ಜೈಪುರ: 2015ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದ ಟಿನಾ ಡಾಬಿ ಹಾಗೂ ಅವರ ಪತಿ ಅಥರ್ ಖಾನ್ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.
2018ರಲ್ಲಿ ಮದುವೆಯಾಗಿದ್ದ ಈ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ಇದೀಗ ಜೈಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದೆ. ಕಾಶ್ಮೀರ ಮೂಲದವರಾದ ಅಥರ್ ಖಾನ್ 2015ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಟೀನಾ ನಂತರದ ಸ್ಥಾನ (ಎರಡನೇ ರ್‍ಯಾಂಕ್ ) ಪಡೆದುಕೊಂಡಿದ್ದರು.
ಟೀನಾ ಮತ್ತು ಅಥರ್ ತರಬೇತಿ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಲಾರಂಭಿಸಿದ್ದರು ಎನ್ನಲಾಗಿದ್ದು, ಸದ್ಯ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಟೀನಾ ಮತ್ತು ಅಥರ್ ಅಂತರ್‌ಧರ್ಮೀಯರಾದ ಕಾರಣ ಹಲವು ರಾಜಕೀಯ ನಾಯಕರು ಮತ್ತು ಖ್ಯಾತನಾಮರು ಈ ಜೋಡಿಯನ್ನು ಅಭಿನಂದಿಸಿದ್ದರು. ಆದರೆ, ಹಿಂದೂ ಮಹಾಸಭಾ ಇದು ‘ಲವ್ ಜಿಹಾದ್’ ಎಂದು ಟೀಕಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಪರ ವಿರೋಧದ ಚರ್ಚೆ ನಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.