ADVERTISEMENT

ಕೋವಿಡ್‌ನಿಂದ ಅನಾಥರಾದ ಮಕ್ಕಳ ಗುರುತಿಸುವ ಕಾರ್ಯ ವಿಳಂಬ ಸಲ್ಲ: ಸುಪ್ರೀಂ

ಪಿಟಿಐ
Published 27 ಜುಲೈ 2021, 13:35 IST
Last Updated 27 ಜುಲೈ 2021, 13:35 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕೋವಿಡ್‌ ಪಿಡುಗಿನಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳನ್ನು ಗುರುತಿಸುವ ಕಾರ್ಯ ವಿಳಂಬವಾಗಬಾರದು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

2020ರ ಮಾರ್ಚ್‌ ನಂತರ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಸಂಖ್ಯೆಯ ಬಗ್ಗೆ ವಿವರಗಳನ್ನೊಳಗೊಂಡ ವರದಿ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತು.

ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ನ್ಯಾಯಪೀಠವು, ಈ ರೀತಿಯ ಮಕ್ಕಳನ್ನು ಗುರುತಿಸಲು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಸೂಚಿಸುವಂತೆ ನಿರ್ದೇಶನ ನೀಡಿತು.

ADVERTISEMENT

ಈ ಕಾರ್ಯಕ್ಕೆ ಪೊಲೀಸರು, ನಾಗರಿಕ ಸಮಾಜ, ಗ್ರಾಮ ಪಂಚಾಯಿತಿಗಳು, ಅಂಗನವಾಡಿಗಳು ಮತ್ತು ಆಶಾ ಕಾರ್ಯಕರ್ತರ ನೆರವನ್ನು ಪಡೆಯಲು ತಿಳಿಸಿತು.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ (ಎನ್‌ಸಿಪಿಸಿಆರ್‌) ‘ಬಾಲ ಸ್ವರಾಜ್‌ ಪೋರ್ಟಲ್‌’ನಲ್ಲಿ ಈ ಕುರಿತು ಮಾಹಿತಿಯನ್ನು ಅಪ್‌ಲೋಡ್‌ ಮಾಡುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಮುಂದುವರಿಸಬೇಕು ಎಂದು ಪೀಠ ಸೂಚಿಸಿತು.

ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ಯೋಜನೆಯಡಿ ಅಗತ್ಯವಿರುವ ಅನಾಥ ಮಕ್ಕಳಿಗೆ ₹ 2000 ಆರ್ಥಿಕ ನೆರವು ಪಾವತಿಸುತ್ತಿರುವ ಬಗ್ಗೆಗಿನ ವಿವರಗಳನ್ನು ಒದಗಿಸುವಂತೆಯೂ ಪೀಠ ರಾಜ್ಯಗಳಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಆಗಸ್ಟ್26ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.