ಹೈದರಾಬಾದ್: ಆಂಧ್ರ ಪ್ರದೇಶದ ವಿಜಯನಗರಂನಲ್ಲಿ ಐಎಎಸ್ ಅಧಿಕಾರಿಯೊಬ್ಬರು ಸಚಿವರು ಮತ್ತು ಅವರ ಪತ್ನಿಯ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ಜನವರಿ 1ರಂದು ನಡೆದಿದ್ದು, ವಿಡಿಯೊ ವ್ಯಾಪಕವಾಗಿ ಹಂಚಿಕೆ ಆಗಿದೆ. ಅಧಿಕಾರಿ ಮತ್ತು ರಾಜಕಾರಣಿಗಳ ನಡೆಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಪುರಸಭೆ ಮತ್ತು ನಗರಾಭಿವೃದ್ಧಿ ಸಚಿವ ಬೊತ್ಸ ಸತ್ಯನಾರಾಯಣ ಮತ್ತು ಅವರ ಪತ್ನಿಗೆ ಹೂಗುಚ್ಛವನ್ನು ನೀಡಿದ ತೆರಿಗೆ ಇಲಾಖೆಯ ಅಧಿಕಾರಿ ಕಿಶೋರ್ ಕುಮಾರ್ ಇಬ್ಬರ ಕಾಲು ಮುಟ್ಟಿ ನಮಸ್ಕರಿಸುವುದು ವಿಡಿಯೊದಲ್ಲಿದೆ.
'ಹೊರಗೆ ಬಿಂಬಿತಗೊಂಡಿರುವಂತೆ ಏನೂ ನಡೆದಿಲ್ಲ. ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ. ನನ್ನ ವೃತ್ತಿಗೆ ರಾಜೀನಾಮೆ ಕೊಟ್ಟು, ಶಾಸಕನಾಗುವ ಆಸೆ ಇಲ್ಲ' ಎಂದು 'ಡೆಕ್ಕನ್ ಹೆರಾಲ್ಡ್'ಗೆ ಕಿಶೋರ್ ಕುಮಾರ್ ಹೇಳಿದ್ದಾರೆ.
'ಐಎಎಸ್ ಅಧಿಕಾರಿಯೊಬ್ಬರು ರಾಜಕಾರಣಿಯ ಕಾಲಿಗೆ ಬೀಳುವುದು ನಾಚಿಕೆಗೇಡು. ಇದನ್ನು ಖಂಡಿಸಲು ಐಎಎಸ್ ಅಧಿಕಾರಿಗಳ ಒಕ್ಕೂಟಕ್ಕೆ ಇದು ಸೂಕ್ತ ಸಮಯವಲ್ಲವೇ? ಏಕೆ ಬಾಯಿ ಮುಚ್ಚಿಕೊಂಡಿದ್ದಾರೆ?' ಎಂದು ಟಿಡಿಪಿ ಮುಖಂಡ ವರ್ಲ ರಾಮಯ್ಯ ಪ್ರಶ್ನಿಸಿದ್ದಾರೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಧಿಕಾರಿಗಳು ರಾಜಕಾರಣಿಗಳ ಕಾಲಿಗೆ ಬೀಳುವುದು ಹೊಸ ವಿಚಾರವೇನೂ ಅಲ್ಲ. ಕಳೆದ ವರ್ಷ ಜೂನ್‌ನಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಕಾಲಿಗೆ ಬಿದ್ದಿದ್ದರು. ಸಿದ್ದಿಪೇಟ್‌ನ ವೆಂಕಟ್ರಾಮಿ ರೆಡ್ಡಿ ಮತ್ತು ಕಾಮಾರೆಡ್ಡಿ ಜಿಲ್ಲೆಯ ಸರತ್ ಅವರು ತಮ್ಮ ಜಿಲ್ಲೆಯ ಹೊಸ ಕಲೆಕ್ಟರೆಟ್ ಕಾಂಪ್ಲೆಕ್ಸ್ ಉದ್ಘಾಟನೆ ವೇಳೆ ಸಿಎಂ ಕಾಲಿಗೆ ಬಿದ್ದಿದ್ದರು.
ತಂದೆಯ ಪೂಜ್ಯ ಭಾವನೆಯಿಂದ ಚಂದ್ರಶೇಖರ್ ರಾವ್ ಅವರ ಕಾಲಿಗೆ ಬಿದ್ದಿದ್ದಾಗಿ ವೆಂಕಟ್ರಾಮಿ ರೆಡ್ಡಿ ಸಮರ್ಥಿಸಿಕೊಂಡಿದ್ದರು. ನಂತರ ಆರು ತಿಂಗಳಲ್ಲಿ ವೃತ್ತಿಗೆ ರಾಜೀನಾಮೆ ಸಲ್ಲಿಸಿದ್ದರು. ಮರುದಿನವೇ ಎಂಎಲ್‌ಸಿಯಾಗಿ ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.