ADVERTISEMENT

ದೇಗುಲ ಮೈಕ್‌ನಿಂದ ಶಬ್ದ ಮಾಲಿನ್ಯ: IAS ಅಧಿಕಾರಿ ಹೇಳಿಕೆಗೆ ಹಿಂದೂ ಸಂಘಟನೆಗಳ ಕಿಡಿ

ಪಿಟಿಐ
Published 22 ಅಕ್ಟೋಬರ್ 2024, 15:28 IST
Last Updated 22 ಅಕ್ಟೋಬರ್ 2024, 15:28 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಭೊಪಾಲ್: ದೇವಾಲಯಗಳಲ್ಲಿ ತಡರಾತ್ರಿಯವರೆಗೂ ಮೊಳಗುವ ಮೈಕ್‌ ಹಾಗೂ ಡಿ.ಜೆ.ಗಳಿಂದ ವ್ಯಾಪಕ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂಬ ಐಎಎಸ್ ಅಧಿಕಾರಿ ಶೈಬಾಲಾ ಮಾರ್ಟಿನ್ ಅವರ ಹೇಳಿಕೆಗೆ ಹಿಂದೂ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಜತೆಗೆ ಅವರ ಕ್ಷಮೆಗೆ ಆಗ್ರಹಿಸಿವೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಸೀದಿಯೊಂದರ ಮುಂದೆ ಡಿ.ಜೆ. ಹಾಕಿರುವ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯಲ್ಲಿರುವ ಮಾರ್ಟಿನ್, ‘ಹಲವು ಬೀದಿಗಳಲ್ಲಿ ನಿರ್ಮಿಸಿರುವ ದೇವಸ್ಥಾನಗಳಲ್ಲಿ ಅಳವಡಿಸಿರುವ ಮೈಕ್‌ಗಳ ಮೂಲಕ ಮಧ್ಯರಾತ್ರಿಯವರೆಗೂ ಪ್ರಸಾರ ಮಾಡುವ ಗೀತೆಗಳಿಂದ ಶಬ್ದ ಮಾಲಿನ್ಯ ಉಂಟಾಗುವುದಿಲ್ಲವೇ? ಇದರಿಂದ ಯಾರಿಗೂ ತೊಂದರೆ ಉಂಟಾಗುತ್ತಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಅಧಿಕಾರಿಯ ಈ ಹೇಳಿಕೆಗೆ ಹಿಂದೂ ಸಂಘಟನೆಗಳ ಮುಖಂಡರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೋಪಾಲ್ ಮೂಲದ ಬಲಪಂಥೀಯ ‘ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಹೇಳಿಕೆ ನೀಡುವುದನ್ನು ನಿಲ್ಲಿಸಿ’ ಎಂದು ಸಂಘಟನೆ ಸಂಸ್ಕೃತಿ ಬಚಾವೋ ಮಂಚ್‌ ಖಾರವಾಗಿ ಪ್ರತಿಕ್ರಿಯಿಸಿದೆ.

‘ದೇವಾಲಯಗಳಲ್ಲಿ ಭಜನೆ, ಆರತಿ ನಡೆಯುತ್ತದೆ. ಅವೆಲ್ಲವೂ ಸುಶ್ರಾವ್ಯವಾಗಿ ಹಾಡಲಾಗುತ್ತದೆ. ಆದರೆ ನಾವು ಅರಚುವುದಿಲ್ಲ. ಮೊಹರಂ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆಯೇ? ಮಸೀದಿ ಎದುರು ನಾವು ಅಶಿಸ್ತಿನಿಂದ ವರ್ತಿಸಿದ್ದೇವೆಯೇ? ಆದರೆ, ರಾಮನವಮಿ, ಹನುಮಾನ್ ಜಯಂತಿಯ ಮೆರವಣಿಗೆ ಹಾಗೂ ನವರಾತ್ರಿಯ ಗರ್ಬಾದಲ್ಲಿ ಪಾಲ್ಗೊಂಡವರ ಮೇಲೆ ಕಲ್ಲು ತೂರಲಾಗುತ್ತದೆ. ದೇಶದಲ್ಲಿ ನಡೆಯುತ್ತಿರುವ ಇಂಥ ಘಟನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ನಂತರ ಪ್ರತಿಕ್ರಿಯಿಸಿ ಮೇಡಂ’ ಸಂಘಟನೆಯ ಮುಖ್ಯಸ್ಥ ಚಂದ್ರಶೇಖರ ತಿವಾರಿ ಆಗ್ರಹಿಸಿದ್ದಾರೆ.

‘ತಮ್ಮ ಹೇಳಿಕೆಗೆ ಹಿಂದೂಗಳ ಕ್ಷಮೆ ಕೋರಬೇಕು. ಜತೆಗೆ ಮುಖ್ಯಮಂತ್ರಿ ಮೋಹನ ಯಾದವ್ ಅವರು ಈ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಮಾರ್ಟಿನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಆಡಳಿತಾರೂಢ ಬಿಜೆಪಿ ನಿರಾಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.