ಮುಂಬೈ: ವಿವಾದಿತ ಐಎಎಸ್ ಪ್ರೊಬೇಷನರಿ ಅಧಿಕಾರಿ ಡಾ. ಪೂಜಾ ಖೇಡ್ಕರ್ ಅವರ ಆಡಿ ಕಾರಿಗೆ ಅಕ್ರಮವಾಗಿ ಕೆಂಪು ದೀಪ ಅಳವಡಿಸಿ, ‘ಮಹಾರಾಷ್ಟ್ರ ಸರ್ಕಾರ’ ಎಂದು ನಾಮಫಲಕ ಅಳವಡಿಸಿದ ಪುಣೆ ಮೂಲದ ಖಾಸಗಿ ಸಂಸ್ಥೆಗೆ ಆರ್‌ಟಿಒ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಂಪನಿಯ ವಿರುದ್ಧ ಪುಣೆ ಪ್ರಾದೇಶಿಕ ಸಾರಿಗೆ ಕಚೇರಿಯು ಗುರುವಾರವೇ ಕ್ರಮಕ್ಕೆ ಮುಂದಾಗಿದೆ.
‘ಜಿಲ್ಲೆಯ ಹವೇಲಿ ತಾಲ್ಲೂಕಿನ ಶಿವಾನೆ ಗ್ರಾಮದ ಕೆಳಗಿನ ವಿಳಾಸದಲ್ಲಿ ನೋಂದಣಿಯಾದ ಎಂಎಚ್–12/ಎಆರ್700 ಆಡಿ ಕಾರಿನ ಪರಿಶೀಲನೆಗಾಗಿ ತಕ್ಷಣವೇ ಆರ್‌ಟಿಒ ಕಚೇರಿ ಮುಂದೆ ಹಾಜರುಪಡಿಸಬೇಕು. ಫ್ಲೈಯಿಂಗ್ ಸ್ಕ್ಯಾಡ್ ಕೂಡಲೇ ವಾಹನವನ್ನು ಪತ್ತೆಹಚ್ಚಿ, ಸೂಕ್ತ ಕ್ರಮಕ್ಕೆ ಮುಂದಾಗಬೇಕು’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
32 ವರ್ಷದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಬಳಸುತ್ತಿದ್ದ ಕೆಂಪುದೀಪ ಹೊಂದಿದ್ದ ಬಿಳಿ ಬಣ್ಣದ ಆಡಿ ಕಾರಿನ ಭಾವಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಪುಣೆಗೆ ಪೋಸ್ಟಿಂಗ್ ಮಾಡಿದ್ದ ವೇಳೆ ಪ್ರತ್ಯೇಕ ಕ್ಯಾಬಿನ್, ಸಿಬ್ಬಂದಿ ಒದಗಿಸುವಂತೆ ಬೇಡಿಕೆಯಿಡುವ ಮೂಲಕ ವಿವಾದಕ್ಕೂ ಕಾರಣವಾಗಿದ್ದರು. ಸರ್ಕಾರದ ಅನುಮತಿ ಪಡೆಯದೇ, ತಮ್ಮ ಸ್ವಂತ ಆಡಿ ಕಾರಿಗೆ ಕೆಂಪು ದೀಪ ಅಳವಡಿಸಿದ್ದರು. ಹೀಗಾಗಿ, ತರಬೇತಿ ಅವಧಿ ಮುಗಿಯುವ ಮೊದಲೇ, ಅವರನ್ನು ಪುಣೆ ಜಿಲ್ಲೆಯಿಂದ ವಾಸೀಂ ಜಿಲ್ಲೆಗೆ ವರ್ಗಾಯಿಸಲಾಗಿತ್ತು.
ಹೊಸ ಜವಾಬ್ದಾರಿ ಸ್ವೀಕಾರ: ಗುರುವಾರವೇ ವಿದರ್ಭ ಪ್ರಾಂತ್ಯದ ವಾಸೀಂ ಜಿಲ್ಲೆಗೆ ಹಾಜರಾದ ಖೇಡ್ಕರ್ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ತಪ್ಪಿತಸ್ಥೆಯೆಂದು ಸಾಬೀತಾದರೆ ಸೇವೆಯಿಂದಲೇ ವಜಾ: (ನವದೆಹಲಿ)–ಪುಣೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಖೇಡ್ಕರ್ ನಡವಳಿಕೆ ಹೊರತಾಗಿಯೂ ಭಾರತೀಯ ಆಡಳಿತ ಸೇವೆ(ಐಎಎಸ್) ಸೇವೆಗೆ ಸೇರ್ಪಡೆಗೊಳ್ಳುವ ವೇಳೆ ಇತರೆ ಹಿಂದುಳಿದ ವರ್ಗ– ಅಂಗವಿಕಲ ಕೋಟಾ ದುರುಪಯೋಗಪಡಿಸಿಕೊಂಡಿದ್ದರು ಎಂದು ಆರೋಪ ಕೇಳಿಬಂದಿದೆ. ಖೇಡ್ಕರ್ ತಪ್ಪಿತಸ್ಥೆ ಎಂದು ಸಾಬೀತಾದರೆ, ತಮ್ಮ ಸೇವೆಯಿಂದಲೇ ವಜಾಗೊಳ್ಳಲಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದರು.
