ ಜಂಟಿ ಸಮರಾಭ್ಯಾಸದ ಕುರಿತ ಒಳನೋಟವನ್ನು ಭಾರತೀಯ ವಾಯುಪಡೆಗೆ ನೀಡಿದೆ’ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ. 

ಈ ಸಮರಾಭ್ಯಾಸದಲ್ಲಿ ಐಎಎಫ್‌ ಅಲ್ಲದೆ, ಸಿಂಗಪುರ ಏರ್‌ ಫೋರ್ಸ್‌ (ಆರ್‌ಎಸ್‌ಎಎಫ್‌), ಬ್ರಿಟನ್‌ನ ರಾಯಲ್‌ ಏರ್‌ ಫೋರ್ಸ್ (ಆರ್‌ಎಎಫ್‌), ರಾಯಲ್‌ ನೆದರ್ಲೆಂಡ್ಸ್ ಏರ್‌ ಫೋರ್ಸ್ (ಆರ್‌ಎನ್‌ಎಲ್‌ಎಎಫ್‌) ಅಮೆರಿಕ ಮತ್ತು ಜರ್ಮನಿಯ ವಾಯು ಪಡೆಗಳು ಪಾಲ್ಗೊಂಡವು.

ADVERTISEMENT

ಈ ವೈಮಾನಿಕ ಸಮರಾಭ್ಯಾಸದಲ್ಲಿ ರಫೇಲ್‌ ಯುದ್ಧ ವಿಮಾನಗಳು ಪಾಲ್ಗೊಂಡದ್ದು ಇದೇ ಮೊದಲು. ರಫೇಲ್‌ ಯುದ್ಧ ವಿಮಾನಗಳು ಸಿಂಗಪುರ ವಾಯು ಪಡೆಯ ಎಫ್‌–16 ಮತ್ತು ಅಮೆರಿಕ ವಾಯು ‍ಪ‍ಡೆಯ ಎಫ್‌–15 ಯುದ್ಧ ವಿಮಾನಗಳ ಜತೆ ಜಂಟಿಯಾಗಿ ಕಸರತ್ತು ನಡೆಸಿವೆ.

‘ದೀರ್ಘ ಅವಧಿಯ ಹಾರಾಟ ಮತ್ತು ಆಗಸದಲ್ಲೇ ಇಂಧನ ತುಂಬಿಸಿಕೊಳ್ಳುವ ಪ್ರಕ್ರಿಯೆ ಸೇರಿದಂತೆ ಹಲವು ಹೊಸ ಅನುಭವಗಳನ್ನು ಈ ಸಮರಾಭ್ಯಾಸವು ವಾಯು ಪಡೆಯ ಯುವ ಸಿಬ್ಬಂದಿಗೆ ನೀಡಿದೆ’ ಎಂದು ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.