ADVERTISEMENT

ಜನರು ಭೇಟಿಯಾಗಲು ಗುರುತಿನ ಚೀಟಿ ಅವಶ್ಯವಿಲ್ಲ: ಕಂಗನಾಗೆ ಹಿಮಾಚಲ ಸಚಿವ ತಿರುಗೇಟು

ಕಂಗನಾ ರನೌತ್‌ ಹೇಳಿಕೆಗೆ ಹಿಮಾಚಲಪ್ರದೇಶದ ಸಚಿವ ತಿರುಗೇಟು

ಪಿಟಿಐ
Published 12 ಜುಲೈ 2024, 14:28 IST
Last Updated 12 ಜುಲೈ 2024, 14:28 IST
ಕಂಗನಾ ರನೌತ್ – ಪಿಟಿಐ ಚಿತ್ರ
ಕಂಗನಾ ರನೌತ್ – ಪಿಟಿಐ ಚಿತ್ರ   

ಶಿಮ್ಲಾ: ಮಂಡಿ ಕ್ಷೇತ್ರದ ಸಂಸದೆ ಕಂಗನಾ ರನೌತ್‌ ಅವರು ತಮ್ಮನ್ನು ಭೇಟಿಯಾಗಲು ಜನರು ಆಧಾರ್ ಕಾರ್ಡ್‌ ಜತೆ ಬರಬೇಕು ಎಂದು ನೀಡಿರುವ ಹೇಳಿಕೆಗೆ ಹಿಮಾಚಲ ಪ್ರದೇಶ ಸಚಿವ ವಿಕ್ರಮಾದಿತ್ಯ ಸಿಂಗ್ ಶುಕ್ರವಾರ ಪ್ರತಿಕ್ರಿಯಿಸಿದ್ದು, ‘ಜನಪ್ರತಿನಿಧಿಗಳು ಗುರುತಿನ ಚೀಟಿ ಹೊಂದಿಲ್ಲದ ಎಲ್ಲ ವರ್ಗದ ಜನರನ್ನು ಭೇಟಿ ಮಾಡಬೇಕು’ ಎಂದು ಹೇಳಿದ್ದಾರೆ. 

ರನೌತ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ಯ ಲೋಕೋಪಯೋಗಿ ಸಚಿವರೂ ಆದ ಸಿಂಗ್‌, ‘ನಾವು ಜನರ ಪ್ರತಿನಿಧಿಗಳು ಮತ್ತು ಎಲ್ಲಾ ವರ್ಗದ ಜನರನ್ನು ಭೇಟಿ ಮಾಡುವುದು ನಮ್ಮ ಜವಾಬ್ದಾರಿ. ಹಿಮಾಚಲ ಪ್ರದೇಶದ ಎಲ್ಲಿಂದಲಾದರೂ ಜನರು ತಮ್ಮನ್ನು ಭೇಟಿ ಮಾಡಬಹುದು’ ಎಂದು ಹೇಳಿದರು.

‘ಸಣ್ಣ–ದೊಡ್ಡ ಕೆಲಸವಾಗಲಿ, ಸರ್ಕಾರದ ನೀತಿಯ ವಿಷಯವಾಗಲಿ ಅಥವಾ ವೈಯಕ್ತಿಕ ವಿಷಯವಾಗಲಿ ಜನಪ್ರತಿನಿಧಿಗಳನ್ನು ಭೇಟಿ ಮಾಡಲು ಜನರಿಗೆ ಯಾವುದೇ ಗುರುತಿನ ಚೀಟಿಯ ಅಗತ್ಯವಿಲ್ಲ. ಯಾವುದೋ ಕೆಲಸಕ್ಕಾಗಿ ಭೇಟಿಯಾಗಲು ಬರುವ ಜನರಿಗೆ ಗುರುತಿನ ಪತ್ರ ಕೇಳುವುದು ಸರಿಯಲ್ಲ’ ಎಂದು ಅವರು ಹೇಳಿದರು.

ADVERTISEMENT

ರಾಜ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಕಾರಣ, ತನ್ನನ್ನು ಭೇಟಿಯಾಗಲು ಬರುವ ಜನರು ತಮ್ಮ ಕ್ಷೇತ್ರದವರೆಂದು ಗುರುತಿಸುವ ಆಧಾರ್ ಕಾರ್ಡ್‌ ತರಬೇಕು ಎಂದು ರನೌತ್ ಇತ್ತೀಚೆಗೆ ಹೇಳಿದ್ದರು. ಬಿಜೆಪಿ ಸಂಸದೆಯ ಈ ಹೇಳಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. 

ಮಂಡಿ ಸದರ್ ಪ್ರದೇಶದಲ್ಲಿ ಹೊಸದಾಗಿ ತೆರೆಯಲಾದ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುವಾಗ ರನೌತ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.