ADVERTISEMENT

ಟಿನಾ–ಅಥರ್‌ ವಿಚ್ಛೇದನ: ಅಧಿಕೃತವಾಗಿ ಬೇರೆಯಾದ ಐಎಎಸ್‌ ಟಾಪರ್‌ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಆಗಸ್ಟ್ 2021, 12:41 IST
Last Updated 11 ಆಗಸ್ಟ್ 2021, 12:41 IST
ಅಥರ್‌ ಆಮಿರ್‌–ಉಲ್‌–ಶಫಿ ಖಾನ್‌ ಮತ್ತು ಟಿನಾ ಡಾಬಿ
ಅಥರ್‌ ಆಮಿರ್‌–ಉಲ್‌–ಶಫಿ ಖಾನ್‌ ಮತ್ತು ಟಿನಾ ಡಾಬಿ   

ನವದೆಹಲಿ: ಭಾರತೀಯ ಆಡಳಿತ ಸೇವೆಗಳ (ಐಎಎಸ್‌) ಅಧಿಕಾರಿ ದಂಪತಿ ಟಿನಾ ಡಾಬಿ ಮತ್ತು ಅಥರ್‌ ಆಮಿರ್‌–ಉಲ್‌–ಶಫಿ ಖಾನ್‌ ಅವರು ಅಧಿಕೃತವಾಗಿ ಬೇರೆಯಾಗಿದ್ದಾರೆ. ಜೈಪುರ ನ್ಯಾಯಾಲಯವು ಐಎಎಸ್‌ ಟಾಪರ್‌ ದಂಪತಿಯ ವಿಚ್ಛೇದನ ಆದೇಶ ನೀಡಿದೆ. 2020ರ ನವೆಂಬರ್‌ನಲ್ಲೇ ಈ ದಂಪತಿ ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದರು.

ಅಂತರ್‌ಧರ್ಮೀಯ ಮದುವೆ, ಐಎಎಸ್‌ ಟಾಪರ್‌ಗಳ ಪ್ರೇಮ ಪ್ರಸಂಗ, ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗಳು,...ಹೀಗೆ ಹಲವು ಕಾರಣಗಳಿಂದಾಗಿ 2016ರಿಂದಲೂ ಈ ಜೋಡಿ ಸುದ್ದಿಯಲ್ಲಿದ್ದಾರೆ.

ಯುಪಿಎಸ್‌ಸಿ ನಡೆಸುವ ಸಿವಿಲ್‌ ಸರ್ವೀಸಸ್‌ ಪರೀಕ್ಷೆಯಲ್ಲಿ ಟಿನಾ ಡಾಬಿ 2015ರ ಬ್ಯಾಚ್‌ನ ಟಾಪರ್‌ ಆದವರು. ಸಿವಿಲ್‌ ಸರ್ವೀಸಸ್‌ನಲ್ಲಿ ಪ್ರಥಮ ಸ್ಥಾನ ಪಡೆದ ದಲಿತ ಸಮುದಾಯದ ಮೊದಲ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಯೂ ಟಿನಾ ಅವರ ಪಾಲಿಗಿದೆ. ಕಾಶ್ಮೀರ ಮೂಲದವರಾದ ಅಥರ್‌ ಖಾನ್‌ 2015ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಟೀನಾ ನಂತರದ ಸ್ಥಾನ (ಎರಡನೇ ರ್‍ಯಾಂಕ್ ) ಗಳಿಸಿದ್ದರು.

ADVERTISEMENT

2018ರಲ್ಲಿ ಮದುವೆಯಾಗಿದ್ದ ಈ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ 2020ರಲ್ಲಿ ಜೈಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಪ್ರಸ್ತುತ ಅಥರ್‌ ಶ್ರೀನಗರ ಮುನ್ಸಿಪಲ್‌ ಕಾರ್ಪೊರೇಷನ್‌ನ ಕಮಿಷನರ್‌ ಆಗಿದ್ದಾರೆ. ಟಿನಾ ಅವರು ರಾಜಸ್ಥಾನ ಸರ್ಕಾರದಲ್ಲಿ ಹಣಕಾಸು ಇಲಾಖೆಯ ಜಂಟಿ ನಿರ್ದೇಶಕರಾಗಿದ್ದಾರೆ.

