ಭುವನೇಶ್ವರ: ಹೃದಯಾಘಾತ ಹಾಗೂ ಪಾರ್ಶ್ವವಾಯು ಸಂಭವಿಸಿದ ಸಂದರ್ಭದಲ್ಲಿ ತ್ವರಿತ ಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ರಾಷ್ಟ್ರೀಯ ಆರೋಗ್ಯ ಸಂಶೋಧನಾ ಆದ್ಯತೆ ಯೋಜನೆಯ ಅನುಷ್ಠಾನ ಆರಂಭಗೊಂಡಿದೆ.
ಇಲ್ಲಿ ನಡೆದ ಮೂರು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಅಧಿಕಾರಿಗಳು ಬುಧವಾರ ಈ ವಿಷಯವನ್ನು ಖಚಿತಪಡಿಸಿದರು.
ಆರಂಭದಲ್ಲಿ ಒಡಿಶಾದ ಪುರಿ, ಪಂಜಾಬ್‌ನ ಲುಧಿಯಾನ, ಮಧ್ಯಪ್ರದೇಶದ ವಿದಿಶಾ, ಗುಜರಾತ್‌ನ ವಡೋದರಾ ಹಾಗೂ ಪುದುಚೇರಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ಈ ಯೋಜನೆಯು ಪುರಿಯಿಂದ ಆರಂಭಗೊಳ್ಳಲಿದೆ. ಯೋಜನೆಗೆ ಐಸಿಎಂಆರ್ ಅನುದಾನ ನೀಡಲಿದೆ. ಏಮ್ಸ್–ಭುವನೇಶ್ವರ ತಾಂತ್ರಿಕ ನೆರವು ನೀಡಲಿದೆ. ರಾಜ್ಯ ಸರ್ಕಾರವು ಮಾನವ ಸಂಪನ್ಮೂಲ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಲಿದೆ.
‘ತುರ್ತು ಸಂದರ್ಭದಲ್ಲಿ ರೋಗಿಯನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ, ಆರೋಗ್ಯ ಸೇವೆ ಪೂರೈಕೆದಾರರ ಸಾಮರ್ಥ್ಯ ಹೆಚ್ಚಳ, ಮಾಹಿತಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಅಂತರ್ಗತ ತಂತ್ರಜ್ಞಾನ, ಮ್ಯಾಪಿಂಗ್ ಸೌಕರ್ಯ ಎಲ್ಲವೂ ಈ ಯೋಜನೆಯಲ್ಲಿ ಒಳಗೊಂಡಿದೆ’ ಎಂದು ಭುವನೇಶ್ವರ ಏಮ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಆಶುತೋಷ್ ಬಿಸ್ವಾಸ್ ಹೇಳಿದ್ದಾರೆ.
‘ಈ ಯೋಜನೆಯಲ್ಲಿ ಆಂಬುಲೆನ್ಸ್ ಸೇವೆಯನ್ನು ಉತ್ತಮಪಡಿಸುವುದು, ಸಮುದಾಯದಿಂದ ಬೇಡಿಕೆ ಹೆಚ್ಚಳ ಹಾಗೂ ಮೊದಲ ಹಂತದ ತರಬೇತಿ ನೀಡುವುದು ಇದರ ಪ್ರಮುಖ ಭಾಗ’ ಎಂದಿದ್ದಾರೆ.
‘ಹೃದಯಾಘಾತ, ಪಾರ್ಶ್ವವಾಯು, ಅಪಘಾತ, ಹಾವು ಕಡಿತ, ವಿಷ ಸೇವನೆ, ಉಸಿರಾಟ ತೊಂದರೆ ಹಾಗೂ ಮಕ್ಕಳ ಹಾಗೂ ಪ್ರಸೂತಿಯಂತ ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಚಿಕಿತ್ಸೆ ನೀಡಿ ಆರೋಗ್ಯ ಉಳಿಸುವ ಪ್ರಯತ್ನ ಇದಾಗಿದೆ’ ಎಂದು ತಿಳಿಸಿದ್ದಾರೆ.
ಈ ಯೋಜನೆಯ ಅನುಷ್ಠಾನದ ಹೊಣೆಯನ್ನು ಭುವನೇಶ್ವರ ಏಮ್ಸ್‌ನ ಹೆಚ್ಚುವರಿ ಪ್ರಾಧ್ಯಾಪಕ ಡಾ. ಅರವಿಂದ ಕುಮಾರ್ ಸಿಂಗ್ ಅವರಿಗೆ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.