ಅಯೋಧ್ಯೆ: ಅಯೋಧ್ಯೆ ನಗರದ ಹೃದಯಭಾಗದಲ್ಲಿರುವ ಲತಾ ಮಂಗೇಶ್ಕರ್ ಚೌಕವು ಈಗ ಪ್ರಮುಖ ಸೆಲ್ಫಿ ಪಾಯಿಂಟ್ ಆಗಿ ಮಾರ್ಪಾಡಾಗಿದೆ. ಸ್ಥಳೀಯರು ಮತ್ತು ನಗರಕ್ಕೆ ಆಗಮಿಸುತ್ತಿರುವ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.
ಸುಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥವಾಗಿ ನಿರ್ಮಿಸಿರುವ ಈ ಚೌಕದಲ್ಲಿ 14 ಟನ್ ತೂಕದ ವೀಣೆಯ ಕಲಾಕೃತಿಯನ್ನು ಸ್ಥಾಪಿಸಲಾಗಿದೆ. ಇದು ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ. ಈ ಚೌಕವು ರಾಮಪಥ ಮತ್ತು ಧರ್ಮಪಥವನ್ನು ವಿಭಾಗಿಸುತ್ತದೆ. ಜನವರಿ 22ರಂದು ರಾಮಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಚೌಕವನ್ನು ಹೂವು ಮತ್ತು ದೀಪಗಳಿಂದ ಅಲಂಕರಿಸಲಾಗಿದೆ. ರಾಮಪಥ ಮತ್ತು ಧರ್ಮಪಥ ರಸ್ತೆಗಳಿಗೂ ದೀಪಾಲಂಕಾರ ಮಾಡಲಾಗಿದೆ.
ಹೊಸ ವರ್ಷಾಚರಣೆ: ಸ್ಥಳೀಯರು ಮತ್ತು ಹತ್ತಿರದ ಪಟ್ಟಣಗಳ ನಿವಾಸಿಗಳು ಡಿಸೆಂಬರ್ 31ರಂದು ಲತಾ ಮಂಗೇಶ್ಕರ್ ಚೌಕದ ಬಳಿ ಸೇರಿ ಹೊಸ ವರ್ಷವನ್ನು ಸ್ವಾಗತಿಸಿದರು. ಆ ದಿನ ರಾತ್ರಿ 10 ಗಂಟೆಯಿಂದಲೇ ಜನರು ಚೌಕಕ್ಕೆ ಆಗಮಿಸಿ ಸೆಲ್ಫಿಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದರು.
‘ಹೊಸ ವರ್ಷ ಸಂಭ್ರಮಾಚರಣೆಗಾಗಿ ನಾವು ಲಖನೌಗೆ ಹೋಗುತ್ತಿದ್ದೆವು ಅಥವಾ ಮನೆಯಲ್ಲೇ ಆಚರಿಸುತ್ತಿದ್ದೆವು. ಈಗ ನಮ್ಮ ನಗರವೇ ಅಭಿವೃದ್ಧಿಗೊಂಡಿದೆ. ಲತಾ ಮಂಗೇಶ್ಕರ್ ಚೌಕದಂಥ ಸ್ಥಳಗಳು ಇವೆ. ಹೊಸ ವರ್ಷ ಸಂಭ್ರಮಾಚರಣೆಗಾಗಿ ಹತ್ತಿರದ ಪಟ್ಟಣಗಳಿಂದಲೂ ಜನರು ಈ ಬಾರಿ ಅಯೋಧ್ಯೆಗೆ ಬಂದಿದ್ದಾರೆ’ ಎಂದು ಸ್ಥಳೀಯರಾದ ಅಖಿಲೇಶ್ ಪಾಂಡೆ ಹೇಳಿದ್ದಾರೆ.
ಮೋದಿ ರೋಡ್ ಶೋ ಪ್ರಭಾವ: ಈ ಚೌಕಕ್ಕೆ ದಿಢೀರ್ ಖ್ಯಾತಿ ಬಂದಿದ್ದಕ್ಕೆ ಮತ್ತು ಇದು ಸೆಲ್ಫಿ ಪಾಯಿಂಟ್ ಆಗಿ ಬದಲಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30ರಂದು ನಡೆಸಿದ ರೋಡ್ ಶೋ ಕಾರಣ ಎಂದು ಇಲ್ಲಿಯ ಸ್ಥಳೀಯರು ಹೇಳುತ್ತಾರೆ.
ರೋಡ್ ಶೋ ವೇಳೆ ಮೋದಿ ಅವರು ಈ ಚೌಕದ ಬಳಿ ನಿಂತು ಚಿತ್ರ ತೆಗೆಸಿಕೊಂಡಿದ್ದರು. ಅದರ ಹಿಂದಿನ ದಿನವಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಚೌಕದಲ್ಲಿ ಸೆಲ್ಫಿ ತೆಗೆದುಕೊಂಡಿದ್ದರು. ಇದು ಸ್ಥಳೀಯರಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು ಎನ್ನಲಾಗಿದೆ.
ಲತಾ ಮಂಗೇಶ್ಕರ್ ಚೌಕವು ಅಯೋಧ್ಯೆಯ ನಯಾ ಘಾಟ್ ಬಳಿ ಇದೆ. 2022ರ ಸೆಪ್ಟೆಂಬರ್ 28ರಂದು ಲತಾ ಅವರ 93ನೇ ಜಯಂತಿ ದಿನ ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಉದ್ಘಾಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.