ಟಿನಾ ಮೊದಲ ರ್‍ಯಾಂಕ್

ಮೊದಲ ಪ್ರಯತ್ನದಲ್ಲೇ ಟಿನಾ ಡಾಬಿ ಸಿವಿಲ್‌ ಸರ್ವೀಸಸ್‌ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್‌ ಗಳಿಸಿದರು. ಅಥರ್‌ ಅವರು 2015ರ ಪರೀಕ್ಷೆಯಲ್ಲಿ ಎರಡನೇ ರ್‍ಯಾಂಕ್‌ ಪಡೆಯುವುದಕ್ಕೂ ಮುನ್ನವೇ ಸಿವಿಲ್‌ ಸರ್ವೀಸಸ್‌ನ ಬೇರೊಂದು ಸೇವೆಗೆ ಆಯ್ಕೆಯಾಗಿದ್ದರು. ಟಿನಾ ಮತ್ತು ಅಥರ್‌ ಇಬ್ಬರೂ ರಾಜಸ್ಥಾನ ಕೇಡರ್‌ಗೆ ಸೇರಿದ ಐಎಎಸ್‌ ಅಧಿಕಾರಿಗಳಾಗಿದ್ದು, ಆರಂಭದಲ್ಲಿ ಇಬ್ಬರಿಗೂ ಜೈಪುರದಲ್ಲಿ ಸೇವೆಗೆ ನಿಯೋಜಿಸಲಾಗಿತ್ತು. ಅನಂತರದಲ್ಲಿ ಟಿನಾ ಅವರನ್ನು ಶ್ರೀ ಗಂಗಾನಗರ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಲಾಯಿತು.

2016ರಲ್ಲಿ ಮಸ್ಸೂರಿಯ ಲಾಲ್‌ ಬಹದೂರ್‌ ಶಾಸ್ತ್ರಿ ರಾಷ್ಟ್ರೀಯ ಅಕಾಡೆಮಿಯಲ್ಲಿ ತರಬೇತಿ ಸಮಯದಲ್ಲಿ ಮೊದಲ ಬಾರಿಗೆ ಟಿನಾ ಮತ್ತು ಅಥರ್‌ ಭೇಟಿಯಾದರು. ಇಬ್ಬರೂ ತರಬೇತಿ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಲಾರಂಭಿಸಿದ್ದರು. 2016ರ ನವೆಂಬರ್‌ನಲ್ಲಿ ಸಾಮಾಜಿಕ ಮಾಧ್ಯಮದ ಪೋಸ್ಟ್‌ ಮೂಲಕ ಟಿನಾ ಡಾಬಿ ಅವರು ಅಥರ್‌ ಆಮಿತ್‌ ಖಾನ್‌ ಜೊತೆಗಿನ ಸಂಬಂಧವನ್ನು ಬಹಿರಂಗ ಪಡಿಸಿದ್ದರು ಹಾಗೂ ಶೀಘ್ರದಲ್ಲೇ ಮದುವೆಯಾಗುವುದಾಗಿ ಪ್ರಕಟಿಸಿದ್ದರು.

'ಖಾನ್‌' ಅಳಿಸಿ ಹಾಕಿದ್ದ ಟಿನಾ

ಅದಾಗಿ ನಾಲ್ಕು ವರ್ಷಗಳಲ್ಲೇ (2020 ನವೆಂಬರ್‌) ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿರುವುದು ಸಾರ್ವಜನಿಕವಾಗಿ ತಿಳಿದಿತ್ತು. ಟಿನಾ ಅವರು ತಮ್ಮ ಸಾಮಾಜಿಕ ಖಾತೆಗಳಲ್ಲಿ ಹೆಸರಿನ ಜೊತೆಗಿದ್ದ 'ಖಾನ್‌' ಅಳಿಸಿ ಹಾಕಿದ್ದರು. ಅದೇ ಸಮಯದಲ್ಲಿ ಅಥರ್‌ ಖಾನ್‌ ಅವರು ಟಿನಾ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಿಂಬಾಲಿಸುವುದನ್ನು ನಿಲ್ಲಿಸಿದ್ದರು (ಅನ್‌ಫಾಲೊ).

2018ರ ಏಪ್ರಿಲ್‌ 7ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮದುವೆ ನೆರವೇರಿತ್ತು. ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಮುಖಂಡರು, ರಾಜಕಾರಣಿಗಳು, ಅಧಿಕಾರಿಗಳು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. 2021ರ ಆಗಸ್ಟ್‌ 10ರಂದು ಅವರ ವಿಚ್ಛೇದನ ಅಂತಿಮವಾಗಿದೆ.

(ಟಿನಾ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಇಲ್ಲಿದೆ)

ಟೀನಾ ಮತ್ತು ಅಥರ್‌ ಅಂತರ್‌ಧರ್ಮೀಯ ಮದುವೆಗೆ ಹಲವು ರಾಜಕೀಯ ನಾಯಕರು ಮತ್ತು ಖ್ಯಾತನಾಮರು ಜೋಡಿಯನ್ನು ಅಭಿನಂದಿಸಿದ್ದರು. ಆದರೆ, ಹಿಂದೂ ಮಹಾಸಭಾ ಇದು 'ಲವ್‌ ಜಿಹಾದ್‌' ಎಂದು ಟೀಕಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಪರ ವಿರೋಧದ ಚರ್ಚೆ ನಡೆದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.