‘ನಾಗರಿಕ ಸೇವೆ ಪರೀಕ್ಷೆಯಲ್ಲಿ ಆಯ್ಕೆಯಾಗುವ ವೇಳೆ ಅವರು ಸಲ್ಲಿಸಿದ ಎಲ್ಲ ದಾಖಲೆಗಳನ್ನು ಕೇಂದ್ರ ಸರ್ಕಾರ ರಚಿಸಿದ ಏಕಸದಸ್ಯ ಸಮಿತಿಯು ಮರುಪರಿಶೀಲಿಸಲಿದೆ. ಈ ವೇಳೆ ತಪ್ಪಿತಸ್ಥೆ ಎಂದು ಸಾಬೀತಾದರೆ, ಅವರನ್ನು ಸೇವೆಯಿಂದ ವಜಾಗೊಳಿಸಬಹುದು. ಐಎಎಸ್ ಹುದ್ದೆಯ ಆಯ್ಕೆಗೆ ಸಲ್ಲಿಸಿದ ದಾಖಲೆಗಳನ್ನು ತಿರುಚಿದ್ದರೆ, ಕ್ರಿಮಿನಲ್ ಪ್ರಕರಣವನ್ನು ಎದುರಿಸಬೇಕಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪೂಜಾ ತಾಯಿಯಿಂದಲೂ ಬೆದರಿಕೆ
ಮುಂಬೈ: ಭೂ ವ್ಯವಹಾರ ಪ್ರಕರಣವೊಂದರಲ್ಲಿ ಪೂಜಾ ಖೇಡ್ಕರ್ ತಾಯಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪಿಸ್ತೂಲ್ ತೋರಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಈ ಪ್ರಕರಣದ ಕುರಿತಂತೆ ಖೇಡ್ಕರ್ ಕುಟುಂಬವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಖೇಡ್ಕರ್ ತಾಯಿ ಮನೋರಮಾ ಖೇಡ್ಕರ್ ಅವರು ಅಹಮದ್ ನಗರ ಜಿಲ್ಲೆಯ ಬಾಲಗಾಂವ್‌ನ ಸರಪಂಚ್ ಆಗಿದ್ದಾರೆ.
ಪುಣೆಯ ತಮ್ಮ ನಿವಾಸದ ಹೊರಗಡೆಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಮನೋರಮಾ ಬೆದರಿಕೆ ಒಡ್ಡಿದ್ದರು. ಇದಾದ ಮರುದಿನವೇ ಅವರ ಮತ್ತೊಂದು ಹಳೆಯ ವಿಡಿಯೊ ಹೊರಬಂದಿದೆ.
ಕೈಯಲ್ಲಿ ಪಿಸ್ತೂಲ್ ಹಿಡಿದು ನಿಂತಿದ್ದ ಮನೋರಮಾ, ಆಸ್ತಿ ದಾಖಲೆ ಪತ್ರಗಳು ಇದ್ದರೆ ತೋರಿಸಿ, ಈ ಜಾಗ ನನ್ನ ಹೆಸರಿನಲ್ಲಿದೆ. ನಿಮ್ಮದು ಎಂದು ಹಕ್ಕು ಮಂಡಿಸಿದರೆ, ನ್ಯಾಯಾಲಯದ ಆದೇಶ ತೋರಿಸಿ‘ ಎಂದು ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಈ ವೇಳೆ ಅವರ ಜೊತೆ ಬೌನ್ಸರ್‌ಗಳು ಜೊತೆಗಿರುವುದು ಕಂಡುಬಂದಿದೆ.
ಮನೆ ಮುಂದೆ ಬುಲ್ಡೋಜರ್: ಈ ಬೆಳವಣಿಗೆ ಬೆನ್ನಲ್ಲೇ, ಪೂಜಾ ಅವರ ಮನೆಮುಂದೆ ಪುಣೆ ಮಹಾನಗರ ಪಾಲಿಕೆಗೆ ಸೇರಿದ ಎರಡು ವಾಹನಗಳು, ಬುಲ್ಡೋಜರ್ ನಿಂತಿದ್ದು, ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಅಧಿಕಾರಿಗಳನ್ನು ಸಂಪರ್ಕಿಸಿದರೂ, ಯಾವುದೇ ಮಾಹಿತಿ ನೀಡಿಲ್ಲ.
****
ನಾನು ಮೊದಲು ತಿಳಿಸಿದಂತೆ, ಯಾವುದೇ ವಿಷಯದ ಕುರಿತು ನಾನು ಮಾತನಾಡಲ್ಲ. ಈ ಬಗ್ಗೆ ನನಗೆ ಮಾತನಾಡಲು ಅಧಿಕಾರವಿಲ್ಲ
-ಡಾ. ಪೂಜಾ ಖೇಡ್ಕರ್, ವಾಸೀಂ ಉಪ ವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.